ಪ್ರಧಾನಿ ಮೋದಿಯವರು ತಮ್ಮ ಪಕ್ಷದಲ್ಲಿನ ಭ್ರಷ್ಟಾಚಾರ ಆರೋಪವಿರುವ ನಾಯಕರನ್ನೆಲ್ಲ ಬಿಜೆಪಿಗೆ ಸೇರಿಸಿಕೊಂಡು ಭ್ರಷ್ಟಾಚಾರ ಮುಕ್ತ ಭಾರತದ ಬದಲಿಗೆ ಭ್ರಷ್ಟಾಚಾರ ಮುಕ್ತ ಕಾಂಗ್ರೆಸ್ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಮಾಜಿ ಕಾಂಗ್ರೆಸ್ ನಾಯಕ ನವೀನ್ ಜಿಂದಾಲ್ ಬಿಜೆಪಿಗೆ ಸೇರ್ಪಡೆಗೊಂಡ ಬೆಳವಣಿಗೆಯ ನಂತರ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಜೈರಾಮ್ ರಮೇಶ್, ನಿಮಗೆ ದೊಡ್ಡ ಗಾತ್ರದ ವಾಷಿಂಗ್ ಮಷಿನ್ ಅಗತ್ಯವಿದ್ದರೆ, ಇದು ಸಂಭವಿಸಬೇಕಿತ್ತು. ಕಳೆದ 10 ವರ್ಷಗಳಿಂದ ಪಕ್ಷಕ್ಕೆ ಶೂನ್ಯ ಕೊಡುಗೆ ನೀಡಿದವರು ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳುವುದು ದೊಡ್ಡ ಹಾಸ್ಪಾಸ್ಪದವಾಗಿದೆ ಎಂದು ಹೇಳಿದ್ದಾರೆ.
ನವೀನ್ ಜಿಂದಾಲ್‌ಗೆ ಸಿಬಿಐನಿಂದ ಹಾಗೂ ದೆಹಲಿ ಹೈಕೋರ್ಟ್‌ನಿಂದ ಸಮನ್ಸ್ ಪಡೆದ ಸುದ್ದಿಗಳ ಚಿತ್ರಗಳನ್ನು ಕೂಡ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ.
”ಪ್ರಧಾನಿ ನರೇಂದ್ರ ಮೋದಿ ಅವರು ಇ.ಡಿ ಹಾಗೂ ಸಿಬಿಐ ಪಡೆಗಳೊಂದಿಗೆ ಹಲವು ವಾಷಿಂಗ್ ಮಷಿನ್‌ಗಳನ್ನು ನಿಯೋಜಿಸಿಕೊಂಡು ಓಡಿಹೋಗುತ್ತಿರುವ ಭ್ರಷ್ಟ ಕಾಂಗ್ರೆಸಿಗರನ್ನು ಸೇರಿಸಿಕೊಂಡು ಭ್ರಷ್ಟಾಚಾರ ಮುಕ್ತ ಕಾಂಗ್ರೆಸ್ ಮಾಡಲು ಹೊರಟಿದ್ದಾರೆ” ಎಂದು ಛೇಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ
ಬಿಜೆಪಿಗೆ ಸೇರ್ಪಡೆಗೊಂಡ ಕೆಲವೇ ಗಂಟೆಗಳಲ್ಲಿ ನವೀನ್ ಜಿಂದಾಲ್ ಹರಿಯಾಣದ ಕುರುಕ್ಷೇತ್ರ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಪಡೆದುಕೊಂಡಿದ್ದಾರೆ.
ವಿವಿಧ ರಾಜ್ಯಗಳ ಭ್ರಷ್ಟರನ್ನೆಲ್ಲ ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡಿರುವುದನ್ನು ವಿರೋಧಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 35 ಸಾವಿರ ಕೋಟಿ ರೂ. ಗಣಿ ಹಗರಣದ ಕರ್ನಾಟಕದ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಹಾಗೆಯೇ ಮಹಾರಾಷ್ಟ್ರದ 70 ಸಾವಿರ ಕೋಟಿ ಹಗರಣದ ವ್ಯಕ್ತಿ ಎನ್‌ಡಿಎಗೆ ಸೇರ್ಪಡೆಗೊಂಡಿದ್ದಾರೆ. ಬಂಗಾಳದ 2,500 ಕೋಟಿ ರೂ. ಶ್ರದ್ಧಾ ಚಿಟ್ ಫಂಡ್ ಹಗರಣ, ಅಸ್ಸಾಂನ ಜಲ ಯೋಜನೆ ಹಗರಣ, ಮಧ್ಯಪ್ರದೇಶದ ವ್ಯಾಪಂ, ಗುಜರಾತ್‌ನ ಅಬಕಾರಿ ಮಾಫಿಯಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಗರಣಗಳ ಆರೋಪ ಹೊತ್ತಿರುವ ನಾಯಕರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದು, 2024ರ ಚುನಾವಣೆಯು ಭ್ರಷ್ಟಾಚಾರ ಹಾಗೂ ಇಂಡಿಯಾ ಬಣಗಳ ನಡುವೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಾಂಡ್ ಅಲ್ಲ ಸುಲಿಗೆ: ಅಖಿಲೇಶ್ ಯಾದವ್
”ಎಚ್ಚರವಿರಲಿ, ಚುನಾವಣಾ ಬಾಂಡ್‌ಗಳನ್ನು ರಾಜಕೀಯ ದೇಣಿಗೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಇದೊಂದು ಸುಲಿಗೆ. ಇಂತಹ ಅತಿರೇಕದ ಸುಲಿಗೆಯು ಈ ಮೊದಲು ಬೇರೆ ದೇಶಗಳಲ್ಲಿ ನಡೆದಿಲ್ಲ” ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಪಕ್ಷಕ್ಕೆ ದೇಣಿಗೆ ಪಡೆಯಲು ಇ.ಡಿ, ಐಟಿ ಹಾಗೂ ಸಿಬಿಐಗಳನ್ನು ದುರ್ಬಳಕೆ ಮಾಡಿಕೊಂಡಿರುವ ವರದಿಗಳು ದಿನವು ಪ್ರಕಟವಾಗುತ್ತಿದೆ. ಬಿಜೆಪಿಯು 400 ಸೀಟುಗಳು ಎಂಬ ಘೋಷಣೆ ಕೂಗುತ್ತಿದೆ. ಆದರೆ ಇಂಡಿಯಾ ಒಕ್ಕೂಟದ ಮತದಾರರು 400 ಕ್ಷೇತ್ರಗಳಲ್ಲಿ ಸೋಲಿಸುವುದಾಗಿ ನಿರ್ಧರಿಸಿದ್ದಾರೆ ಎಂದು ಹೇಳಿದರು.
