ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ನಾನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಹಲವು ಅಧಿಕಾರಿಗಳ ಮನೆ ಮೇಲೆ ಮಾರ್ಚ್ 27ರಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ, ಓರ್ವ ಪಿಡಿಒ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 13 ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯಕ್ಕೂ ಮೀರಿ ಹೆಚ್ಚು ಆಸ್ತಿ ಸಂಪಾದನೆ ಆರೋಪ ಸಂಬಂಧ ಮಾಹಿತಿ ಪಡೆದ ಅಧಿಕಾರಿಗಳು 13 ಎಸ್ಪಿ , 12 ಡಿವೈಎಸ್ಪಿ, 25 ಪಿಐ ಹಾಗೂ 80 ಮಂದಿ ಸಿಬ್ಬಂದಿ ಒಳಗೊಂಡ ಒಟ್ಟು 130 ಮಂದಿ ರಾಜ್ಯದ 60 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ಧಾರವಾಡ, ಬೆಳಗಾವಿ ವಿಜಯಪುರದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಬ್ಯಾಟರಾಯನಪುರ ಬಿಬಿಎಂಪಿ ಎಂಜಿನಿಯರ್ ರಂಗನಾಥ್ ಎಂಬುವರ ಮನೆ, ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ರಂಗನಾಥ್ಗೆ ಸೇರಿದ ಐದು ಕಡೆ ದಾಳಿ ಮಾಡಿ ಶೋಧ ಮಾಡಲಾಗ್ತಿದೆ.
ರಾಮನಗರ ತಾಲೂಕಿನ ಬಿಡದಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಯತೀಶ್ ಚಂದ್ರ ಕಳೆದೆರಡು ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ದರು. ಅಲ್ಲದೆ, ಮೈಸೂರಿನಲ್ಲಿ ಪತ್ನಿ ಹೆಸರಿನಲ್ಲಿ ಮನೆ ಕಟ್ಟಿಸುತ್ತಿದ್ದರು. ಈ ಮನೆಗೆ ಐದು ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಹಾಗೇಯೇ, ಬೆಲೆಬಾಳುವ ಇನ್ನು ಎರಡು ಮನೆಗಳನ್ನು ಮೈಸೂರಿನಲ್ಲಿಯೇ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಕಲೆಹಾಕಿದ ಅಧಿಕಾರಿಗಳು ಪಿಡಿಓ ಯತೀಶ್ ಚಂದ್ರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಈಗಲ್ಟನ್ ರೆಸಾರ್ಟ್ನಲ್ಲಿ ಪಿಡಿಓ ಯತೀಶ್ನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಯತೀಶ್ ಚಂದ್ರ ಅವರಿಗೆ ಸೇರಿದ ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಚನ್ನಪಟ್ಟಣ ತಾಲೂಕಿನ ಮೈಲನಾಯಕನ ಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಶೀಬಾ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 290 ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ
ಬೀದರ್ನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ದೂರು ಹಿನ್ನಲೆ ಕಾರಂಜಾ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವಕುಮಾರ್ ಸ್ವಾಮಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೀದರ್ ನಗರದ ವೀರಭದ್ರೇಶ್ವರ ಕಾಲೋನಿಯ ಮನೆ, ಭಾಲ್ಕಿ ತಾಲೂಕಿನ ನಾಗೂರು ಗ್ರಾಮದಲ್ಲಿರುವ ಮನೆ ಹಾಗೂ ಕಾರಂಜಾ ಕಚೇರಿ ಮೇಲೆ ದಾಳಿ ಪರಿಶೀಲನೆ ನಡೆಸಲಾಗುತ್ತಿದೆ.
