ರಾಜ್ಯಾದ್ಯಂತ ಸರ್ಕಾರ ಪಡಿತರ ಖಾತರಿ ಯೋಜನೆಯಡಿ ಪಡಿತರ ವಿತರಣೆ ಕಾರ್ಯ ನಿರ್ವಹಿಸುತ್ತಿರುವ ನ್ಯಾಯ ಬೆಲೆ ಅಂಗಡಿಗಳು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ನಿಯಮ ಮೀರಿ ಪಡಿತರ ವಿತರಣೆಗೆ ಮುಂದಾಗಿರುವ ನ್ಯಾಯ ಬೆಲೆ ಅಂಗಡಿಗಳು ತಡವಾಗಿ ಬಂದವರಿಗೆ ಪಡಿತರ ವಿತರಣೆ ಮಾಡದೆ, ಬಡವರ ಅನ್ನಕ್ಕೆ ಕನ್ನ ಹಾಕುತ್ತಿವೆ. ಹೀಗಾಗಿ ಬಡವರು, ಕೂಲಿ ಕಾರ್ಮಿಕರು ಬಿಸಿಲನ್ನು ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು ಪಡಿತರ ಪಡೆಯುವ ದುಸ್ಥಿತಿ ಎದುರಿಸುತ್ತಿದ್ದಾರೆ.
ಹೌದು, ನಿಯಮದ ಪ್ರಕಾರ ನ್ಯಾಯ ಬೆಲೆ ಅಂಗಡಿಗಳು ವಾರದಲ್ಲಿ ಮಂಗಳವಾರ ಮತ್ತು ಸರ್ಕಾರಿ ರಜೆ ದಿನವನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಬೆಳಗ್ಗೆ 7 ರಿಂದ 12ಗಂಟೆ ಮತ್ತು ಮದ್ಯಾಹ್ನ 4 ರಿಂದ 8 ಗಂಟೆವರೆಗೂ ಪಡಿತರ ವಿತರಣೆ ಮಾಡಬೇಕು. ಆದರೆ, ಈ ನಿಯಮವನ್ನು ಉಲ್ಲಂಘಿಸುತ್ತಿರುವ ಪಡಿತರ ವಿತರಣಾ ಕೇಂದ್ರಗಳು (ನ್ಯಾಯ ಬೆಲೆ ಅಂಗಡಿಗಳು) ಬೇಕಾಬಿಟ್ಟಿ ವಿತರಣೆಗೆ ಮುಂದಾಗಿವೆ.
ನ್ಯಾಯ ಬೆಲೆ ಅಂಗಡಿಗಳು ಈ ಸಮಯದ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ವಂಚಿಸುತ್ತಿವೆ. ನ್ಯಾಯ ಬೆಲೆ ಅಂಗಡಿ ಮಾಲೀಕರು, ವಿತರಕರು ಅವರಿಗೆ ಬೇಕಾದ ಸಮಯದಲ್ಲಿ (ತಿಂಗಳಿಗೆ ಎರಡು ಅಥವಾ ಮೂರು ದಿನಗಳು) ಮಾತ್ರ ಪಡಿತರ ವಿತರಣೆ ಮಾಡುತ್ತಿದ್ದಾರೆ.
ತಡವಾಗಿ ಬಂದವರಿಗೆ ಪಡಿತರ ಕಟ್
ಅನಿವಾರ್ಯ ಕಾರಣ ಯಾರಾದರೂ ತಡವಾಗಿ ಬಂದರೆ ಅಂತವರಿಗೆ ಆ ತಿಂಗಳ ಪಡಿತರ ಇಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಬಡ ವರ್ಗದ ರೈತರು, ಕೂಲಿ ಕಾರ್ಮಿಕರು ಪಡಿತರ ವಂಚಿತರಾಗುತ್ತಿದ್ದು, ನ್ಯಾಯ ಬೆಲೆ ಅಂಗಡಿಗಳು ಪಡಿತರ ವಿತರಣೆಯಲ್ಲಿ ದೋಖಾ ಮಾಡುತ್ತಿವೆ. ಬಡವರ ಅನ್ನಕ್ಕೆ ಕನ್ನ ಹಾಕಲು ಮುಂದಾಗಿವೆ.
ನ್ಯಾಯ ಬೆಲೆ ಅಂಗಡಿಗಳು ಸರಕಾರದ ನಿಯಮದಂತೆ ಕರ್ತವ್ಯ ನಿರ್ವಹಿಸುತ್ತಿಲ್ಲ. ರೈತರು, ಬಡವರು ಮತ್ತು ಕೂಲಿ ಕಾರ್ಮಿಕರು ಸರದಿ ಸಾಲಿನಲ್ಲಿ ನಿಂತು ಪರದಾಡುವ ಸ್ಥಿತಿ ತಂದೊಡ್ಡಿದ್ದಾರೆ. ತಡವಾಗಿ ಬಂದವರಿಗೆ ಅಕ್ಕಿ ಕೊಡದೆ ಇಲ್ಲ ಎಂದು ಹೇಳಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸರಕಾರ, ಇಲಾಖೆ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಯುವ ಸಂಚಲನ ರಾಜ್ಯಾಧ್ಯಕ್ಷ ಚಿದಾನಂದ್ ಆಗ್ರಹಿಸಿದ್ದಾರೆ.
ಕೇವಲ ಒಂದು ದಿನ ಮಾತ್ರ ಅಕ್ಕಿ ಕೊಡ್ತಾರೆ. ಬೆಳಗ್ಗೆ 7 ಗಂಟೆಯಿಂದ ಸಾಲಿನಲ್ಲಿ ನಿಂತರೆ ಮಧ್ಯಾಹ್ನ 3 ಗಂಟೆಗೆ ಪಡಿತರ ಸಿಗುತ್ತದೆ. ತಡವಾದರೆ ಸರ್ವರ್ ಸಮಸ್ಯೆ, ಅಕ್ಕಿ ಮುಗಿದಿದೆ ಎಂದು ಇಲ್ಲಸಲ್ಲದ ಸಬೂಬು ಹೇಳಿ ಜನರನ್ನು ಮನೆಗೆ ಕಳಿಸುತ್ತಾರೆ ಎನ್ನುತ್ತಾರೆ ದೊಡ್ಡಬಳ್ಳಾಪುರದ ನಿವಾಸಿ ಶಭಾನ.
ಒಟ್ಟಾರೆಯಾಗಿ ಪಡಿತರ ವಿತರಣೆ ಸಮಯದಲ್ಲಿ ನಿಯಮ ಉಲ್ಲಘನೆಯಾಗುತ್ತಿರುವುದು ಒಂದೆಡೆಯಾದರೆ, ತಡವಾಗಿ ಬಂದವರಿಗೆ ಪಡಿತರ ವಿತರಣೆ ಮಾಡದೇ ಖಾಲಿ ಎಂದು ನೆಪ ಹೇಳಿ ಬಡವರ ಅನ್ನಕ್ಕೆ ಕನ್ನ ಹಾಕುತ್ತಿರುವುದು ಮತ್ತೊಂದೆಡೆಗಿನ ಗಂಭೀರ ಸಮಸ್ಯೆ. ಈ ಬಗ್ಗೆ ಇಲಾಖೆ ಶೀಘ್ರವೇ ಎಚ್ಚೆತ್ತು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಪ್ರಜ್ಞಾವಂತ ಸಮಾಜದ ಆಗ್ರಹವಾಗಿದೆ.