ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಗುರುವಾರ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿದೆ. ಇದಕ್ಕೂ ಕೆಲವೇ ಗಂಟೆಗಳ ಮುನ್ನ ಚುನಾವಣಾ ಬಾಂಡ್ ಮಾಹಿತಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಇದೇ ಪ್ರಕರಣದಲ್ಲಿ ತನ್ನ ಸಂಸ್ಥೆಯ ನಿರ್ದೇಶಕರು ಬಂಧಿತರಾದ ಬಳಿಕ ಅರಬಿಂದೋ ಫಾರ್ಮಾ ಬಿಜೆಪಿಗೆ ಬರೋಬ್ಬರಿ 30 ಕೋಟಿ ರೂಪಾಯಿ ಚುನಾವಣಾ ಬಾಂಡ್ ದೇಣಿಗೆ ನೀಡಿರುವುದು ತಿಳಿದುಬಂದಿದೆ.
ಈ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲೇ ಆರೋಪಿಯಾಗಿರುವ ಪಿ ಶರತ್ ಚಂದ್ರ ರೆಡ್ಡಿ ಅವರನ್ನು 2022ರಲ್ಲಿ ಇಡಿ ಬಂಧಿಸಿದ ಕೆಲವೇ ದಿನಗಳಲ್ಲಿ ರೆಡ್ಡಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸುಮಾರು ಐದು ಕೋಟಿ ರೂಪಾಯಿ ಚುನಾವಣಾ ಬಾಂಡ್ ದೇಣಿಗೆಯನ್ನು ನೀಡಿದ್ದಾರೆ. 2022ರ ನವೆಂಬರ್ 21 ರಂದು ಬಿಜೆಪಿಯು ಈ ಐದು ಕೋಟಿ ರೂಪಾಯಿಯ ಬಾಂಡ್ ಅನ್ನು ನಗದೀಕರಣ ಮಾಡಿದೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ -ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು
ಅದಾದ ಬಳಿಕ ಜೂನ್ 2023ರಲ್ಲಿ ಶರತ್ ಚಂದ್ರ ರೆಡ್ಡಿ ಈ ಪ್ರಕರಣದಲ್ಲಿ ಅನುಮೋದಕರಾಗಿದ್ದು, ನವೆಂಬರ್ 2023ರಲ್ಲಿ ಅರಬಿಂದೋ ಫಾರ್ಮಾ ಬಿಜೆಪಿಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿರುವ ಮಾಹಿತಿ ಈಗ ಬಯಲಾಗಿದೆ. ಒಟ್ಟಾರೆಯಾಗಿ ಬಿಜೆಪಿಯು ಈ ಪ್ರಕರಣದಲ್ಲಿ 30 ಕೋಟಿ ರೂಪಾಯಿ ದೇಣಿಗೆ ಪಡೆದಿರುವುದು ಬಹಿರಂಗವಾಗಿದೆ.
ಹೈದರಾಬಾದ್ ಮೂಲದ ಉದ್ಯಮಿ ಪಿ ಶರತ್ ಚಂದ್ರ ರೆಡ್ಡಿ ಅವರು ತಮ್ಮ ತಂದೆ ಪಿವಿ ರಾಮ್ ಪ್ರಸಾದ್ ರೆಡ್ಡಿ ಸ್ಥಾಪಿಸಿದ ಅರಬಿಂದೋ ಫಾರ್ಮಾ ಲಿಮಿಟೆಡ್‌ನ ನಿರ್ದೇಶಕರಲ್ಲಿ ಒಬ್ಬರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ 2022ರ ನವೆಂಬರ್ 10ರಂದು ಜಾರಿ ನಿರ್ದೇಶನಾಲಯ ಶರತ್ ಚಂದ್ರ ರೆಡ್ಡಿ ಅವರನ್ನು ಬಂಧಿಸಿದೆ. ಅವರ ಸಂಸ್ಥೆ ಅರಬಿಂದೋ ಫಾರ್ಮಾ ನವೆಂಬರ್ 15ರಂದು 5 ಕೋಟಿ ರೂಪಾಯಿ ಬಾಂಡ್ ಖರೀಸಿದ್ದು, ಇದನ್ನು ಬಿಜೆಪಿಗೆ ನೀಡಲಾಗಿದೆ.
