ಈಶಾನ್ಯ ರಾಜ್ಯ ಮಣಿಪುರ ದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 19 ಹಾಗೂ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ರಾಷ್ಟ್ರೀಯ ಪಕ್ಷ ಬಿಜೆಪಿ ಇವೆರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಮಾತ್ರ ಸ್ಪರ್ಧಿಸುತ್ತಿದೆ.
ಮಣಿಪುರ ದಲ್ಲಿ ಇನ್ನರ್ ಮಣಿಪುರ ಹಾಗೂ ಔಟರ್ ಮಣಿಪುರ ಎಂಬ ಎರಡು ಲೋಕಸಭಾ ಕ್ಷೇತ್ರಗಳಿವೆ. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಕಳೆದ ವರ್ಷ ಮೇ 3 ರಂದು ಆರಂಭವಾದ ಗಲಭೆ ಸುಮಾರು 10 ತಿಂಗಳು, 3 ವಾರಗಳ ಕಾಲ ಸಂಭವಿಸಿತ್ತು. ಸರ್ಕಾರಿ ವರದಿಗಳ ಪ್ರಕಾರ ಗಲಭೆಯಲ್ಲಿ ಅಂದಾಜು 200 ಮಂದಿ ಮೃತಪಟ್ಟು, 1108ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸಾವಿರಾರು ಮನೆಗಳು ನಾಶವಾಗಿದ್ದವು ಹಲವರು ಕಾಣೆಯಾಗಿದ್ದರು. 70 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಮೂಲ ನೆಲೆಯನ್ನು ಬಿಟ್ಟು ಸ್ಥಳಾಂತರಗೊಂಡಿದ್ದರು.
ಮಣಿಪುರದಲ್ಲಿ ಹೆಚ್ಚಾಗಿ ಗಲಭೆ ಸಂಭವಿಸಿದ್ದು ಮಣಿಪುರದ ಹೊರಗಿನ ಪ್ರದೇಶ ಔಟರ್ ಮಣಿಪುರ ಪ್ರದೇಶದ ವ್ಯಾಪ್ತಿಯಲ್ಲಿ. ಸಂಘರ್ಷ ತಣ್ಣಗಾಗಿದ್ದರೂ ಈಗಲೂ ಅಲ್ಲಿನ ಹಲವು ಪ್ರದೇಶಗಳಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣವಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ
ಕಳೆದ ಲೋಕಸಭಾ ಚುನಾವಣೆಗಳಲ್ಲಿ ಔಟರ್ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಈ ಬಾರಿ ಕಣಕ್ಕಿಳಿಯದೆ ಕಳೆದ ಬಾರಿ ಗೆಲುವು ಸಾಧಿಸಿದ್ದ ಎನ್‌ಪಿಎಫ್(ನಾಗಾ ಪೀಪಲ್ಸ್ ಪ್ರಂಟ್) ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವತಃ ಮಣಿಪುರ ಮುಖ್ಯಮಂತ್ರಿ ಎನ್ ಬೀರೇನ್ ಸಿಂಗ್ ಘೋಷಿಸಿದ್ದಾರೆ.
ಬಿಜೆಪಿ ಹೆಚ್ಚು ಗಲಭೆ ಕಾಣಿಸಿಕೊಳ್ಳದ ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದಿಂದ ಮಾತ್ರ ಕಣಕ್ಕಿಳಿಯುತ್ತಿದೆ. ಸದ್ಯ ಔಟರ್ ಮಣಿಪುರ ಕ್ಷೇತ್ರದಲ್ಲಿ ಎನ್‌ಪಿಎಫ್‌ನಿಂದ ಮಾಜಿ ಐಆರ್‌ಎಸ್ ಅಧಿಕಾರಿ ಕೆ ಟಿಮೋಟಿ ಜಿಮಿಕ್ ಸ್ಪರ್ಧಿಸುತ್ತಿದ್ದಾರೆ. ಇನ್ನರ್ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಇನ್ನರ್ ಮಣಿಪುರದಲ್ಲಿ ಏಪ್ರಿಲ್ 19 ಹಾಗೂ ಔಟರ್ ಮಣಿಪುರದಲ್ಲಿ ಏ.26ರಂದು ಚುನಾವಣೆ ನಡೆಯಲಿದೆ.
