ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಮೂರು ಉಪವಿಭಾಗಗಳ ವ್ಯಾಪ್ತಿಯ ಪೊಲೀಸರು 234 ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿ, ತಪಾಸಣೆ ಮಾಡಿದ್ದಾರೆ.
ಜಯನಗರ, ಬನಶಂಕರಿ, ಚೆನ್ನಮ್ಮನ ಅಚ್ಚುಕಟ್ಟು, ಕುಮಾರಸ್ವಾಮಿ ಲೇಔಟ್ ಸೇರಿದಂತೆ ದಕ್ಷಿಣ ವಲಯದ ನಾನಾ ಪೊಲೀಸ್ ಠಾಣಾ ವ್ಯಾಪ್ತಿಗಳ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದಾರೆ. ಸುಬ್ರಹ್ಮಣ್ಯಪುರ ಉಪವಿಭಾಗದ ವ್ಯಾಪ್ತಿಯಲ್ಲಿ 125, ವಿವಿ ಪುರಂ ವ್ಯಾಪ್ತಿಯಲ್ಲಿ 76, ಜಯನಗರ ವ್ಯಾಪ್ತಿಯಲ್ಲಿ 33 ಮನೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಪೊಲೀಸ್ ದಾಳಿ ವೇಳೆ, 177 ರೌಡಿಗಳು ಮನೆಯಲ್ಲಿರಲಿಲ್ಲ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಎಂಟು ರೌಡಿಗಳ ಮನೆಗಳಲ್ಲೂ ತಪಾಸಣೆ ನಡೆಸಲಾಗಿದೆ. ಗುರುವಾರ ಮುಂಜಾನೆ ನಗರ ಪೊಲೀಸರು ದಾಳಿ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿನ ಸಮಸ್ಯೆ : ಬೇಸಿಗೆ ಮುಗಿಯುವವರೆಗೂ ಕಟ್ಟಡ ಪ್ರದೇಶದ ಕೊಳವೆಬಾವಿಗಳು ಜಲಮಂಡಳಿ ಸುಪರ್ದಿಗೆ
ಪೊಲೀಸ್ ದಾಳಿ ವೇಳೆ, ಯಾರ ಮನೆಯಲ್ಲಿಯೂ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.