ಚುನಾವಣಾ ಬಾಂಡ್ಗೆ ಸಂಬಂಧಿಸಿದ ಉಳಿದ ಮಾಹಿತಿಯನ್ನು ಎಸ್ಬಿಐ ಒದಗಿಸಿದ ಬಳಿಕ, ಅದನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಹೊಸ ಅಂಕಿಅಂಶಗಳ ಪ್ರಕಾರ, 2019ರ ಏಪ್ರಿಲ್ನಿಂದ 2014ರ ಫೆಬ್ರವರಿ ನಡುವೆ, ಬಿಜೆಪಿ 6,060 ಕೋಟಿ ದೇಣಿಗೆ ಪಡೆದಿದ್ದರೆ, ಕಾಂಗ್ರೆಸ್ 1,421 ಕೋಟಿ ದೇಣಿಗೆ ಪಡೆದಿದೆ.
ಕಾಂಗ್ರೆಸ್ಗೆ ದೇಣಿಗೆ ನೀಡಿದವರಲ್ಲಿ ಕೆಲವು ಕಂಪನಿಗಳು ಹೆಚ್ಚಿನ ಪಾಲು ಹೊಂದಿವೆ:
1. ಎಂಇಐಎಲ್ ಗ್ರೂಪ್: 158 ಕೋಟಿ ರೂ.
2. ಎಂಕೆಜೆ ಎಂಟರ್ಪ್ರೈಸಸ್: 121 ಕೋಟಿ ರೂ. (ಈ ಕಂಪನಿಯ ಭಾಗವಾಗಿಯೇ ಕೆವೆಂಟರ್ ಫುಡ್ಪಾರ್ಕ್ ಲಿಮಿಟೆಡ್ 20 ಕೋಟಿ ರೂ. ಮತ್ತು ಮದನ್ಲಾಲ್ ಲಿಮಿಟೆಡ್ 10 ಕೋಟಿ ರೂ. ದೇಣಿಗೆ ನೀಡಿವೆ)
3. ವೇದಾಂತ ಲಿಮಿಟೆಡ್: 104 ಕೋಟಿ ರೂ.
4. ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 64 ಕೋಟಿ ರೂ.
5. ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸ್: 50 ಕೋಟಿ ರೂ.
ಕುತೂಹಲಕಾರಿಯಾಗಿ, ಕಾಂಗ್ರೆಸ್ಗೆ ಹೆಚ್ಚು ದೇಣಿಗೆ ನೀಡಿದ ದಾನಿಯೇ, ಬಿಜೆಪಿಗೂ ಅತೀ ಹೆಚ್ಚು ದೇಣಿಗೆ ನೀಡಿದೆ. ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಗ್ರೂಪ್ ಕಾಂಗ್ರೆಸ್ ಒಟ್ಟು 158 ಕೋಟಿ ರೂ. ನೀಡಿದೆ.
ಇದರಲ್ಲಿ, ಎಂಇಐಎಲ್ ಕಂಪನಿಯ ಅಂಗಸಂಸ್ಥೆಯಾಗಿರುವ ವೆಸ್ಟರ್ನ್ ಯುಪಿ ಪವರ್ ಲಿಮಿಟೆಡ್ – ಕಾಂಗ್ರೆಸ್ಗೆ 110 ಕೋಟಿ ರೂ. ನೀಡಿದೆ. ಮತ್ತೊಂದು ಸಂಬಂಧಿತ ಕಂಪನಿ ಎಸ್ಇಪಿಸಿ ಪವರ್ 18 ಕೋಟಿ ರೂ. ನೀಡಿದೆ. ಎಂಇಐಎಲ್ ಕೂಡ 18 ಕೋಟಿ ರೂ.ಗಳನ್ನು ನೇರವಾಗಿ ನೀಡಿದೆ.
ಅಂದಹಾಗೆ, ಇದೇ ಗುಂಪು ಬಿಜೆಪಿಗೆ 696 ಕೋಟಿ ರೂ. ದೇಣಿಗೆ ನೀಡಿದೆ. ಈ ಗುಂಪಿನ ಬಹುಪಾಲು ಮೊತ್ತವು ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನಿಂದಲೇ ಬಂದಿದೆ. ಕಡಿಮೆ ಹಣ ವೆಸ್ಟರ್ನ್ ಯುಪಿ ಪವರ್ ಲಿಮಿಟೆಡ್ನಿಂದ ಬಂದಿದೆ.
ಇತರ ಹೆಸರಾಂತ ಹೆಸರುಗಳ ಪೈಕಿ, ಹಲ್ದಿಯಾ ಎನರ್ಜಿ ಲಿಮಿಟೆಡ್ 15 ಕೋಟಿ ರೂ., ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ 20 ಕೋಟಿ ರೂ., ಟೊರೆಂಟ್ ಗ್ರೂಪ್ 22 ಕೋಟಿ ರೂ.ಗಳನ್ನು ಕಾಂಗ್ರೆಸ್ಗೆ ನೀಡಿವೆ.
