ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಇಂದು ಅತ್ಯಂತ ಭೀಕರವಾದ ವಾಸ್ತವವನ್ನು ಎದುರಿಸುತ್ತಿದ್ದೇವೆ. ಅದು ಕೇವಲ ನಮ್ಮ ಕಾಲದಲ್ಲಿ ನಡೆಯುತ್ತಿರುವ ಯುದ್ಧಗಳು ಸೃಷ್ಟಿಸಿರುವ ಹಿಂಸೆ ಮತ್ತು ಪ್ರಕ್ಷುಬ್ಧತೆಗಳು ಮಾತ್ರವಲ್ಲ…
ಭಾರತದ ಸಮಾಜವಾದಿ ರಾಜಕಾರಣದ ದಾರ್ಶನಿಕ ನಾಯಕ ರಾಮ ಮನೋಹರ ಲೋಹಿಯಾ ಸ್ವತಂತ್ರ ಭಾರತದ ಪ್ರಜಾತಾಂತ್ರಿಕ ರಾಜಕಾರಣದ ಮೊದಲ ದಶಕದಲ್ಲಿ ನುಡಿದ ಮಾತೇ ’ನಿರಾಸೆಯ ಕರ್ತವ್ಯ’. ತಾನು ಪ್ರತಿನಿಧಿಸಿದ ಸಮಾಜವಾದಿ ಪಕ್ಷ ಅನುಭವಿಸುತ್ತಿದ್ದ ತೀವ್ರ ಹಿನ್ನೆಡೆಯ ಹಿನ್ನೆಲೆಯಲ್ಲಿ ಅವರು ತಮ್ಮ ಸಹಯೋಗಿ ಮಿತ್ರರಿಗೆ ತೀವ್ರ ನಿರಾಶೆಯ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಒಂದು ಬಹು ಮುಖ್ಯವಾದ ಉಪನ್ಯಾಸವನ್ನು ನೀಡಿದರು. ಅದು ತದನಂತರದಲ್ಲಿ ನಿರಾಶಾ ಖೆ ಕರ್ತವ್ಯ (निराशा के कर्तव्य) ಎನ್ನುವ ಶೀರ್ಷಿಕೆಯಲ್ಲಿ ಪ್ರಕಟಗೊಂಡಿತು.ಈ ಉಪನ್ಯಾಸದಲ್ಲಿ ಲೋಹಿಯಾ ಏನು ಹೇಳಿದರು ಎನ್ನುವುದನ್ನು ಪುನರ್ ಉಚ್ಚರಿಸುವುದು ಈ ಬರೆಹದ ಉದ್ದೇಶವಲ್ಲ. ಬದಲಾಗಿ ಇಂದಿನ ನಮ್ಮ ಕಾಲದ ತೀವ್ರ ನಿರಾಸೆಯ ಸಂದರ್ಭದಲ್ಲಿ ಲೋಹಿಯಾ ತಮ್ಮ ಉಪನ್ಯಾಸದಲ್ಲಿ ನಡೆಸಿದ ಚಿಂತನೆಯ ಬೆಳಕಿನಲ್ಲಿ ನಮ್ಮ ಕರ್ತವ್ಯಗಳೇನು ಎನ್ನುವ ದಿಶೆಯಲ್ಲಿ ಯೋಚಿಸುವುದು ಇಲ್ಲಿನ ಕಾಳಜಿ.
