ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಗುರುವಾರ ಸಂಜೆ ಬಿಡುಗಡೆ ಮಾಡಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕರ್ನಾಟಕದ 17 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
17 ಕ್ಷೇತ್ರಗಳ ಪೈಕಿ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರ ಮಗ ಸಾಗರ್ ಖಂಡ್ರೆ ಸೇರಿದಂತೆ ಒಟ್ಟು ಐದು ಕ್ಷೇತ್ರಗಳಲ್ಲಿ ಸಚಿವರ ಮಕ್ಕಳಿಗೆ ಮಣೆ ಹಾಕಲಾಗಿದೆ.
ಬೀದರ್ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಭಗವಂತ ಖೂಬಾ ಅವರನ್ನು ಮೂರನೇ ಬಾರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಯಾರಾಗಾಲಿದ್ದಾರೆ ಎಂಬ ತೀವ್ರ ಕುತೂಹಲ ಕ್ಷೇತ್ರದಲ್ಲಿ ಜನರಲ್ಲಿ ಜೋರಾಗಿತ್ತು. ಮೊದಲಿನಿಂದಲೂ ಅವರ ಹೆಸರು ಕೇಳಿ ಬರುತ್ತಿತ್ತು, ನಿರೀಕ್ಷೆಯಂತೆ ಸಚಿವರ ಪುತ್ರನಿಗೆ ಟಿಕೆಟ್ ನೀಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.
ಬೀದರ್ ಲೋಕಸಭಾ ಕ್ಷೇತ್ರಕ್ಕೆ ಸಾಗರ್ ಖಂಡ್ರೆಯವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಕೆಲ ತಿಂಗಳ ಹಿಂದಷ್ಟೇ ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಪಕ್ಷ ಸಂಘಟನೆ ಮೂಲಕ ಜಿಲ್ಲೆಯ ವಿವಿಧ ಕಾರ್ಯಕ್ರಮ, ರಾಜಕೀಯ ಸಮಾವೇಶಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ದೂರದೃಷ್ಟಿಯಿಂದ ಸಭೆ, ಸಮಾರಂಭ, ಹಬ್ಬ, ಪಕ್ಷದ ಕಾರ್ಯಕ್ರಮದ ವೇಳೆ ಜಿಲ್ಲಾದ್ಯಂತ ಸಾಗರ್ ಖಂಡ್ರೆಯವರ ಪ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿದ್ದವು.
ಕ್ಷೇತ್ರದಿಂದ ಸ್ಪರ್ಧಿಸಲು ಹಲವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದರು, ಅಂತಿಮವಾಗಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹಾಗೂ ಸಾಗರ್ ಖಂಡ್ರೆ ಹೆಸರು ಮುಂಚೂಣಿಯಲಿತ್ತು. ಮಾ. 20 ರಂದು ಸಂಜೆ ಟಿಕೆಟ್ ಘೋಷಣೆ ಮಾಡುವ ಬಗ್ಗೆ ಪಕ್ಷದ ಮೂಲಗಳಿಂದ ತಿಳಿದು ಬಂದಿತ್ತು. ಇದರಿಂದ ಕೆಲವರು ರಾಜಶೇಖರ್ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ ಎಂದು ಸಂಭ್ರಮಿಸಿದರೆ, ಇನ್ನೂ ಹಲವರು ಸಾಗರ್ ಖಂಡ್ರೆ ಅವರಿಗೆ ಟಿಕೆಟ್ ಅಂತಿಮಗೊಂಡಿದೆ ಎಂದು ಪಟಾಕಿ ಹಚ್ಚಿ ಸಂಭ್ರಮ ಪಟ್ಟಿದ್ದರು. ಅಧಿಕೃತ ಘೋಷಣೆ ಮುನ್ನವೇ ತಮ್ಮ ತಮ್ಮ ನಾಯಕರ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ಬೆಂಬಲಿಗರು ಅಭಿನಂದನೆಗಳ ಮಹಾಪೂರವೇ ಹರಿಸಿದರು.
