ʼಪುಷ್ಪ-2ʼ ಚಿತ್ರಕ್ಕೆ ಬಂಡವಾಳ ಹೂಡಿರುವ ʼಮೈತ್ರಿ ಮೂವೀ ಮೇಕರ್ಸ್ʼ
ʼಮೈತ್ರಿ ಮೂವೀ ಮೇಕರ್ಸ್ʼ ಕಚೇರಿ ಮೇಲೆ ಎರಡನೇ ಬಾರಿಗೆ ಐಟಿ ದಾಳಿ
ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ʼಪುಷ್ಪ-2ʼ ಚಿತ್ರದ ನಿರ್ದೇಶಕ ಸುಕುಮಾರ್ ಮತ್ತು ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರ ಮನೆ ಹಾಗೂ ಕಚೇರಿಗಳ ಮೇಲೆ ʼಐಟಿʼ (ಆದಾಯ ತೆರಿಗೆ ಇಲಾಖೆ) ಅಧಿಕಾರಿಗಳು ಎರಡನೇ ಬಾರಿಗೆ ದಾಳಿ ನಡೆಸಿದ್ದಾರೆ.
ಬುಧವಾರ ಬೆಳಗಿನ ಜಾವದ ಹೊತ್ತಿಗೆ ʼಐಟಿʼ ಅಧಿಕಾರಿಗಳ ಒಂದು ತಂಡ ಸುಕುಮಾರ್ ಅವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದೆ. ಇದೇ ಸಮಯಕ್ಕೆ ʼಪುಷ್ಟ-2ʼ ಸೇರಿದಂತೆ ಟಾಲಿವುಡ್‌ನ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಬಂಡವಾಳ ಹೂಡಿರುವ ʼಮೈತ್ರಿ ಮೂವೀ ಮೇಕರ್ಸ್ʼ ಸಂಸ್ಥೆಯ ಮಾಲೀಕರಾದ ನವೀನ್ ಯರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ಅವರ ಕಚೇರಿ ಹಾಗೂ ಮನೆಗಳ ಮೇಲೂ ಅಧಿಕಾರಿಗಳ ಗುಂಪು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದೆ.
ನಿರ್ದೇಶಕ ಸುಕುಮಾರ್ ಇತ್ತೀಚೆಗೆ ʼಸುಕುಮಾರ್ ರೈಟಿಂಗ್ಸ್ʼ ಎಂಬ ತಮ್ಮ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ʼವಿರುಪಾಕ್ಷʼ ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಸಾಯಿಧರ್ಮ ತೇಜ್ ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರ ಇದೇ ಏಪ್ರಿಲ್ 21ಕ್ಕೆ ತೆರೆ ಕಾಣಲಿದೆ. ಇದರ ಜೊತೆಗೆ ಸುಕುಮಾರ್ ʼಪುಷ್ಪ-2ʼ ಚಿತ್ರದ ಸಹ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಹುಕೋಟಿ ವ್ಯವಹಾರ ನಡೆಸುತ್ತಿರುವ ಸುಕುಮಾರ್ ಜಿಎಸ್‌ಟಿ ನಿಯಮಗಳನ್ನು ಉಲ್ಲಂಘಿಸಿ, ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಇದೇ ಕಾರಣಕ್ಕೆ ʼಐಟಿʼ ಅಧಿಕರಿಗಳು ದಿಢೀರ್ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ನಟ ಚೇತನ್ ವೀಸಾ ರದ್ದು: ಸರ್ಕಾರದ ಅತಿರೇಕ ಎಂದ ಕಿಶೋರ್
ಇನ್ನು ನವೀನ್ ಯರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ಒಡೆತನದ ʼಮೈತ್ರಿ ಮೂವೀ ಮೇಕರ್ಸ್ʼ ಮೇಲೂ ತೆರಿಗೆ ವಂಚನೆಯ ಆರೋಪಗಳಿವೆ. ಇವರಿಬ್ಬರೂ ಬಂಡವಾಳ ಹೂಡಿದ್ದ ʼವಾಲ್ಟರ್ ವೀರಯ್ಯʼ ಮತ್ತು ʼವೀರ ಸಿಂಹ ರೆಡ್ಡಿʼ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಗಳಿಸಿದ್ದವು. ಈ ಸಿನಿಮಾಗಳ ವ್ಯವಹಾರದಲ್ಲಿ ತೆರಿಗೆ ವಂಚನೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ನಿರ್ಮಾಪಕರುಗಳು ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲೂ ʼಮೈತ್ರಿ ಮೂವೀ ಮೇಕರ್ಸ್ʼ ಸಂಸ್ಥೆಯ ಮುಖ್ಯಸ್ಥರ ಮನೆ ಹಾಗೂ ಕಚೇರಿಗಳ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.