“ದೇಶದಲ್ಲಿಯೇ ಜಿಲ್ಲಾ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಮಹಿಳಾ ನೇಮಕಾತಿ ವಿಚಾರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು, ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುತ್ತಿದೆ” ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಚಂದ್ರಚೂಡ್ ಶ್ಲಾಘಿಸಿದ್ದಾರೆ.
ಬೆಂಗಳೂರಿನ ಜಿಕೆವಿಕೆಯಲ್ಲಿನ ಬಾಬು ರಾಜೇಂದ್ರ ಪ್ರಸಾದ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ 21ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
“ದೇಶಾದ್ಯಂತ ಜಿಲ್ಲಾ ನ್ಯಾಯಾಂಗದಲ್ಲಿ ಮಹಿಳೆಯರ ಬಲವು ಶೇ 37ರಷ್ಟಿದೆ. ಕರ್ನಾಟಕದಲ್ಲಿ ಜಿಲ್ಲಾ ನ್ಯಾಯಾಂಗದಲ್ಲಿನ ನೇಮಕಾತಿಯು ಭರವಸೆ ಮೂಡಿಸುವಂತಿದೆ. ಇಲ್ಲಿ ಒಟ್ಟಾರೆ ಕರ್ತವ್ಯನಿರತ ಸಿವಿಲ್ ನ್ಯಾಯಾಧೀಶರು 447 ಮಂದಿ ಇದ್ದು, 200 ಮಂದಿ ನ್ಯಾಯಾಧೀಶರು ಮಹಿಳೆಯರೇ ಇದ್ದಾರೆ. ಇದು ಸುಮಾರು ಶೇ. 44ರಷ್ಟಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕವು ಭಾರತದಾದ್ಯಂತ ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Today, I attended the Inaugural Ceremony of 21st Biennial State Level Conference of Judicial Officers organised by Karnataka State Judicial Officers Association, Bengaluru at GKVK, Bengaluru. pic.twitter.com/445L1x72cD
— Siddaramaiah (@siddaramaiah) March 23, 2024
ಜಿಲ್ಲಾ ನ್ಯಾಯಾಂಗದಲ್ಲಿನ ಸೌಲಭ್ಯ ಕುರಿತು ಮಾತನಾಡಿದ ಡಿವೈ ಚಂದ್ರಚೂಡ್, “ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿದ್ದರೆ ಸಾಲದು, ಸ್ವಚ್ಛವಾದ ನ್ಯಾಪ್ಕಿನ್ ಒದಗಿಸುವ ಯಂತ್ರಗಳನ್ನೂ ಅಳವಡಿಸಬೇಕು. ಇದು ದೇಶಾದ್ಯಂತ ಇರುವ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿಯೂ ಆಗಬೇಕು. ಭಾರತೀಯ ನ್ಯಾಯಾಂಗದಲ್ಲಿ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮರೆಯಬಾರದು. ವಕೀಲರು ಮತ್ತು ನ್ಯಾಯಮೂರ್ತಿಗಳಂತೆ ಅವರಿಗೂ ಈ ಸೌಲಭ್ಯ ಅಗತ್ಯವಾಗಿದೆ” ಇದೇ ವೇಳೆ ತಿಳಿಸಿದರು.
“ವಿಡಿಯೋವನ್ನು ತಿರುಚುವ ಮೂಲಕ ನನ್ನನ್ನು ದುರಹಂಕಾರಿ ಎಂದು ಟ್ರೋಲ್ ಮಾಡಿದ್ದಾರೆ” ಎಂದ ಸಿಜೆಐ!
“ಇತ್ತೀಚೆಗೆ ನನ್ನ ಕೋರ್ಟ್ ಕಲಾಪದಲ್ಲಿನ ವಿಡಿಯೋ ಒಂದನ್ನು ತಿರುಚುವ ಮೂಲಕ ನನ್ನನ್ನು ದುರಹಂಕಾರಿ ಎಂದು ಜರೆಯಲಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ನನ್ನನ್ನೂ ಕೂಡ ಟ್ರೋಲ್ ಮಾಡಲಾಗುತ್ತಿದೆ” ಎಂದು ಸಿಜೆಐ ಅವರು ಆನ್ಲೈನ್ನಲ್ಲಿ ನಡೆಯುವ ಚಾರಿತ್ರ್ಯವಧೆಯ ಬಗ್ಗೆ ಗಮನಸೆಳೆದರು.