ಲೋಹಿಯಾರವರು, ಸ್ಥೂಲವಾಗಿ ಮೂರು ಬಗೆಯ ಪರಸ್ಪರಾವಲಂಬಿತ ನಿರಾಸೆಗಳ ಕುರಿತು ಮಾತನಾಡಿದ್ದರು. ಅದರಲ್ಲಿ ಮೊದಲನೆಯದು ಅಂತಾರಾಷ್ಟ್ರೀಯ ನಿರಾಸೆ, ಎರಡನೆಯದು ರಾಷ್ಟ್ರೀಯ ನಿರಾಸೆ ಮತ್ತು ಮೂರನೆಯದು ಮಾನವಿಕ ನಿರಾಸೆ. ಲೋಹಿಯಾ ತಮ್ಮ ಕಾಲದಲ್ಲಿ ಅನುಭವಿಸಿದ ಮತ್ತು ಎದುರಿಸಿದ ಮೂರೂ ನಿರಾಸೆಗಳ ಇಂದಿನ ಅರ್ಥವನ್ನು ನಮ್ಮ ಕಾಲದಲ್ಲಿ ಗ್ರಹಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ಅಂತಾರಾಷ್ಟ್ರೀಯ ನಿರಾಸೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಇಂದು ಅತ್ಯಂತ ಭೀಕರವಾದ ವಾಸ್ತವವನ್ನು ಎದುರಿಸುತ್ತಿದ್ದೇವೆ. ಅದು ಕೇವಲ ನಮ್ಮ ಕಾಲದಲ್ಲಿ ನಡೆಯುತ್ತಿರುವ ಯುದ್ಧಗಳು ಸೃಷ್ಟಿಸಿರುವ ಹಿಂಸೆ ಮತ್ತು ಪ್ರಕ್ಷುಬ್ಧತೆಗಳು ಮಾತ್ರವಲ್ಲ ಅಥವಾ ಜಾಗತೀಕರಣವೆನ್ನುವ ಬಂಡವಾಳಶಾಹಿಯ ಹೊಸ ವಿರಾಟ್ ರೂಪ ಉಂಟುಮಾಡಿದ ಆರ್ಥಿಕ ಅಸಮತೋಲನ ಮತ್ತು ಅಸಮಾನತೆಗಳು ಮಾತ್ರವಲ್ಲ ಅಥವಾ ಇಂದಿನ ನಮ್ಮ ಬದುಕಿನಲ್ಲಿ ವಾಪಕವಾಗಿ ಕಂಡುಬರುತ್ತಿರುವ ಜನಾಂಗೀಯತೆ, ಉದ್ರಿಕ್ತ ಧಾರ್ಮಿಕತೆ ಅಥವಾ ಅತಿರೇಕದ ರಾಷ್ಟ್ರವ್ಯಾಮೋಹಗಳು ಮಾತ್ರವಲ್ಲ. ಬದಲಾಗಿ ಇವೆಲ್ಲವೂ ಒಟ್ಟುಗೂಡಿ ಉಂಟು ಮಾಡಿದ ಪರಿಣಾಮವನ್ನೇ ನಾವು ಅಂತರರಾಷ್ಟ್ರೀಯ ನಿರಾಶೆ ಎಂದು ಕರೆಯಬಹುದು. ಔದ್ಯೋಗೀಕರಣ ಪ್ರೇರಿತ, ಅಭಿವೃದ್ಧಿ ಪ್ರಣೀತ ಬಂಡವಾಳಶಾಹಿ ಆಧುನಿಕತೆ ನಮ್ಮನ್ನು ಮಾರುಕಟ್ಟೆಯ ಗುಲಾಮರನ್ನಾಗಿಸಿದೆ.
ಚಿಂತನಶೀಲ ಪ್ರಜಾತಾಂತ್ರಿಕ ವ್ಯವಸ್ಥೆಯ ಕ್ರಿಯಾಶೀಲ ನಾಗರಿಕರಾಗುವ ಬದಲು ನಾವು ಬಂಡವಾಳಶಾಹಿ ವ್ಯವಸ್ಥೆಯ ಅನುಭೋಗ ಸಂಸ್ಕೃತಿಯ ಪೂಜಾರಿಗಳಾಗಿದ್ದೇವೆ. ಔದ್ಯೋಗಿಕತೆ ಹಾಗೂ ಅಭಿವೃದ್ಧಿಗಳ ನೆಲೆಯಲ್ಲಿ ಮುನ್ನಡೆದುಕೊಂಡು ಬರುತ್ತಿರುವ ಬಂಡವಾಳಶಾಹಿ ನಮ್ಮನ್ನು ನಿರ್ಣಾಯಕವಾಗಿ ವಿನಾಶದೆಡೆಗೆ ಕರೆದೊಯ್ಯುವ ಕುರಿತು ಅನೇಕ ದಾರ್ಶನಿಕರು ನಮ್ಮನ್ನು ನಿರಂತರವಾಗಿ ಎಚ್ಚರಿಸುತ್ತಿದ್ದರೂ ಬಂಡವಾಳಶಾಹಿಯ ಕುರಿತಾದ ನಮ್ಮ ನಂಬಿಕೆ ಅಚಲವಾಗಿದೆ. ತಾನು ನಿಸರ್ಗದ ಕೇಂದ್ರ ಮತ್ತು ನಿಸರ್ಗವಿರುವುದೇ ನನಗಾಗಿ ಎನ್ನುವ ಮಾನವನ ಸ್ಟೇಚ್ಛಾಚಾರ ಇಂದಿನ ನಮ್ಮ ಕಾಲದ ಹವಾಮಾನ ಸಂಕಟಕ್ಕೆ (climate change) ಪ್ರಮುಖ ಕಾರಣವೆನ್ನಬಹುದು. ಈ ಸ್ವೇಚ್ಚಾಚಾರದ ಹಿಂದಿನ ಪ್ರೇರಕ ಶಕ್ತಿಯೇ ಅಭಿವೃದ್ಧಿ ಎನ್ನುವ ಬಂಡವಾಳಶಾಹಿ ಸಿದ್ಧಾಂತ. ಈ ಅಭಿವೃದ್ಧಿಯ ನಾಗಾಲೋಟದಲ್ಲಿ ನಾವು ಮಾನವ ಬದುಕಿನ ಸಮಸ್ತ ಕಾಳಜಿಗಳನ್ನು ಮರೆತುಬಿಟ್ಟು ನಮ್ಮನ್ನು ಸಲಹುವ ನಿಸರ್ಗವನ್ನು, ಎಲ್ಲ ಚರಾಚರ ವಿಶ್ವವನ್ನು ಹಾಗೂ ಮುಂದಿನ ತಲೆಮಾರಿನ ಭವಿಷ್ಯವನ್ನು ವಿನಾಶದ ಅಂಚಿಗೆ ತಳ್ಳುತ್ತಿದ್ದೇವೆ.
ಯುದ್ಧ, ಹಿಂಸೆ, ಅತಿರೇಕದ ಐಹಿಕದಾಹ, ನೈಸರ್ಗಿಕ ಸಂಪತ್ತಿನ ದುಂದುವೆಚ್ಚ, ಕೆಲವೇ ಕೆಲವು ಕೈಗಳಲ್ಲಿ ಸಂಗ್ರಹವಾಗಿರುವ ಅಪಾರ ಧನರಾಶಿ, ಆರ್ಥಿಕ ಅಸಮತೆ ಮತ್ತು ವಿಷಮತೆ, ಧಾರ್ಮಿಕ, ಜನಾಂಗೀಯ ಮತ್ತು ರಾಷ್ಟ್ರೀಯ ಉಗ್ರಗಾಮಿತ್ವ ಇವೆಲ್ಲವೂ ಇಂದು ನಮ್ಮ ಜಗತ್ತಿನಲ್ಲಿ ತಾಂಡವವಾಡುವ ಕಠೋರ ಸತ್ಯಗಳು. ಬಹುಶಃ ಅನೇಕ ದಶಕಗಳ ಹಿಂದೆ ಕನ್ನಡದ ಕವಿ ಬೇಂದ್ರೆಯವರಾಡಿದ ‘ಕುರುಡು ಕಾಂಚಾಣ ಕುಣಿಯುತ್ತಲಿತ್ತು ಕಾಲಿಗೆ ಸಿಕ್ಕವರ ಒದೆಯುತ್ತಲಿತ್ತು’ ಎನ್ನುವ ಕಾವ್ಯೋಕ್ತಿ ನಮ್ಮ ಕಾಲದ ಜಾಗತಿಕ ವಿಪ್ಲವವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ. ಅಥವಾ 19ನೆಯ ಶತಮಾನದ ಉತ್ಕ್ರಷ್ಟ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ತನ್ನ ವಿಶಿಷ್ಟ ಕಾಲಜ್ಞಾನದಲ್ಲಿ ಮುನ್ಸೂಚಿಸಿದಂತೆ ಬಂಡವಾಳ ಶಾಹಿಯ ಜಯದ್ರಥ ನಡಿಗೆಗೆ ಯಾವ ಅಡೆ-ತಡೆಯೂ ಇಲ್ಲವೇ ಎನ್ನುವ ಭಾವವನ್ನು ನಮ್ಮಲ್ಲಿ ಮೂಡಿಸುತ್ತದೆ. ಒಟ್ಟಿನಲ್ಲಿ ನಮ್ಮ ಕೈ ಮೀರಿದಂತೆ ಕಾಣಿಸುವ ಆದರೆ ನಿರಂತರವಾಗಿ ನಮ್ಮನ್ನು ತನ್ನ ಪಾಶದಲ್ಲಿ ನಿರ್ಣಾಯಕವಾಗಿ ಬಂಧಿಸುತ್ತಿರುವ ಬಂಡವಾಳಶಾಹಿಯ ಅಭಿವೃದ್ಧಿ ಸಿದ್ಧಾಂತ ಮತ್ತು ಅನುಭೋಗ ಸಂಸ್ಕೃತಿಗಳಿಂದ ನಮಗೆ ಮುಕ್ತಿ ಇಲ್ಲ ಎನ್ನುವುದು ನಾವು ಇಂದು ಎದುರಿಸುತ್ತಿರುವ ಬಹುದೊಡ್ಡ ಅಂತರರಾಷ್ಟ್ರೀಯ ನಿರಾಸೆ.
ರಾಷ್ಟ್ರೀಯ ನಿರಾಸೆ
ಲೋಹಿಯಾ ತಮ್ಮ ಕಾಲದಲ್ಲಿ ರಾಷ್ಟ್ರೀಯ ನಿರಾಸೆ ಎಂದು ಕರೆದ ವಿದ್ಯಮಾನವನ್ನು, ನಾವು ನಮ್ಮ ಇಂದಿನ ಈ ಕಾಲದಲ್ಲಿ ಏನೆಂದು ಗುರುತಿಸಬಹುದು? ಬಹುಶಃ ಭಾರತದ ಪ್ರಜಾತಂತ್ರದ ವಿಫಲತೆಯನ್ನು ನಮ್ಮ ಕಾಲದ ಅತ್ಯಂತ ಪ್ರಮುಖವಾದ ರಾಷ್ಟ್ರೀಯ ನಿರಾಸೆ ಎನ್ನಬಹುದೇನೋ? ವಸಾಹತುಶಾಹಿಯ ವಿರುದ್ದದ ನಮ್ಮ ಸೈದ್ಧಾಂತಿಕ ರಾಜಕೀಯ ಸಂಘರ್ಷದ ಮೂಲಕ ತಾನು ಗಳಿಸಿಕೊಂಡ ಸ್ವಾತಂತ್ರ್ಯದ ಅರ್ಥವನ್ನು ಸಂವಿಧಾನ ರಚನೆ ಮತ್ತು ಪ್ರಜಾತಾಂತ್ರಿಕ ಸಂಘ -ಸಂಸ್ಥೆಗಳ ಮೂಲಕ ಸಾಕ್ಷಾತ್ಕರಿಸಿಕೊಳ್ಳಲು ನಾವು ಯತ್ನಿಸಿದೆವು. ವಸಾಹತುಶಾಹಿಯ ಕಪಿಮುಷ್ಠಿಯಿಂದ ಪಾರಾದ ತೃತೀಯ ಜಗತ್ತಿನ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತ; ಪ್ರಜಾತಂತ್ರದ ಜೊತೆಗೆ ನಡೆಸಿದ ಪ್ರಯೋಗ ಮತ್ತು ಅನುಸಂಧಾನ ಶ್ಲಾಘನೀಯವಾದದ್ದೇ. ಆದರೆ ಕಳೆದ 75 ವರ್ಷಗಳ ಭಾರತದ ಈ ಪ್ರಜಾತಾಂತ್ರಿಕ ರಾಜಕಾರಣದ ಪ್ರಯೋಗ ನಿಧಾನವಾಗಿ ಆದರೆ ನಿಸ್ಸಂಶಯವಾಗಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಪ್ರಜಾತಂತ್ರ ಪ್ರತಿನಿಧಿಸುವ ದಾರ್ಶನಿಕ ನೋಟ ಮತ್ತು ಅದು ಎತ್ತಿ ಹಿಡಿಯುವ ಮಾನವೀಯ ಮೌಲ್ಯಗಳು ನಿಧಾನವಾಗಿ ಭಾರತದಲ್ಲಿ ಅರ್ಥ ಕಳೆದುಕೊಳ್ಳುತ್ತಿದ್ದು ಕೇವಲ ಒಂದು ಕಾಟಾಚಾರವಾಗಿಯಷ್ಟೇ ಪ್ರಜಾತಂತ್ರ ಇಂದು ನಮ್ಮ ಜೊತೆಗಿದೆ.
