- ಇನ್ನಿತರೆ ಉದ್ದೇಶಗಳಿಗೆ ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಳ ಮಾಡಿ
- ವಾಣಿಜ್ಯ ಉದ್ದೇಶದ ಹೋಳಿ ಹಬ್ಬಕ್ಕೆ ಕಾವೇರಿ/ಬೋರ್‌ವೆಲ್ ನೀರು ಬಳಸಬೇಡಿ
ಹೆಚ್ಚು ನೀರು ಬಳಕೆ ಮಾಡುವ ಹಾಗೂ ಜನಸಂದಣಿ ಹೆಚ್ಚಾಗಿರುವ ಹೋಟೇಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನೀರಿನ ಉಳಿತಾಯ ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಹಾಗೂ ಇನ್ನಿತರೆ ಉದ್ದೇಶಗಳಿಗಾಗಿ ಸಂಸ್ಕರಿಸಿದ ನೀರನ್ನ ಬಳಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದರು.
ಮಾರ್ಚ್ 21ರಂದು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಹೊಟೇಲ್ ಮಾಲೀಕರು ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. “ನಗರಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆಯಿದೆ. ನೀರಿನ ಉಳಿತಾಯದಿಂದ ನಿಮ್ಮ ನೀರಿನ ಬಿಲ್ ಕೂಡಾ ಉಳಿತಾಯವಾಗುತ್ತದೆ. ನೀರು ಉಚಿತ ಎನ್ನುವ ಭಾವನೆಯಿಂದ ಜನರು ಅಮೂಲ್ಯ ಸಂಪತ್ತನ್ನ ಅನಗತ್ಯವಾಗಿ ಪೋಲು ಮಾಡುತ್ತಿದ್ದಾರೆ. ಇದನ್ನ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಿದೆ” ಎಂದು ಹೇಳಿದರು.
“ಕುಡಿಯುವ ಉದ್ದೇಶಕ್ಕೆ ಹೊರತುಪಡಿಸಿ ಸಂಸ್ಕರಿಸಿದ ನೀರನ್ನ ಬಹಳಷ್ಟು ಇತರ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಬೆಂಗಳೂರು ಜಲಮಂಡಳಿ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಕೈಜೋಡಿಸಲು ಸಿದ್ದವಿದೆ. ಅಗತ್ಯವಿರುವ ಹೋಟೇಲ್‌ಗಳಿಗೆ ರಿಯಾಯಿತಿ ದರದಲ್ಲಿ ಸಂಸ್ಕರಿಸಿದ ನೀರನ್ನ ನಿಮ್ಮ ಬಾಗಿಲಿಗೆ ಕೊಡುವ ವ್ಯವಸ್ಥೆ ಮಾಡುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಜುಲೈ 1ರ ಒಳಗೆ ಬೆಂಗಳೂರಿನ ನೀರಿನ ಕೊರತೆ ನೀಗಲಿದೆ: ಜಲಮಂಡಳಿ ಅಧ್ಯಕ್ಷ
ನೀರು ಉಳಿಸುವ ಹೋಟೇಲ್ ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್
“ನೀರು ಉಳಿತಾಯ, ಮರುಬಳಕೆ ಹಾಗೂ ಅಂತರ್ಜಲ ಅಭಿವೃದ್ದಿಗೆ ಕೊಡುಗೆ ನೀಡುವಂತಹ ಹೋಟೇಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಾಗುವುದು. ಈಗಾಗಲೇ ಮಂಡಳಿಯ ಬಳಿ ನೀರು ಬಳಕೆಯ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಮುಂದಿನ ತಿಂಗಳುಗಳಲ್ಲಿ ಉಳಿತಾಯದ ಮಾಹಿತಿ ಪಡೆದುಕೊಂಡು ಸ್ಟಾರ್ ರೇಟಿಂಗ್ ನೀಡಲಾಗುವುದು” ಎಂದರು.
ಹೋಳಿ ಹಬ್ಬದ ಆಚರಣೆಗೆ ಸ್ವಾಗತ – ರೈನ್ ಡ್ಯಾನ್ಸ್ & ಪೂಲ್ ಡ್ಯಾನ್ಸ್ ನಿಷೇಧ
“ಈಗಾಗಲೇ ಸೂಚನೆ ನೀಡಿರುವಂತೆ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ನಂತರ ವಾಣಿಜ್ಯ ಉದ್ದೇಶದ ಹೋಳಿ ಆಚರಣೆಗೆ ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ ನೀರು ಬಳಸುವುದನ್ನ ನಿಷೇಧಿಸಲಾಗಿದೆ” ಎಂದು ಹೇಳಿದರು.
ಸಭೆಯಲ್ಲಿ ಸೌತ್ ಇಂಡಿಯಾ ಹೋಟೇಲ್ ಮತ್ತು ರೆಸ್ಟೊರೆಂಟ್ ಅಸೋಷಿಯೇಷನ್ ಅಧ್ಯಕ್ಷ ಚಾಮರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.