ದಲಿತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬರುವ ಏ.14ರಂದು ʼನಮ್ಮ ಮೂಲನಿವಾಸಿ ಫೌಂಡೇಶನ್ʼ ಶುರು ಮಾಡಲಾಗುತ್ತಿದೆ ಎಂದು ಹಿರಿಯ ಚಿಂತಕರಾದ ವೈಜಿನಾಥ ಸೂರ್ಯವಂಶಿ, ವಿಠಲ್ ದಾಸ್ ಪ್ಯಾಗೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ದಲಿತ ಸಮುದಾಯದ ಸರ್ವಾಂಗೀಣ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ದಿನವೇ ಬುದ್ಧ ಬಸವ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿರ್ದಿಷ್ಟ ನೀತಿಗಳ ತಳಹದಿಯಲ್ಲಿ ಕಾರ್ಯ ಚಟುವಟಿಕೆ ನಡೆಸುವ ಘನವಾದ ಉದ್ದೇಶದಿಂದ ಈ ಸಂಸ್ಥೆ ಹುಟ್ಟು ಹಾಕಲಾಗುತ್ತಿದೆ” ಎಂದರು.
“ಏ.2 ರಿಂದ 7 ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ 6 ದಿನಗಳ ಕ್ರೀಡಾಕೂಟ ಆಯೋಜಿಸಲಾಗುವುದು. ಕುಸ್ತಿ, ಕಬಡ್ಡಿ, ಅಥ್ಲೆಟಿಕ್ಸ್, ವಾಲಿಬಾಲ್ ಹಾಗೂ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಾಗುವುದು. ಈ ಮೂಲಕ ಪ್ರಖರ ಪ್ರತಿಭೆಗಳ ಗುರುತಿಸುವ ಕಾರ್ಯ ಮಾಡುವ ಉದ್ದೇಶವಿದೆ. ಇದರ ಪ್ರಚಾರದ ಚಟುಟಿಕೆಗಳಿಗಾಗಿ ಸಂಸ್ಥೆಯ ಸಂಯೋಜಕರ ತಂಡ ರಚಿಸಿ ತಾಲೂಕಿನ ಎಲ್ಲ ಊರುಗಳಿಗೆ ಹೋಗಿ ಅಂಬೇಡ್ಕರ ಭವನ, ಬುದ್ಧ ವಿಹಾರಗಳನ್ನು ಸ್ವಚ್ಚಗೊಳಿಸುವುದು. ಬುದ್ಧ, ಬಸವ, ಅಂಬೇಡ್ಕರರ ಸದಾಶಯಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯ ಮಾಡುವ ಗುರಿಯಿದೆ” ಎಂದರು.
“ದಲಿತ ಸಮುದಾಯದ ಆರ್ಥಿಕ, ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಶಕ್ತಿ ವರ್ಧಿಸುವುದು, ವಿವಿಧ ಬಗೆಯ ಕ್ರೀಡಾಕೂಟ ಆಯೋಜಿಸಿ ಉನ್ನತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸಕಲ ರೀತಿಯಲ್ಲೂ ಬೆಂಬಲಿಸಿ ವೃತ್ತಿಪರ ಕ್ರೀಡಾಪಟು ಆಗಲು ಸಹಾಯ ಮಾಡುವುದು. ನಗರದಲ್ಲಿ ಸುಸಜ್ಜಿತ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹಾಗೂ ಕ್ರೀಡಾ ಅಕಾಡೆಮಿ ಸ್ಥಾಪಿಸಲಾಗುವುದು” ಎಂದು ಮಾಹಿತಿ ನೀಡಿದರು.
“ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ, ಶಿಷ್ಯವೇತನಗಳ ಒದಗಿಸುವುದು ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲಾಗುವುದು. ಸಮಾಜದಲ್ಲಿ ಸಮುದಾಯದ ಧ್ವನಿಯಾಗಿ ಅವರ ಹಕ್ಕುಗಳ ರಕ್ಷಣೆ ಮತ್ತು ಸಮಾನತೆಯ ಹೋರಾಟದಲ್ಲಿ ಸಹಾಯ ಮಾಡುವುದು. ಸಾಮಾಜಿಕ ನ್ಯಾಯವನ್ನು ಒದಗಿಸುವ ಪ್ರಯತ್ನ ಮಾಡುವುದು. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಹಾಗೂ ಸಂವಿಧಾನದ ಆಶಯಗಳ ಸಂಕೇತವಾದ ಸಮಾಜ ಕಟ್ಟಲು ಶ್ರಮಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯಲ್ಲಿ ತೀವ್ರ ಬರ; ನೀರಿಗಾಗಿ ತೆಲಂಗಾಣಕ್ಕೆ ಹೊರಟ ತಾಂಡಾ ಜನರು
“ಬಾಬಾ ಸಾಹೇಬ್ ಅಂಬೇಡ್ಕರ ಅವರ ಜಯಂತಿ ಉತ್ಸವವನ್ನು ಅದ್ಧೂರಿಯಿಂದ ಮೌಲ್ಯಾಧಾರಿತ, ಅರ್ಥಗರ್ಭಿತವಾಗಿ, ರಚನಾತ್ಮಕ, ಧನಾತ್ಮಕ ಹಾಗೂ ಕ್ರಿಯಾಶೀಲ ಚಟುವಟಿಕೆಗಳು ಆಯೋಜಿಸಿ ಸಮಾಜಕ್ಕೊಂದು ಸಕರಾತ್ಮಕ ಸಂದೇಶ ಕೊಡುವ ಪ್ರಯತ್ನ ನಮ್ಮದಾಗಿದೆ” ಎಂದರು.