ಪ್ರಜಾತಂತ್ರದ ತಾತ್ವಿಕತೆಯ ಕುರಿತು ಅಧ್ಯಯನ ನಡೆಸುತ್ತಿರುವ ಅನೇಕ ವಿದ್ವಾಂಸರು ಹಾಗೂ ಭಾರತೀಯ ಪ್ರಜಾತಂತ್ರದ ಕುರಿತು ಚಿಂತನೆ ನಡೆಸಿದ ಅನೇಕ ವಿಮರ್ಶಕರು ಪ್ರಜಾತಂತ್ರದ ಪ್ರಯೋಗದಲ್ಲಿ ಅದರ ತಿರುಳು ಮರೆಯಾಗಿ ತೊಗಟೆ ಮಾತ್ರ ಉಳಿದುಕೊಳ್ಳುವ ಅಪಾಯದ ಕುರಿತು ನಮ್ಮನ್ನೆಚ್ಚರಿಸುತ್ತಾ ಬಂದಿದ್ದಾರೆ. ಇಂದಿನ ನಮ್ಮ ಭಾರತ ಪ್ರಜಾತಂತ್ರದ ಒಂದು ಆಡಂಬರದ ತೋರಿಕೆಯಾಗಿ ಕಾಣಿಸುತ್ತದೆಯೇ ಹೊರತು ಒಂದು ಸತ್ವಶೀಲ-ಕ್ರಿಯಾಶೀಲ ವಿದ್ಯಮಾನವಾಗಿ ಕಾಣಿಸುತ್ತಿಲ್ಲ. ರಾಜಕೀಯ ಪಕ್ಷಗಳು ಜನರ ಎದುರಿಗೆ ಸೈದ್ಧಾಂತಿಕ ಪರ್ಯಾಯಗಳನ್ನು ಇಡುವ ಬದಲಾಗಿ ವಿವಿಧ ಕಾರ್ಪೊರೇಟ್ ಹಿತಾಸಕ್ತಿಗಳ ಏಜೆನ್ಸಿಗಳಾಗಿ ಚುನಾವಣೆಯನ್ನು ಒಂದು ಬಿಸಿನೆಸ್ ಎನ್ನುವಂತೆ ನಿರ್ವಹಿಸುತ್ತಿವೆ.
ಪ್ರಸ್ತುತ ಅತ್ಯಂತ ಹೆಚ್ಚು ಚರ್ಚೆಗೊಳಗಾಗುತ್ತಿರುವ ಹಾಗೆಯೇ ಚರ್ಚೆಗೆ ಒಳಗಾಗದಂತೆ ಮುಖ್ಯವಾಹಿನಿಯ ಮಾಧ್ಯಮಗಳು (ಗೋದಿ ಮೀಡಿಯಾ) ತಡೆಯುತ್ತಿರುವ ಚುನಾವಣಾ ಬಾಂಡ್ ನ ಪ್ರಕರಣವೇ ಭಾರತದ ಚುನಾವಣಾ ರಾಜಕಾರಣದಲ್ಲಿ ಈ ದೇಶದ ಕಾರ್ಪೊರೇಟ್ ಶಕ್ತಿಗಳು ಎಷ್ಟು ಬಲವಾಗಿ ಬೇರೂರಿವೆ ಎಂಬುದನ್ನು ಸೂಚಿಸುತ್ತಿದೆ. ಈ ಕಾರ್ಪೊರೇಟ್ ಪ್ರಣೀತ ಚುನಾವಣಾ ರಾಜಕಾರಣದಲ್ಲಿ ಪ್ರಜಾತಂತ್ರ ಕೇವಲ ಹೆಸರಿಗೆ ಮಾತ್ರ ಇದೆ. ರಾಜಕೀಯ ಪಕ್ಷಗಳು ಜಾತಿವಾರು ಲೆಕ್ಕಾಚಾರಗಳಲ್ಲಿ ಮುಳುಗಿರುವ ಜನರ ಆಸೆ-ಆಕಾಂಕ್ಷೆಗಳಿಗೆ ಕುಮ್ಮಕ್ಕು ನೀಡುತ್ತ, ಅಂತಿಮವಾಗಿ ಧನಬಲದಿಂದ ಚುನಾವಣೆಯನ್ನು ಗೆಲ್ಲುವ ಐಪಿಎಲ್ ಕ್ರಿಕೆಟ್ ತಂಡಗಳಂತೆ ಕಾಣಿಸುತ್ತಿವೆ. ಈ ’ಐಪಿಎಲ್ ತಂಡಗಳ’ ಮಾಲಕರು ಪ್ರೇಕ್ಷಕರ ಗ್ಯಾಲರಿಯಲ್ಲಿ ಹರ್ಷೋದ್ಗಾರಗಳನ್ನು ಮಾಡುತ್ತಿದ್ದಾರೆ. ಪ್ರಜಾತಂತ್ರವನ್ನು ಕೇವಲ ಚುನಾವಣೆಗೆ ಸಮೀಕರಿಸುವ, ಚುನಾವಣೆಯ ಯಶಸ್ಸನ್ನೇ ಅಂತಿಮ ಎಂದೂ, ಬಹುಮುಖ್ಯವೆಂದೂ ತಿಳಿಯುವ, ಜನಸಮುದಾಯಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ, ಜನರ ಆಶೋತ್ತರಗಳಿಗೆ ವಿಮುಖವಾದ ರಾಜಕೀಯ ಪಕ್ಷಗಳಿಂದ ಮತ್ತು ಅದರ ಮುಂಚೂಣಿಯಲ್ಲಿರುವ ರಾಜಕೀಯ ವರ್ಗದಿಂದ ಯಾವ ಬಗೆಯ ಸಾತ್ವಿಕ ಪ್ರಜಾತಂತ್ರವನ್ನು ನಾವು ಈ ನಮ್ಮ ದೇಶದಲ್ಲಿ ನಿರೀಕ್ಷಿಸಲು ಸಾಧ್ಯ.
ಭಾರತದ ಪ್ರಜಾತಂತ್ರ ಇಂದು ಬಹುಮುಖ್ಯವಾಗಿ ಎದುರಿಸುತ್ತಿರುವ ಮತ್ತು ಅದರ ವಿಫಲತೆಗೆ ಬಹುಮುಖ್ಯವಾದ ಕಾರಣ ಉದ್ರಿಕ್ತ ರಾಷ್ಟ್ರವಾದವನ್ನು ಪ್ರತಿನಿಧಿಸುವ ಹಿಂದುತ್ವದ ರಾಜಕಾರಣವೇ ಆಗಿದೆ. ಭಾರತ ತನ್ನ ಒಳಗೆ ಮತ್ತು ಹೊರಗೆ ಎದುರಿಸುತ್ತಿರುವ ಭೀಕರ ಸಮಸ್ಯೆಗಳಿಂದ ಜನರ ಗಮನವನ್ನು ತಪ್ಪಿಸುವುದಕ್ಕಾಗಿ ಹಿಂದುತ್ವದ ರಾಜಕಾರಣ ಇಲ್ಲಸಲ್ಲದ ಸಮಸ್ಯೆಗಳನ್ನೇ ಬಹುದೊಡ್ಡದೆಂದು ಜನರ ಮುಂದೆ ಇಡುತ್ತಿದೆ. ಹಿಂದುತ್ವದ ಭೀಕರವಾದ ಸಿದ್ಧಾಂತ ಮತ್ತು ವಿಘಟನಕಾರಿ ರಾಜಕಾರಣಕ್ಕೆ ಬದಲಿ ಆಗಬಹುದಾದ, ಸಶಕ್ತವಾದ, ಜನಪರವಾದ, ಸಮಾನತಾವಾದಿ ಪರ್ಯಾಯಗಳನ್ನು ಇತರೆ ಲಿಬರಲ್ ಪಕ್ಷಗಳು ಕಟ್ಟುವಲ್ಲಿ ವಿಫಲವಾಗಿರುವುದು ಭಾರತದ ಪ್ರಜಾತಂತ್ರದ ದುರಂತಕ್ಕೆ ಕಾರಣವೆನ್ನಬಹುದು. ಇದನ್ನೇ ನಮ್ಮ ಕಾಲದ ರಾಷ್ಟ್ರೀಯ ನಿರಾಸೆ ಎಂದು ಕರೆಯಬಹುದು.