ಲೋಕಸಭಾ ಕ್ಷೇತ್ರದಿಂದ ಮಗನಿಗೆ ಟಿಕೆಟ್ ಕೊಡಿಸಿ ರಾಜಕೀಯ ಪ್ರವೇಶಕ್ಕೆ ಕರೆ ತರಲು ಆಲೋಚಿಸಿದ ಸಚಿವ ಈಶ್ವರ ಖಂಡ್ರೆಯವರು ಈ ಬಾರಿ ಶತಾಯಗತಾಯ ಟಿಕೆಟ್ ಪಡೆಯಲೇಬೇಕೆಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಸಚಿವರ ಪ್ರಯತ್ನಕ್ಕೆ ಒಪ್ಪಿದ ಹೈಕಮಾಂಡ್ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹುಮನಾಬಾದ್ ಅವರನ್ನು ಕೈಬಿಟ್ಟು ಸಚಿವರ ಪುತ್ರನಿಗೆ ಟಿಕೆಟ್ ಕೊಟ್ಟು ಕಣಕ್ಕಳಿಸಿದೆ. ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಕೊನೆಗೂ ಬಗೆಹರಿದಿದ್ದು, ಸಚಿವ ಈಶ್ವರ ಖಂಡ್ರೆಯವರು ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಖೂಬಾ v/s ಖಂಡ್ರೆ :
ಕಳೆದ ಲೋಕಸಭಾ ಚುನಾವಣೆಯಲ್ಲಿ ಏರ್ಪಟ್ಟ ನೇರಾ ಹಣಾಹಣಿ ಮತ್ತೆ ಕ್ಷೇತ್ರದಲ್ಲಿ ಪುನರಾವರ್ತನೆ ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಕಳೆದ ಬಾರಿ ಈಶ್ವರ ಖಂಡ್ರೆಯವರು ಹಾಲಿ ಸಂಸದ ಭಗವಂತ ಖುಬಾ ವಿರುದ್ಧ ಸ್ಪರ್ಧಿಸಿ ಸೋಲಿನ ಕಂಡಿದ್ದರು. ಇದೀಗ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ವಿರುದ್ಧ ಮತ್ತೆ ತಮ್ಮ ಮಗನಿಗೆ ಕಣಕ್ಕಿಳಿಸುವ ಮೂಲಕ ಎರಡನೇ ಬಾರಿಗೆ ಖೂಬಾ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೇಂದ್ರ ಸಚಿವ ಭಗವಂತ ಖುಬಾ ಅವರನ್ನು ಹೇಗಾದರೂ ಮಾಡಿ ಮಣಿಸಬೇಕೆಂದು ತಂತ್ರಗಾರಿಗೆ ರೂಪಿಸಿದ ಹೈಕಮಾಂಡ್ ಸಚಿವರ ಪುತ್ರನಿಗೆ ಟಿಕೆಟ್ ನೀಡಿದೆ. ಕಳೆದ ಬಾರಿ ಖೂಬಾ ವಿರುದ್ಧ ಸೋತಿದ್ದ ಈಶ್ವರ ಖಂಡ್ರೆಯವರು ಈ ಬಾರಿ ಖೂಬಾ ಅವರ ಹ್ಯಾಟ್ರಿಕ್ ಗೆಲುವಿಗೆ ಲಗಾಮು ಹಾಕಲು ಮಗನಿಗೆ ಅಖಾಡಕ್ಕೆ ತಂದಿದ್ದಾರೆ. ಕ್ಷೇತ್ರದಲ್ಲಿ ಕಳೆದ ಬಾರಿಯಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಡುವುದು ಬಹುತೇಕ ಖಚಿತವಾಗಿದೆ. ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಕಾದು ನೋಡಬೇಕಷ್ಟೇ.
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.