ಸಾಮಾಜಿಕ ಜಾಲತಾಣದ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನು ಶ್ರೀನಿವಾಸ್ ಗೌಡ ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪದ ಮೇಲೆ ಅವರ ಬಂಧನವಾಗಿದೆ. ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಸೋನು ಗೌಡ ಅವರನ್ನು ಮಾರ್ಚ್ 22ರಂದು ನ್ಯಾಯಾಧೀಶರ ಮುಂದೆ ಹಾಜರಿಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 4 ದಿನಗಳ ಕಾಲ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಸಿಜೆಎಂ ಕೋರ್ಟ್ ಆದೇಶ ನೀಡಿದೆ.
ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪದ ಮೇಲೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿಂದಲೇ ಪೊಲೀಸರು ಸೋನು ಗೌಡ ಅವರನ್ನು ಮಾರ್ಚ್ 22ರಂದು ಬೆಳಿಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೇ ದಿನ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಸಿಜೆಎಂ ಕೋರ್ಟ್ ಮಾರ್ಚ್ 25ರವರೆಗೆ ಸೋನುಗೌಡ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಇಂದಿನಿಂದ ನಾಲ್ಕು ದಿನಗಳವರೆಗೂ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಬಾಲಕಿ ಪರಿಚಯವಾಗಿದ್ದ ಸ್ಥಳ, ಬಾಲಕಿಯ ನಿವಾಸ ಸೇರಿ ಹಲವು ಕಡೆಗಳಿಗೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೇ, ರಾಯಚೂರಿಗೆ ಕರೆದೊಯ್ದು ಪೊಲೀಸರು ತನಿಖೆ ನಡೆಸಲಿದ್ದಾರೆ. ಮತ್ತೆ, ಮಾರ್ಚ್ 25ರಂದು ಸೋನು ಶ್ರೀನಿವಾಸ್ ಗೌಡ ಅವರನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಕೋರ್ಟ್ಗೆ ಹಾಜರುಪಡಿಸಬೇಕಿದೆ.
ಸದ್ಯ ಸೋನುಗೌಡ ವಿಚಾರಣೆ ನಡೆಸುತ್ತಿರುವ ಪೊಲೀಸರು, ರಾತ್ರಿ ಸಮಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಅವರನ್ನು ಇರಿಸಿ, ಮಾರ್ಚ್ 23 ರಂದು ಬೆಳಿಗ್ಗೆ ಠಾಣೆಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಐಪಿಎಲ್ ಪಂದ್ಯ: ರಾತ್ರಿ 11.30ರವರೆಗೆ ಮೆಟ್ರೋ ರೈಲು ಸಂಚಾರ ವಿಸ್ತರಣೆ
ಏನಿದು ಪ್ರಕರಣ?
ಸೋನು ಶ್ರೀನಿವಾಸ್ ಗೌಡ ಅಕ್ರಮವಾಗಿ 8 ವರ್ಷದ ಮಗುವನ್ನು ಇಟ್ಟುಕೊಂಡಿದ್ದಾರೆ. ಅಲ್ಲದೇ ಆ ಮಗುವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಯಾವುದೇ ಕಾನೂನಿನ ನಿಯಮಗಳನ್ನು ಪಾಲಿಸದೇ ಈ ರೀತಿ ಮಾಡುವುದು ಅಪರಾಧ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ದಾಖಲಿಸಿದ್ದಾರೆ.
ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸೋನು ಶ್ರೀನಿವಾಸ್ ಗೌಡ ಅವರನ್ನು ಮಾರ್ಚ್ 22ರಂದು ಬಂಧಿಸಿದ್ದಾರೆ.
ಸೋನು ಗೌಡ ಬಾಲಕಿಯ ಜೊತೆಗೆ ತೆಗೆದುಕೊಂಡ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.