ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರಾರಂಭದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ವಿಳಂಬವಾಗಿದ್ದು, ಯಾರಿಗೆ ಟಿಕೆಟ್ ಎಂಬ ಗೊಂದಲ ಬಹಳ ಬುಗಿಲೆದ್ದಿತ್ತು. ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಗಳೂ ಅನೇಕರಿದ್ದರು. ಈಗ ಆ ಎಲ್ಲ ಗೊಂದಲಗಳಿಗೆ ಪೂರ್ಣ ವಿರಾಮವಿಟ್ಟು ಯುವ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ವಿನೋದ್ ಅಸೂಟಿಗೆ ಅಂತಿಮವಾಗಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ದೊರಕಿದೆ. ಪರಿವರ್ತನೆ ಜಗದ ನಿಯಮ ಎಂಬಂತೆ ಈ ಬಾರಿ ಕ್ಷೇತ್ರದ ಜನರು ಯುವಕ ವಿನೋದ್ ಅಸೂಟಿ ಕೈ ಹಿಡಿಯುವರೇ ಎಂದು ಕಾದು ನೋಡಬೇಕಿದೆ.
ಕಳೆದ ಎರಡು ದಿನಗಳಿಂದ ಲೋಕಸಭಾ ಅಭ್ಯರ್ಥಿ ಭಾರಿ ಪ್ರಚಾರದ ಕಾರ್ಯದಲ್ಲಿ ತೊಡಗಿದ್ದಾರೆ. ಮೊದಲು ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್ ನಾಯಕರುಗಳು ಯಾವುದೇ ವೈಮನಸ್ಸು, ಮನಸ್ತಾಪಗಳಿಲ್ಲದೆ ಎಲ್ಲರೂ ವಿನೋದ್ ಅಸೂಟಿ ಗೆಲ್ಲಿಸಲು ಒಂದಾಗಿ ನಿಂತಿದ್ದಾರೆ. ಪ್ರತಿಬಾರಿಗಿಂತಲೂ ಈ ಬಾರಿ ಕಾಂಗ್ರೆಸ್ ಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಬಹುದು. ಅತ್ತ ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಎಂಪಿ ಪ್ರಲ್ಹಾದ್ ಜೋಶಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಒಂದು ಕಡೆ ಅಹಿಂದ ನಾಯಕರೆಲ್ಲ ಒಂದಾಗಿ ಬ್ರಾಹ್ಮಣ ಪ್ರಲ್ಹಾದ್ ಜೋಶಿಯನ್ನು ಸೋಲಿಸಲು ಪಣತೊಟ್ಟಿದ್ದಾರೆ. ಮತ್ತೊಂದು ಕಡೆ ಪ್ರಲ್ಹಾದ್ ಜೋಶಿ ಸೋಲಿಸುವುದು, ಬಿಜೆಪಿ ಅನುಯಾಯಿಗಳಾಗಿದ್ದ ಕೆಲವು ಲಿಂಗಾಯತರು ತಮ್ಮ ಸಮುದಾಯದ ಮತಗಳನ್ನು ಒಡೆಯುವ ಉದ್ದೇಶದಿಂದ ಒಳಗೊಳಗೆ ದಿಂಗಾಲೇಶ್ವರ ಸ್ವಾಮಿಯನ್ನು ಕಣಕ್ಕಿಳಿಸುವ ಸುದ್ದಿಗಳೂ ಕೇಳಿ ಬರುತ್ತಿವೆ. ಏನೇ ಆದರೂ ಜನರ ತೀರ್ಮಾನಕ್ಕೆ ಕಾದು ನೋಡಬೇಕಷ್ಟೆ.
ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಹಾಗೂ ಧಾರವಾಡ ಲೋಕಸಭಾ ಅಭ್ಯರ್ಥಿ ವಿನೋದ್ ಅಸೂಟಿ ಮೂಲತಃ ನವಲಗುಂದದ ನಿವಾಸಿ. ಇವರ ಪೂರ್ಣ ಹೆಸರು ವಿನೋದ್ ಕಾಶಿನಾಥ ಅಸೂಟಿ. ಕೃಷಿ ಮತ್ತು ವ್ಯಾಪಾರ ಇವರ ವೃತ್ತಿಯಾಗಿತ್ತು. ಹಲವಾರು ಸಾಮಾಜಿಕ ಕಾರ್ಯಗಳಿಂದ ಅಸೂಟಿ ಜನರಲ್ಲಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತರೂ ಹೌದು. 2019 ರ ವಿಧಾನಸಭಾ ಚುನಾವಣೆಯಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪ ವಿರುದ್ಧ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಎನ್ ಎಚ್ ಕೋನರಡ್ಡಿ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು, ಕೋನರಡ್ಡಿಯವರ ಗೆಲುವಿಗೆ ಶ್ರಮಿಸಿದರು. ಆ ಕಾರಣದಿಂದ ರಾಜ್ಯ ಸರ್ಕಾರ ಅಸೂಟಿಯವರನ್ನು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಈ ಬಾರಿ ಲೋಕಸಬಾ ಚುನಾವಣೆಗೆ ಪ್ರಲ್ಹಾದ್ ಜೋಶಿಗೆ ಎದುರಾಳಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಇನ್ನು ಟಿಕೆಟ್‌ಗಾಗಿ ನಾ ಮುಂದು ತಾ ಮುಂದು ಎನ್ನುತ್ತಿದ್ದ ಕಾಂಗ್ರೆಸ್ ನಾಯಕರೆಲ್ಲ ವಿನೋದ್ ಅಸೂಟಿ ಗೆಲವು ಖಚಿತ ಮತ್ತು ಅವರ ಗೆಲುವಿಗಾಗಿ ನಾವೂ ಶ್ರಮಿಸುತ್ತೇವೆ ಎಂದು ಕೈಜೋಡಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳೇ ಅಭ್ಯರ್ಥಿಯ ಕೈ ಹಿಡಿಯಲಿವೆ ಮತ್ತು ಮೋಹನ್ ಲಿಂಬಿಕಾಯಿ, ರಜತ್ ಉಳ್ಳಾಗಡ್ಡಿಮಠ, ದೀಪಕ್ ಚಿಂಚೋರೆ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಕಾರ್ಮಿಕ ಸಚಿವ ಸಂತೊಷ್ ಲಾಡ್ ಇನ್ನುಳಿದವರೂ ವಿನೋದ್ ಅಸೂಟಿ ಬೆನ್ನೆಲುಬಾಗಿ ನಿಂತಿದ್ದಾರೆ. ಎಲ್ಲಕ್ಕಿಂತ ಸಿಎಂ ಸಿದ್ದರಾಮಯ್ಯ ಜೊತೆಗಿದ್ದಾರೆ. ಈ ಬಾರಿ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಗೆ ವಿನೋದ್ ಅಸೂಟಿ ದೆಹಲಿಗೆ ಎಂದು ಕಾಂಗ್ರೆಸ್ ನಾಯಕ ದೀಪಕ್ ಚಿಂಚೋರೆ ಮೊನ್ನೆ ಧಾರವಾಡದಲ್ಲಿ ನಡೆದ ಲೊಕಸಭಾ ಸಭೆಯೊಂದರಲ್ಲಿ ಹೇಳಿದ್ದಾರೆ. ಕುರುಬರ ಬೋಣಿಯಾದರೆ ಹುಸಿಯಾಗುವುದಿಲ್ಲ ಎಂಬ ನಂಬಿಕೆ ಮಾತು ಜನರಿಂದ ಕೇಳಿ ಬರುತ್ತಿದೆ.
ಗ್ರಾಮೀಣ ಯುವ ಘಟಕದಲ್ಲಿ ಜಿಲ್ಲಾದ್ಯಕ್ಷರಾಗಿ ಗುರುತಿಸಿಕೊಂಡ ವಿನೋದ್ ಅಸೂಟಿ ಯುವಕರು. ಈ ಬಾರಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಈಗಾಗಿ ವಿನೋದ್ ಅಸೂಟಿ ಗೆಲುವ ನಿಶ್ಚಿತವೆಂದು ರಜತ್ ಉಳ್ಳಾಗಡ್ಡಿಮಠ ಹೇಳಿದ್ದಾರೆ. ಜನರ ಒಲುಮೆಯಾದರೆ ಸಾಕು ಮತ್ತು ಬಿಜೆಪಿಯು ಇವಿಎಂ ಗದ್ದಲವನ್ನೂ ಮಾಡಬಹುದು ಎಂದು ವಿನೋದ್ ಅಸೂಟಿ ತಿರುಗೇಟು ನೀಡಿದ್ದಾರೆ. ಏನೇ ಆದರೂ ಮತದಾರರ ನಿರ್ಧಾರವೇ ಅಂತಿಮ ನಿರ್ಧಾರವಾಗಿದೆ. ನಾವೆಲ್ಲ ಕಾದು ನೋಡುವುದೊಂದೇ ಬಾಕಿ ಉಳಿದಿದೆ.
