ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ನವದೆಹಲಿಯ ರಾಮಲೀಲ ಮೈದಾನದಲ್ಲಿ ಮಾ.31 ರಂದು ಬೃಹತ್ ರ್ಯಾಲಿ ಹಮ್ಮಿಕೊಳ್ಳುವುದಾಗಿ ‘ಇಂಡಿಯಾ’ ಒಕ್ಕೂಟ ತಿಳಿಸಿದೆ.
ಮಾ.21ರಂದು ಜಾರಿ ನಿರ್ದೇಶನಾಲಯ ದೆಹಲಿ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.
ಅಬಕಾರಿ ಹಗರಣ ಪ್ರಕರಣದಲ್ಲಿ ಲಂಚ ಪಡೆದ ಪ್ರಕರಣದಲ್ಲಿ ವಿವರಾತ್ಮಕ ಹಾಗೂ ನಿರಂತರ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು ಮಾ.28ರವರೆಗೂ ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಎಪಿ ನಾಯಕ ಗೋಪಾಲ್ ರಾಯ್, ಪ್ರಜಾಪ್ರಭುತ್ವ ಹಾಗೂ ದೇಶ ಅಪಾಯದಲ್ಲಿದೆ. ದೇಶದ ಹಿತಾಸಕ್ತಿ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳು ‘ಮಹಾ ರ್ಯಾಲಿ’ ಹಮ್ಮಿಕೊಳ್ಳಲಿವೆ” ಎಂದು ಗೋಪಾಲ್ ರೈ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್ನಲ್ಲಿ ಅಪ್ಪ-ಮಗನ ಆಟ
“ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಸರ್ವಾಧಿಕಾರತ್ವವನ್ನು ಅಳವಡಿಸಿಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಪ್ರೀತಿಸಿ ಮತ್ತು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಗೂ ಇದರಿಂದ ಕೋಪವುಂಟಾಗಿದೆ. ಒಂದರ ನಂತರ ಒಂದರಂತೆ ಪ್ರತಿಯೊಬ್ಬ ವಿಪಕ್ಷ ನಾಯಕನ ವಿರುದ್ಧ ಪ್ರಧಾನಿ ಮೋದಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ” ಎಂದು ಗೋಪಾಲ್ ರೈ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಮಾತನಾಡಿ, ಮಾ.31ರಂದು ಕೈಗೊಳ್ಳುವ ಮಹಾ ರ್ಯಾಲಿಯು ರಾಜಕೀಯ ಉದ್ದೇಶವಾಗಿರದೆ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಕೇಂದ್ರದ ವಿರುದ್ಧ ಧನಿಯತ್ತುವುದಾಗಿದೆ” ಎಂದರು.
ಕಳೆದ ಶುಕ್ರವಾರ ಇಂಡಿಯಾ ಒಕ್ಕೂಟದ ಹಲವು ನಾಯಕರು ಭಾರತದ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಕೇಜ್ರಿವಾಲ್ ಅವರನ್ನು ಅವರನ್ನು ಬಂಧಿಸಿರುವುದರ ವಿರುದ್ಧ ಪ್ರತಿಭಟನೆ ದಾಖಲಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರನ್ನು ಗುರಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