ಉತ್ತರ ಕನ್ನಡದ ಕಾರವಾರದ ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಪ್ರಕಾಶ್ ಆರ್. ರೇವಣ್ಕರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕಾಶ್ ರೇವಣ್ಕರ್ಗೆ ಸೇರಿದ ಆಸ್ತಿ, ದಾಖಲೆಗಳಿಗೆ ಹುಡುಕಾಟ ಮುಂದುವರಿಸಿದ್ದಾರೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಮಾಗಡಿ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಾದ ನಾಗರಾಜಪ್ಪ ಮನೆ ಮೇಲೆ ದಾಳಿ ನಡೆದಿದೆ. ಮಾಲೂರು ತಾಲೂಕಿನಲ್ಲಿರೋ ಎಟ್ಟಕೋಡಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆದಿದೆ. ಹಾಗೇ ಚಿಕ್ಕಬಳ್ಳಾಫುರದ ಕೆಆರ್ಡಿಎಲ್ನ ಎಕ್ಸಿಕ್ಯೂಟಿವ್ ಎಂಜಿನಿಯರ್ ಮನೆ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿ ಶೋಧ ಮುಂದುವರೆಸಿದ್ದಾರೆ.
ಉಡುಪಿಯ ಅಬಕಾರಿ ಇಲಾಖೆ ಡೆಪ್ಯೂಟಿ ಕಮಿಷನರ್ ರೂಪ ಅವರ ಮನೆ ಸೇರಿದಂತೆ ಅವರಿಗೆ ಸಂಬಂಧಿಸಿದ 5 ಸ್ಥಳಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ಕೈಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜ್ಯೂನಿಯರ್ ಇಂಜಿನಿಯರ್ ಪ್ರಕಾಶ್, ಮೈಸೂರಿನ ಅಸಿಸ್ಟೆಂಟ್ ಎಂಜಿನಿಯರ್ ಫಯಾಜ್ ಅಹಮದ್ ಅವರಿಗೆ ಸಂಬಂಧಿಸಿದ 12 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ಕೊಡಗಿನ ಮುಖ್ಯ ಕಾರ್ಯಕಾರಿ ಅಭಿಯಂತರ ಜಯಣ್ಣ ಬಿ.ವಿ, ಧಾರವಾಡದ ಅರಣ್ಯ ವಲಯದ ಅಧಿಕಾರಿ ಮಹೇಶ್ ಚಂದ್ರಯ್ಯ ಹೀರೆಮಠ್, ಕೋಲಾರದಲ್ಲಿ ಅಸ್ಟಿಸೆಂಟ್ ಡೈರೆಕ್ಟರ್ ನಾಗರಾಜಪ್ಪ, ಜಮಖಂಡಿ, ಬಾಗಲಕೋಟೆಯ ನಾಲ್ಕು ಕಡೆಗಳಲ್ಲಿ ಎಆರ್ಟಿಓ ಷಣ್ಮುಗಪ್ಪ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಅಸ್ಟಿಸೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸದಾಶಿವಯ್ಯ, ಮಂಡ್ಯದ ಆಗಸನಪುರ ಗ್ರಾಮ ಪಂಚಾಯಿತಿ ಮಳವಳ್ಳಿಯ ದ್ವೀತಿಯ ದರ್ಜೆ ಸಹಾಯಕ ಲೆಕ್ಕಾಧಿಕಾರಿ ಕೃಷ್ಣಗೌಡ, ಬೆಳಗಾವಿಯ ನಿಡಗುಂದಿ ಗ್ರಾಮದ 3 ಕಡೆಗಳಲ್ಲಿ ಸೆಕ್ರೆಟರಿ ಪಿಡಿಓ ಸದಾಶಿವ ಜಯಪ್ಪ ಅವರ ಮನೆ ಮೇಲೆ ದಾಳಿ ನಡೆಸಿದೆ.
ಲೋಕಾಯುಕ್ತ ಎಸ್ಪಿ ಆಂಥೋನಿ ಜಾನ್ ಮರ್ಗಾದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಎಂ.ಎನ್.ಓಲೇಕಾರ ನೇತೃತ್ವದಲ್ಲಿ ಈ ದಾಳಿಯನ್ನು ದಾಳಿ ಮಾಡಲಾಗಿದೆ.