ಮಾನವಿಕ ನಿರಾಸೆ
ಲೋಹಿಯಾ ತಮ್ಮ ಕಾಲದಲ್ಲಿ ಗುರುತಿಸಿದ ಮಾನವಿಕ ನಿರಾಸೆ, ನಾವು ಈಗಾಗಲೇ ಗುರುತಿಸಿದ ಎರಡು ನಿರಾಸೆಗಳಿಗಿಂತಲೂ ದಾರುಣವಾದದ್ದು, ಭೀಕರವಾದದ್ದು ಮತ್ತು ಆಳವಾದದ್ದು. ಒಂದರ್ಥದಲ್ಲಿ ನಮ್ಮ ಕಾಲದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿರಾಸೆಗಳ ಬೀಜವಿರುವುದು ಮಾನವಿಕ ನಿರಾಸೆಯಲ್ಲಿಯೇ. ಇಂದು ನಾವು ಎದುರಿಸುವ ಪ್ರಮುಖ ಅಪಾಯಗಳು ಎಂದು ಯಾವನ್ನೆಲ್ಲಾ ಗುರುತಿಸುತ್ತೇವೆಯೋ ಅವೆಲ್ಲವೂ ಮಾನವರಾದ ನಮ್ಮ ದಯನೀಯ ವೈಫಲ್ಯದ ಫಲಿತಾಂಶಗಳೇ ಆಗಿವೆ. ಇಂದು ನಮ್ಮ ಸುತ್ತಮುತ್ತಲಿನ ದೈನಂದಿನ ಜೀವನದಲ್ಲಿ ನಾವು ಎದುರಿಸುವ ಮತ್ತು ಅನುಭವಿಸುವ ಹಿಂಸೆ, ಭ್ರಷ್ಟತೆ, ಸಂಕುಚಿತತೆ, ಅಸಹನೆ ಮತ್ತು ಲಜ್ಜೆಗೇಡಿತನಗಳಂತಹ ವಿರೂಪಗಳು ಮಾನವನ ನೈಜ ಸ್ವಭಾವದ ಬಗೆಗಿನ ನಮ್ಮ ಆಶಾಭಾವವನ್ನು ಪ್ರಶ್ನಿಸುವಂತೆ ಮಾಡಿದೆ. ಮಾನವ ತನ್ನ ಸ್ವಭಾವದಲ್ಲಿ ಸರಳನೂ, ಸಜ್ಜನನೂ ಆಗಿರುತ್ತಾನೆ. ಆತನ ಚೈತನ್ಯದಲ್ಲಿ ತನ್ನಂತೆ ಪರರನ್ನು ಬಗೆಯುವ, ತನ್ನಂತಲ್ಲದವರನ್ನು ಗೌರವಿಸುವ, ವಿಶ್ವದ ಎಲ್ಲಾ ಚರಾಚರ ವಸ್ತುಗಳೊಂದಿಗೆ ಅವಿನಾಸಂಬಂಧವನ್ನು ಹೊಂದುವ ಗುಣ ಇದೆ ಎಂಬ ತತ್ವಜ್ಞಾನಿಗಳ ನೋಟವನ್ನು ಹುಸಿಗೊಳಿಸುವ ರೀತಿಯಲ್ಲಿ ನಾವಿಂದು ವ್ಯವಹರಿಸುತ್ತಿದ್ದೇವೆ.
