ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆಯ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿರುವ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, “ಶೋಭಾ ಕರಂದ್ಲಾಜೆ ಎಂಪಿಯಾಗೋಕೆ ಬಂದಿದ್ದಾ? ಬೆಂಗಳೂರಿಗೆ ಬೆಂಕಿ ಹಚ್ಚೋಕೆ ಬಂದಿದ್ದಾ?” ಎಂದು ಪ್ರಶ್ನಿಸಿದ್ದಾರೆ.
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಸ್ ಟಿ ಸೋಮಶೇಖರ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಇಂದು ಹಿರಿಯ ಬಿಜೆಪಿಯ ನಾಯಕ ಬಿಎಸ್ ಯಡಿಯೂರಪ್ಪರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ ಟಿ ಸೋಮಶೇಖರ್, ನಗರ್ತಪೇಟೆ ಘಟನೆಯ ವೇಳೆ ‘ತಮಿಳುನಾಡಿನಿಂದ ಬಂದವರು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂಬ ಶೋಭಾ ಹೇಳಿಕೆಯನ್ನು ಖಂಡಿಸಿದರು.
“ನನ್ನ ವಿಧಾನಸಭಾ ಕ್ಷೇತ್ರವು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಇಲ್ಲಿ ಡಿವಿ ಸದಾನಂದಗೌಡರು ಕ್ಷೇತ್ರವನ್ನು 10 ವರ್ಷಗಳ ಕಾಲ ಸಂಸತ್ತಿನಲ್ಲಿ ಪ್ರತಿನಿಧಿಸುವ ಮೊದಲು ಡಿಬಿ ಚಂದ್ರೇಗೌಡರು ಸಂಸದರಾಗಿದ್ದರು. ತಾನು 10 ವರ್ಷಗಳಿಂದ ಶಾಸಕನಾಗಿ, ಜನರ ನಡುವೆ ಕೆಲಸ ಮಾಡುತ್ತಿದ್ದೇನೆ. ಈ ಎಲ್ಲ ಅವಧಿಯಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ, ಆದರೆ ಈ ಸಲ ಟಿಕೆಟ್ ಗಿಟ್ಟಿಸಿರುವ ಶೋಭಾ ಕರಂದ್ಲಾಜೆ, ಗೆಲ್ಲುವ ಮೊದಲೇ ಅಸಂಬದ್ಧ ಮತ್ತು ಮತೀಯ ಗಲಾಟೆಗಳಿಗೆ ಉತ್ತೇಜನ ನೀಡುವ ಹೇಳಿಕೆ ನೀಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಬೆಂಗಳೂರು ಒಂದು ಶಾಂತಿಪ್ರಿಯ ನಗರ ಎನ್ನುವುದನ್ನು ಶೋಭಾ ಕರಂದ್ಲಾಜೆ ಮನಗಾಣಬೇಕು. ಅವರ ಹೇಳಿಕೆಗಳಿಂದಾಗಿ ಖುದ್ದು ನನಗೇ ನನ್ನ ಕ್ಷೇತ್ರದಲ್ಲಿ ವಾರದಿಂದೀಚೆಗೆ ಓಡಾಡಲು ಭಯವಾಗುತ್ತಿದೆ. ಯಾವ ಸಮಯದಲ್ಲಿ ಏನು ದ್ವೇಷ ಭಾಷಣ ಮಾಡುತ್ತಾರೋ, ಯಾವ ಸಮಯದಲ್ಲಿ ನನ್ನ ವಿರುದ್ಧ ಮಾತನಾಡುತ್ತಾರೋ, ಏನು ನಡೆಯಲಿದೆಯೋ ಅನ್ನುವ ಆತಂಕ ಶುರುವಾಗಿದೆ” ಎಂದು ಎಸ್ ಟಿ ಸೋಮಶೇಖರ್ ಆತಂಖ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆ: ‘ಫ್ಯಾಕ್ಟ್ ಚೆಕ್ ಘಟಕ’ ಸ್ಥಾಪನೆಗೆ ತಡೆ
“ಸದಾನಂದ ಗೌಡರು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯವರನ್ನು ಒಂದೇ ಥರ ನೋಡಿ, ಕೆಲಸ ಮಾಡಿದ್ದಾರೆ. ಒಂದೇ ಒಂದು ಬೆಂಕಿಯುಗುಳುವಂತಹಾ ಮಾತನ್ನು ಅವರು ಈವರೆಗೆ ಆಡಿಲ್ಲ. ಡಿ ಬಿ ಚಂದ್ರೇಗೌಡರು ಕೂಡ ಆಡಿಲ್ಲ. ಶೋಭಾ ಕರಂದ್ಲಾಜೆ ಹೇಳಿಕೆಯಿಂದ ನನಗೇ ಭಯ ಶುರುವಾಗಿದೆ. ಇದು ಇದೇ ರೀತಿ ಮುಂದುವರಿದರೆ, ಖುದ್ದು ನಾನೇ ಬೆಂಗಳೂರು ಪೊಲೀಸ್ ಕಮಿಷನರ್ ಅವರಲ್ಲಿ ರಕ್ಷಣೆ ಕೇಳಬೇಕಾದ ಪರಿಸ್ಥಿತಿ ಬರಬಹುದು. ಶೋಭಾ ಕರಂದ್ಲಾಜೆ ಎಂಪಿಯಾಗೋಕೆ ಬಂದಿದ್ದಾ? ಬೆಂಗಳೂರಿಗೆ ಬೆಂಕಿ ಹಚ್ಚೋಕೆ ಬಂದಿದ್ದಾ? ಎಂದು ಎಸ್‌ಟಿ ಸೋಮಶೇಖರ್, ಕೇಂದ್ರ ಸಚಿವೆಯ ವಿರುದ್ಧವೇ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
