Iರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಆ ಆರು ಮಂದಿ ಮಾಜಿ ಶಾಸಕರು ಮತ್ತು ಈ ಹಿಂದೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಮೂವರು ಸ್ವತಂತ್ರ ಶಾಸಕರು ಬಿಜೆಪಿ ಸೇರಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಬಿಂದಾಲ್ ಸಮ್ಮಖದಲ್ಲಿ ಈ 9 ಮಂದಿ ಬಿಜೆಪಿಗೆ ಸೇರಿದ್ದಾರೆ. ಮಾಜಿ ಶಾಸಕರು ಮತ್ತು ಸ್ವತಂತ್ರರನ್ನು ಪಕ್ಷಕ್ಕೆ ಸ್ವಾಗತಿಸಿದ ಅನುರಾಗ್ ಠಾಕೂರ್, “ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಅನರ್ಹಗೊಳಿಸಿದ್ದ ಸುಧೀರ್ ಶರ್ಮಾ, ರವಿ ಠಾಕೂರ್, ರಾಜಿಂದರ್ ರಾಣಾ, ಇಂದರ್ ದತ್ ಲಖನ್‌ಪಾಲ್, ಚೆತನ್ಯ ಶರ್ಮಾ ಮತ್ತು ದೇವಿಂದರ್ ಕುಮಾರ್ ಭುಟ್ಟೊ ಬಿಜೆಪಿ ಸೇರಿದ್ದಾರೆ.
ಈ ಆರು ಮಂದಿ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದೆ, ಅಡ್ಡ ಮತದಾನ ಮಾಡಿದ ಪರಿಣಾಮ, ಕಾಂಗ್ರೆಸ್ ಅಭ್ಯರ್ಥಿ ಸೋಲುಂಡಿದ್ದು, ಬಿಜೆಪಿ ಗೆಲುವು ಸಾಧಿಸಿದೆ. ನಿರ್ಣಾಯಕ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸದ ಅವರನ್ನು ಶಾಸಕ ಸ್ಥಾನದಿಂದ ಕಾಂಗ್ರೆಸ್ ಅನರ್ಹಗೊಳಿಸಿತ್ತು. ಅಲ್ಲದೆ, ಪಕ್ಷದಿಂದ ಹೊರಹಾಕಿತ್ತು.
ಇನ್ನು, ಆಶಿಶ್ ಶರ್ಮಾ, ಹೋಶಿಯಾರ್ ಸಿಂಗ್ ಮತ್ತು ಕೆಎಲ್ ಠಾಕೂರ್ ಬಿಜೆಪಿಗೆ ಸೇರ್ಪಡೆಯಾದ ಮೂವರು ಸ್ವತಂತ್ರ ಶಾಸಕರು.