ಗೆಜೆಟೆಡ್ ಪ್ರೋಬೇಷನರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ 371(ಜೆ) ಅಡಿಯಲ್ಲಿ ಬಹು ಆಯ್ಕೆಯನ್ನು ಕೋರಿರುವುದು ಹಾಗೂ ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾಧಿಕಾರಿ ಗೆಜೆಟೆಡ್ ಪ್ರೋಬೇಷನರ್ಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ವಯಸ್ಸಿನ ವಿನಾಯಿತಿ ನೀಡುವಂತೆ ಕೆಪಿಸಿಸಿ ಮಾಧ್ಯಮ ವಕ್ತಾರ ಡಾ.ರಝಾಕ್ ಉಸ್ತಾದ್ ಅವರು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇಷನರ್ಸ್(ಕೆಎಎಸ್) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಸದರಿ ಹುದ್ದೆಗಳ ಆನ್-ಲೈನ್ ಅರ್ಜಿಯಲ್ಲಿ ಕಲ್ಯಾಣ ಕನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳಿಂದ 371(ಜೆ) ಮೀಸಲಾತಿ ಕೋರುವ ಸಂದರ್ಭದಲ್ಲಿ ಸರ್ಕಾರದ ಅಧಿಸೂಚನೆಯಂತೆ ನಾಲ್ಕು ಆಯ್ಕೆಗಳನ್ನು ಕೇಳಬೇಕಾಗುತ್ತದೆ. ಆದರೆ ಲೋಕಸೇವಾ ಆಯೋಗವು ಮೂರು ಆಯ್ಕೆಯನ್ನು ಮಾತ್ರ ಕೇಳಿರುವುದರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ಉತ್ತಮ ಆಯ್ಕೆಗಳಿಂದ ವಂಚಿತಗೊಳ್ಳುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ನಾಲ್ಕು ಆಯ್ಕೆಗಳನ್ನು ಕೇಳುವ ಬದಲಾಗಿ ಲೋಕಸೇವಾ ಆಯೋಗದ ಅರ್ಜಿಯಲ್ಲಿ ಮೂರು ಆಯ್ಕೆ ಮಾತ್ರ ಕೇಳುತ್ತಿರುವದರಿಂದ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳು ಮೆರಿಟ್ ಆಧಾರಿತ ಹುದ್ದೆ ಹೊಂದುವಲ್ಲಿ ಸಮಸ್ಯೆಯಾಗುತ್ತಿದೆ, ಆದ್ದರಿಂದ, ನಾಲ್ಕನೇಯ ಆಯ್ಕೆಯನ್ನು ಸಹ ಅರ್ಜಿಯಲ್ಲಿ ಸೇರಿಸಬೇಕು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ, ಬೀದರ್‌ನಲ್ಲಿ ನೆಲೆಸಿರುವ ಮರಾಠಿಗರಿಗಾಗಿ ₹2 ಕೋಟಿ ಬಿಡುಗಡೆ ಮಾಡಿದ ಮಹಾರಾಷ್ಟ್ರ ಸರ್ಕಾರ
“ಲೋಕಸೇವಾ ಆಯೋಗವು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಗ್ರೂಪ್-ಎ ಮತ್ತು ಗ್ರೂಪ್-ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಾದ ಸಹಾಯಕ ನಿಯಂತ್ರಕರು ಹಾಗೂ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದ್ದು, ಕರ್ನಾಟಕ ಸರ್ಕಾರವು ಇತ್ತೀಚೆಗೆ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಒಂದು ಬಾರಿ ಮಾತ್ರ ಮೂರು ವರ್ಷಗಳ ವಯಸ್ಸಿನ ವಿನಾಯತಿ ನೀಡಿದೆ. ಸದರಿ ವಿನಾಯತಿಯು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಗ್ರೂಪ್-ಎ ಮತ್ತು ಗ್ರೂಪ್-ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಾದ ಸಹಾಯಕ ನಿಯಂತ್ರಕರು ಹಾಗೂ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳಿಗೂ ಅನ್ವಯಿಸುತ್ತದೆ. ಆದರೆ ಲೋಕಸೇವಾ ಆಯೋಗದ ಅಧಿಸೂಚನೆಯಲ್ಲಿ ಮೂರು ವರ್ಷಗಳ ವಯಸ್ಸಿನ ವಿನಾಯತಿಯನ್ನು ನೀಡದೇ ಇರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಕಾರಣ, ಈ ನೇಮಕಾತಿಯಲ್ಲಿಯೂ ಸರ್ಕಾರದ ಸುತ್ತೋಲೆಯಂತೆ ಮೂರು ವರ್ಷಗಳವರೆಗೆ ವಯಸ್ಸಿನ ವಿನಾಯತಿ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ವರದಿ : ಹಫೀಜುಲ್ಲ