WATCH: “Witch-hunting has started on some other level now… Petitioners have starting giving press interviews deliberately to embarrass the court. It is a non-level playing field. We can’t rebut them. There is a barrage of social media posts now that are intended to cause… pic.twitter.com/bsu7Zi9CY6
— Law Today (@LawTodayLive) March 18, 2024
“ಬೆನ್ನು ನೋವಿನ ಹಿನ್ನೆಲೆಯಲ್ಲಿ ಕುರ್ಚಿಯನ್ನು ಸರಿ ಹೊಂದಿಸಲು ಪ್ರಯತ್ನಿಸಿದ್ದೆ. ಲೈವ್ ಸ್ಟ್ರೀಮಿಂಗ್ ವಿಡಿಯೋವನ್ನು ತಿರುಚಿ ನಾನು ವಿಚಾರಣೆ ನಡೆಯುತ್ತಿರುವಾಗ ಪೀಠ ತೊರೆದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ. ಈ ತಿರುಚಿದ ವಿಡಿಯೊ ಆನ್ಲೈನ್ನಲ್ಲಿ ಬರುತ್ತಿದ್ದಂತೆ ನನ್ನ ಮೇಲೆ ವ್ಯಾಪಕ ಟೀಕಾತ್ಮಕ ದಾಳಿ ಮಾಡಿ, ಟ್ರೋಲ್ ಮಾಡಲಾಯಿತು” ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ತಿಳಿಸಿದರು.
(ಡಿವೈ ಚಂದ್ರಚೂಡ್ ಅವರು ತಮ್ಮ ಕುರ್ಚಿಯನ್ನು ಸರಿಪಡಿಸುತ್ತಿರುವುದು 27:06 ನಿಮಿಷದ ವೇಳೆ ಕಾಣಬಹುದು)
“ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೇ ಕರ್ತವ್ಯ ನಿಭಾಯಿಸುವ ಪ್ರಮುಖ ಜವಾಬ್ದಾರಿಯನ್ನು ನ್ಯಾಯಾಂಗ ಅಧಿಕಾರಿಗಳಿಗೆ ನೀಡಲಾಗಿದೆ. ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಯಾವುದೇ ಭಯ ಅಥವಾ ಪಕ್ಷಪಾತ ಇಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ, ಪ್ರಕರಣ ನಿರ್ಧರಿಸುವಾಗ ಹೆದರಬೇಡಿ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿಮ್ಮ ಬೆಂಬಲಕ್ಕೆ ನಿಲ್ಲಲಿವೆ. ಆದರೆ, ನೀವು ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು” ಎಂದು ಇದೇ ವೇಳೆ ವಿಶ್ವಾಸ ತುಂಬಿದರು.
Here are a few X accounts who trolled and abused CJI by sharing a video with a misleading claim. https://t.co/eJuszEvPum https://t.co/uKvW0KAAdB pic.twitter.com/D9x86pdeEB
— Mohammed Zubair (@zoo_bear) March 23, 2024
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಆಧುನಿಕ ಭಾರತದ ನ್ಯಾಯಾಂಗ ವ್ಯವಸ್ಥೆಯು ಬುದ್ದ, ಬಸವಣ್ಣ ಮತ್ತು ನಾರಾಯಣ ಗುರು ಅವರ ಬೋಧನೆಯ ಮೌಲ್ಯಗಳನ್ನು ಒಳಗೊಂಡಿದೆ. ವಚನಗಳು ಮತ್ತು ಪ್ರಗತಿಪರ ಚಿಂತಕರು ಸಮಗ್ರ ಸಹಾನುಭೂತಿ ಮತ್ತು ಸಾಮಾಜಿಕ ಪರಿವರ್ತನೆ ಪ್ರತಿಪಾದಿಸಿದ್ದಾರೆ. ಜನರ ಹಕ್ಕುಗಳನ್ನು ಎತ್ತಿ ಹಿಡಿಯುವ ಐತಿಹಾಸಿಕ ತೀರ್ಪುಗಳನ್ನು ನೀಡುವ ಮೂಲಕ ಭಾರತದ ನ್ಯಾಯಾಂಗವು ದೇಶ ಹೆಮ್ಮೆಪಡುವಂತೆ ಮಾಡಿದೆ. ಸಂವಿಧಾನದ 32ನೇ ವಿಧಿಯು ಸಂವಿಧಾನದ ಹೃದಯ ಮತ್ತು ಆತ್ಮ ಎಂದಿದ್ದ ಭಾರತದ ಸಂವಿಧಾನದ ಕರ್ತೃ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿರೀಕ್ಷೆಯನ್ನು ಸುಪ್ರೀಂ ಕೋರ್ಟ್ ನಿಜಗೊಳಿಸಿದೆ” ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ, ಬಿ ವಿ ನಾಗರತ್ನ ಮತ್ತು ಅರವಿಂದ್ ಕುಮಾರ್, ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಸಮಾರಂಭದಲ್ಲಿ ಮಾತನಾಡಿದರು.
