ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ, ಮೂತ್ರಾಲಯ ಕೊರತೆಯಿಂದ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ಪಟ್ಟಣಕ್ಕೆ ಬರುವ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಅಂದಾಜು 25 ರಿಂದ 30 ಸಾವಿರ ಜನ ಸಂಖ್ಯೆಯನ್ನು ಹೊಂದಿದ ಪಟ್ಟಣದ ವ್ಯಾಪ್ತಿಗೆ 52 ಹಳ್ಳಿಗಳು ಮತ್ತು19 ಕ್ಯಾಂಪ್‌ಗಳು ಸೇರಿರುತ್ತವೆ. ಪಟ್ಟಣ ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರ, ನೆಮ್ಮದಿ ಕೇಂದ್ರ, ಪೊಲೀಸ್ ಠಾಣೆ, ಶಾಲಾ ಕಾಲೇಜುಗಳು, ರೈತ ಸಂಪರ್ಕ ಕೇಂದ್ರ, ವಸತಿ ಶಾಲೆಗಳು ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಕಚೇರಿಗಳಿವೆ.
“ಹಳೇ ಬಸ್ ನಿಲ್ದಾಣದ ಹತ್ತಿರವಿದ್ದ ಒಂದು ಶೌಚಾಲಯವನ್ನು ರಸ್ತೆ ನಿರ್ಮಾಣ ಸಂದರ್ಭದಲ್ಲಿ ತೆರವುಗೊಳಿಸಲಾಗಿದೆ. ಹೀಗಾಗಿ ಮೂತ್ರ ವಿಸರ್ಜನೆಗೆ 1 ಕಿ ಮೀ ದೂರದ ಪೆಟ್ರೋಲ್ ಬಂಕ್ ಮತ್ತು ಹೊಸ ಬಸ್ ನಿಲ್ದಾಣದ ಹತ್ತಿರ ಬಯಲು ಜಾಗ ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
“ಬೈಕ್ ಸವಾರರು ಮತ್ತು ವಾಹನಗಳಲ್ಲಿ ತೆರಳುವವರು ಊರಿಂದ ಆಚೆಗೆ ವಾಹನ ನಿಲ್ಲಿಸಿ ನಿಸರ್ಗದ ಕರೆಗೆ ಓಗೊಡುತ್ತಾರೆ. ಪುರುಷರು ಎಲ್ಲೆಂದರಲ್ಲಿ ಚರಂಡಿ ಹತ್ತಿರ ಅಥವಾ ಗೋಡೆ ಮರೆಯಲ್ಲಿ ನಿಂತು ಮೂತ್ರ ಮಾಡುತ್ತಾರೆ. ಆದರೆ, ಹಳ್ಳಿಗಳಿಂದ ಬರುವ ಮಹಿಳೆಯರು, ಮಕ್ಕಳು, ರೋಗಿಗಳು ಮೂತ್ರ ವಿಸರ್ಜನೆಗೆ ಬಯಲು ಜಾಗ ಹುಡುಕಿಕೊಂಡು ಓಣಿಯ ಸಂಧಿಗೊಂದಿಗಳಲ್ಲಿ ಹೋಗುವಂತಾಗಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಈಶ್ವರಪ್ಪ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹ
“ಹಲವು ಸಂಘ ಸಂಸ್ಥೆಗಳು ಮತ್ತು ಸ್ಥಳೀಯ ಮುಖಂಡರು ಶೌಚಾಲಯ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಥಳೀಯ ಆಡಳಿತ ಹಾಗೂ ಜನ ಪ್ರತಿನಿಧಿಗಳು ಈವರೆಗೂ ಸ್ಪಂದಿಸಿಲ್ಲ” ಎಂದು ಆರೋಪಿಸಿದರು.