ಪ್ರಾಸಂಗಿಕವಾಗಿ, ಚುನಾವಣಾ ಬಾಂಡ್ಗಳಿಗೆ ಬಂದಾಗ ಬಿಜೆಪಿಗೆ ಹೆಚ್ಚು ದೇಣಿಗೆ ನೀಡಿರುವ ಅಗ್ರ ದಾನಿಗಳಲ್ಲಿ ಎಂಇಐಎಲ್, ಎಂಕೆಜೆ ಗ್ರೂಪ್, ವೇದಾಂತ, ಟೊರೆಂಟ್ ಮತ್ತು ಫ್ಯೂಚರ್ ಗೇಮಿಂಗ್ ಕಂಪನಿಗಳೇ ಇವೆ.
ಕಾಂಗ್ರೆಸ್ಗೆ ಗಣನೀಯ ಪ್ರಮಾಣದಲ್ಲಿ ದೇಣಿಗೆ ನೀಡಿದ ಇತರ ಕೆಲವು ನಿಗಮಗಳು:
ಕ್ಯಾಮೆಲಿಯಾ ಗೃಹ ನಿರ್ಮಾಣ್ ಪ್ರೈವೇಟ್ ಲಿಮಿಟೆಡ್ (55 ಕೋಟಿ ರೂ.), ಸಿಗ್ನಸ್ ಪವರ್ ಇನ್ಫ್ರಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (55 ಕೋಟಿ ರೂ.), ಏವೀಸ್ ಟ್ರೇಡಿಂಗ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ (53 ಕೋಟಿ ರೂ.) ಮತ್ತು ದಸಮಿ ಲ್ಯಾಬ್ ಪ್ರೈವೇಟ್ ಲಿಮಿಟೆಡ್ (50 ಕೋಟಿ ರೂ.).
ಬಯೋಕಾನ್ನ ಅಧ್ಯಕ್ಷೆ, ಸಂಸ್ಥಾಪಕಿ ಮತ್ತು ಹೆಸರಾಂತ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಕಾಂಗ್ರೆಸ್ಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಜೊತೆಗೆ ಬಿಜೆಪಿಗೂ ಕೂಡ ದೇಣಿಗೆ ನೀಡಿದ್ದಾರೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | 2019ರ ಏಪ್ರಿಲ್ಗೂ ಮೊದಲು 66% ದೇಣಿಗೆ ಬಿಜೆಪಿ ಪಾಲಾಗಿದೆ; ಹೊಸ ಡೇಟಾ!
ಕಾಂಗ್ರೆಸ್ನ ಪಡೆದ ಮೊತ್ತದಲ್ಲಿ ಹೆಚ್ಚಿನ ಬಾಂಡ್ಗಳನ್ನು ಚುನಾವಣೆ ಸಮಯದಲ್ಲಿ ಪಡೆದಿದೆ. 2023ರ ಏಪ್ರಿಲ್ನಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದದಲ್ಲಿ ಬಿಜೆಪಿ 334.2 ಕೋಟಿ ರೂ. ಪಡೆದಿದ್ದರೆ, ಕಾಂಗ್ರೆಸ್ 190.6 ಕೋಟಿ ರೂ.ಗಳನ್ನು ಪಡೆದುಕೊಂಡಿದೆ.
ಅಲ್ಲದೆ, 2019ರಲ್ಲಿ ಚುನಾವಣಾ ಬಾಂಡ್ಗಳ ಮೂಲಕ ಕಾಂಗ್ರೆಸ್ 622 ಕೋಟಿ ರೂ.ಗಳನ್ನು ಪಡೆದಿತ್ತು. ಅದರಲ್ಲಿ, ಸುಮಾರು 85% ಲೋಕಸಭೆ ಚುನಾವಣೆ ಸಮಯದಲ್ಲಿಯೇ ಪಡೆದಿತ್ತು ಎಂಬುದು ಗಮನಾರ್ಹ.
ಅಂತೆಯೇ, ಬಿಜೆಪಿ ಕೂಡ ಲೋಕಸಭಾ ಚುನಾವಣೆ ನಡೆದ 2019ರ ಏಪ್ರಿಲ್ ಆಸುಪಾಸಿನಲ್ಲಿ 2,600 ಕೋಟಿ ರೂ.ಗೂ ಅಧಿಕ ಹಣವನ್ನು ಬಿಜೆಪಿ ಪಡೆದುಕೊಂಡಿದೆ.
ಬಿಜೆಪಿಗೆ ಹಣ ನೀಡಿದ್ದ ಹಲವಾರು ಕಂಪನಿಗಳು ಚುನಾವಣಾ ಬಾಂಡ್ ಖರೀದಿಸಿದ ಬಳಿಕ ನಾನಾ ಸೌಲಭ್ಯಗಳು ಅಥವಾ ಯೋಜನೆಗಳ ಗುತ್ತಿಗೆಗಳನ್ನು ಪಡೆದುಕೊಂಡಿವೆ. ಇನ್ನೂ ಕೆಲವು ಕಂಪನಿಗಳು ತಮ್ಮ ವಿರುದ್ಧ ಇಡಿ/ಐಟಿ ದಾಳಿ ನಡೆದ ಬಳಿಕ, ತನಿಖೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಹಫ್ತಾ ನೀಡಿವೆ.