ಒಟ್ಟಾಗಿ ಅರಬಿಂದೋ ಫಾರ್ಮಾ ಸಂಸ್ಥೆಯು 52 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಅನ್ನು ಖರೀದಿಸಿದ್ದು, ಈ ಪೈಕಿ 34.5 ಕೋಟಿ ರೂಪಾಯಿ ಬಿಜೆಪಿಗೆ ನೀಡಲಾಗಿದೆ. ಇಡಿ ಅಧಿಕಾರಿಗಳು ಶರತ್ ರೆಡ್ಡಿ ಅವರನ್ನು ಬಂಧಿಸುವ ಮುನ್ನ ಅರಬಿಂದೋ ಫಾರ್ಮಾ ಭಾರತ ರಾಷ್ಟ್ರ ಸಮಿತಿಗೆ (ಬಿಆರ್‌ಎಸ್) 15 ಕೋಟಿ ರೂಪಾಯಿ ಮತ್ತು ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) 2.5 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಇದನ್ನು ಓದಿದ್ದೀರಾ? ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಇಡಿಗೆ ಸಿಕ್ಕಿದು ಬರೀ 70,000 ರೂಪಾಯಿ: ಎಎಪಿ
2021-22ರಲ್ಲಿ ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರವು ಕೆಲ ತಿಂಗಳ ಕಾಲ ನೂತನ ಅಬಕಾರಿ ನೀತಿಯನ್ನು ಜಾರಿಗೊಳಿಸಿತ್ತು. ಆಗ ದೆಹಲಿಯಲ್ಲಿ ಮದ್ಯದ ಪರವಾನಗಿ ಪ್ರಕ್ರಿಯೆಯನ್ನು ಅನುಮೋದಿಸುವಲ್ಲಿ ಶರತ್ ಪಾತ್ರ ವಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ. ಇಡಿ ‘ದಕ್ಷಿಣ ಗುಂಪು’ (ಸೌತ್ ಗ್ರೂಪ್) ಎಂದು ಉಲ್ಲೇಖಿಸಿರುವ ತೆಲುಗು ರಾಜ್ಯಗಳ ಹಲವಾರು ವ್ಯಕ್ತಿಗಳಲ್ಲಿ ಶರತ್ ಮತ್ತು ಕವಿತಾ ಸೇರಿದ್ದಾರೆ.
ದಕ್ಷಿಣ ಗುಂಪು ಒಳಗೊಂಡಿರುವ ವ್ಯಕ್ತಿಗಳು ಆಮ್ ಆದ್ಮಿ ಪಕ್ಷಕ್ಕೆ ಪಕ್ಷದ ಉಸ್ತುವಾರಿ ವಹಿಸಿದ್ದ ವಿಜಯ್ ನಾಯರ್ ಮೂಲಕ ಸುಮಾರು 100 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಈ ಮೊತ್ತವನ್ನು ದೆಹಲಿಯಲ್ಲಿ ಮದ್ಯದ ವ್ಯವಹಾರದ ಮೇಲೆ ಹಿಡಿತ ಸಾಧಿಸಲು ನೀಡಲಾಗಿದೆ. ಇದೇ ಮೊತ್ತವನ್ನು ಎಎಪಿ 2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಂಡಿದೆ ಎಂದು ಇಡಿ ಆರೋಪಿಸಿದೆ.
ಮಾರ್ಚ್ 15 ರಂದು ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಭಾರತ್ ರಾಷ್ಟ್ರ ಸಮಿತಿ ಎಂಎಲ್‌ಸಿ ಕಲ್ವಕುಂಟ್ಲ ಕವಿತಾ ಅವರನ್ನು ಇಡಿ ಬಂಧಿಸಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇದೇ ಪ್ರಕರಣದಲ್ಲಿ 2023ರ ಫೆಬ್ರವರಿಯಿಂದ ಜೈಲಿನಲ್ಲಿದ್ದಾರೆ.