ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ನಾನಾ ರಾಜ್ಯಗಳಲ್ಲಿ ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಬಿಜೆಪಿ ಸೀಟು ಹಂಚಿಕೆಯ ಕಸರತ್ತು ನಡೆಸುತ್ತಿದೆ. ಒಡಿಶಾದಲ್ಲಿ ಬಿಜೆಡಿ ಜೊತಿನ ಮೈತ್ರಿಯನ್ನು ಕಡಿತಗೊಳಿಸಿರುವ ಬಿಜೆಪಿ, ಏಕಾಂಗಿ ಸ್ಪರ್ಧೆಗೆ ಮುಂದಾಗಿದೆ. ಅದರೆ, ಆ ರಾಜ್ಯದಲ್ಲಿ ಪ್ರಚಾರಕ್ಕೆ ಸ್ಥಳೀಯ ಪಾಪುಲರ್ ಮುಖಗಳ ಕೊರತೆ ಪಕ್ಷವನ್ನು ಕಾಡುತ್ತಿದೆ.
ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಕೋರಾಪುಟ್ ಕ್ಷೇತ್ರವು ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಆದರೆ, ಈ ಕ್ಷೇತ್ರದಲ್ಲಿಯೇ ಬಿಜೆಪಿಗೆ ಪ್ರಬಲ ಮುಖಗಳಿಲಲ್ಲ. ಸದ್ಯ, ಈ ಕ್ಷೇತ್ರದಿಂದ ಸ್ಪರ್ಧಿಸಲು ಮೂವರು ಬಿಜೆಪಿ ಮುಖಂಡರು – ಸಿಬಾ ಶಂಕರ್ ಉಲಕ, ಕಲಿರಾಮ್ ಮಾಝಿ ಮತ್ತು ಭಾಗಬನ್ ಮುದುಲಿ – ಅಕಾಂಕ್ಷಿಗಳಾಗಿದ್ದಾರೆ. ಆದರೆ, ಅವರ ಹೆಸರುಗಳು ಮತದಾರರಿಗೆ ತಿಳಿದೇ ಇಲ್ಲ ಎಂಬುದು ಗಮನಾರ್ಹ.
ಉಲಕ ಅವರು 2014ರಲ್ಲಿ ಕೋರಾಪುಟ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಕೇವಲ 89,788 ಮತಗಳನ್ನು ಪಡೆದು ಹೀನಾಯ ಸೋಲುಂಡಿದ್ದರು. 2019ರ ವಿಧಾನಸಭಾ ಚುನಾವಣೆಯಲ್ಲಿಯೂ ಅದೇ ಕ್ಷೇತ್ರದ ಭಾಗವಾಗಿರುವ ಬಿಸ್ಸಾಮಕಟ್ಟಕ್ ಕ್ಷೇತ್ರದಲ್ಲಿ ಸ್ಪರ್ಧಿಸಿ, ಮೂರನೇ ಸ್ಥಾನ ಗಳಿಸಿದ್ದರು.
ಮಾಝಿ ಅವರು ಪ್ರಸ್ತುತ ಎಸ್‌ಟಿ ಬಿಜೆಪಿ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಅವರು ರಾಯಗಡ ಜಿಲ್ಲೆಯವರಾಗಿದ್ದು, ಇತ್ತೀಚೆಗೆ ಪಕ್ಷದ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಮತದಾರರಿಗೆ ಸೀಮಿತ ಪರಿಚಯವಿದೆ. ಅದೇ ರೀತಿ, ಲಕ್ಷ್ಮೀಪುರದ ಜಿಲ್ಲಾ ಸರಪಂಚ ಸಂಘದ ಮಾಜಿ ಅಧ್ಯಕ್ಷ ಭಗಬನ್ ಮುದುಳಿ ಅವರು ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸಲು ಹೆಣಗಾಡುತ್ತಿದ್ದಾರೆ.
ಒಡಿಶಾದ ರಾಯಗಡ, ಬಿಸ್ಸಾಮಕಟ್ಟಕ್, ಗುಣಪುರ್, ಕೊರಾಪುಟ್, ಲಕ್ಷ್ಮೀಪುರ, ಪೊಟ್ಟಂಗಿ ಮತ್ತು ಜೇಪೋರ್ ಕ್ಷೇತ್ರಗಳಲ್ಲಿ ಈ ಮೂವರು ನಾಯಕರಿಗೆ ತಳಮಟ್ಟದ ಸಂಪರ್ಕವೇ ಇಲ್ಲ. ಹೀಗಾಗಿ, ಪ್ರಾದೇಶಕ ನಾಯಕತ್ವದ ಕೊರತೆಯಿಂದ ಬಿಜೆಪಿ ಹೆಣಗಾಡುತ್ತಿದೆ.
ರಾಜಕೀಯ ವೀಕ್ಷಕ ಕೀರ್ತಿ ಚಂದ್ರ ಸಾಹು ಪ್ರಕಾರ, ಬಿಜೆಪಿಯ ಎಲ್ಲ ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮತ್ತು ಪಕ್ಷದ ಚಿಹ್ನೆಯ ಗುರುತಿನಲ್ಲಿ ಚುನಾವಣೆ ಎದುರಿಸಬೇಕಾಗಿದೆ. ಯಾವ ಆಕಾಂಕ್ಷಿಗಳಿಗೂ ಜನರೊಂದಿಗೆ ನೇರ ಸಂಪರ್ಕವೇ ಇಲ್ಲ.