ನಮ್ಮ ದೈನಂದಿನ ಬದುಕಿನ ವ್ಯಾಪಾರ ವ್ಯವಹಾರಗಳು ಸಾಂಗವಾಗಿ ನೆರವೇರುತ್ತಿರುವಂತೆ ಮೇಲು ನೋಟಕ್ಕೆ ಕಾಣಿಸಿದರೂ ಇಂದಿನ ನಮ್ಮ ಬದುಕಿನ ಆಳದಲ್ಲಿ ವಿವರಿಸಲಾಗದ ಪ್ರಕ್ಷುಬ್ಧತೆ, ಆತಂಕ ಮತ್ತು ಭಯ ಹಾಸು ಹೊಕ್ಕಂತಿದೆ. ಬಹುಶಃ ಆಧುನಿಕ ಕಾಲದ ಮೊತ್ತ ಮೊದಲ ರಾಜಕೀಯ ಚಿಂತಕನೆಂದು ಪರಿಗಣಿಸಲಾದ ಥಾಮಸ್ ಹೋಬ್ಸ್ ಹೇಳುವಂತೆ ಭಯ, ಆತಂಕ ಮತ್ತು ರಕ್ಷಣಾ ರಹಿತತೆಯಿಂದ ಬಳಲುವ ಮಾನವನಷ್ಟು ಅಪಾಯಕಾರಿ ಜಂತು ಇನ್ನೊಂದಿಲ್ಲ ಎನ್ನುವುದು ನಮ್ಮ ಕಾಲದ ದಿನನಿತ್ಯದ ಹಿಂಸೆಯ ಸಂದರ್ಭದಲ್ಲಿ ಸರಿ ಎನ್ನಿಸುತ್ತದೆ.
ಮೂಲಭೂತವಾದ, ಕೋಮುವಾದ, ಸರ್ವಾಧಿಕಾರ, ಫ್ಯಾಸೀಸಂ, ಧಾರ್ಮಿಕ ಸಂಕುಚಿತವಾದ, ಜಾತಿವಾದ, ಜನಾಂಗೀಯವಾದ ಎಂದೆಲ್ಲಾ ನಾವು ಗುರುತಿಸುವ ಮತಾಂಧತೆಯ ವಿಶ್ವರೂಪಗಳು ಮಾನವನ ವಿವೇಕ ಮತ್ತು ಸದ್ಗುಣಗಳನ್ನು ಸದೆ ಬಡಿಯುತ್ತದೆ ಮತ್ತು ಆತನನ್ನು ರಕ್ತಪಿಪಾಸು ಸೈತಾನನ್ನಾಗಿ ಪರಿವರ್ತಿಸುತ್ತದೆ ಎನ್ನುವ ತಿಳಿವಳಿಕೆಯಲ್ಲಿ ನಮ್ಮೊಳಗಿನ ಸೈತಾನನ ವಿರುದ್ಧ ನಾವು ನಡೆಸುವ ಹೋರಾಟವೇ ಮೂಲಭೂತವಾದದ್ದು. ಮಾನವನಲ್ಲಿ ಇರುವ ಸದ್ಗುಣಗಳನ್ನು ಜಾಗೃತಗೊಳಿಸುವ ಮತ್ತು ಆತನಲ್ಲಿಯೇ ಇರುವ ದುಷ್ಟತನದ ವಿರುದ್ಧ ಸತ್ಯಾಗ್ರಹದ ಹೋರಾಟವನ್ನು ನಡೆಸುವ ಗಾಂಧಿ ಮಾದರಿ ಮತ್ತು ಚಿಂತನೆ ನಾವು ಇಂದು ಎದುರಿಸುತ್ತಿರುವ ಮಾನವಿಕ ನಿರಾಸೆಗೆ ಪರಿಹಾರವಾಗಬಹುದೇನೋ?
ನಿತ್ಯಾನಂದ ಬಿ ಶೆಟ್ಟಿ ಮತ್ತು ರಾಜಾರಾಂ ತೋಳ್ಪಾಡಿ ಅವರು ಬರೆದ ಲೇಖನ ಓದಿದೆ. ಮೂರು ನಿರಾಶೆಗಳನ್ನು ಎಷ್ಟು ಸ್ಪಷ್ಟವಾಗಿ, ಕಾಳಜಿ ತುಂಬಿದ ಭಾಷೆಯಲ್ಲಿ ವಿವರಿಸಿದ್ದಾರೆ ಎಂದರೆ ಇದನ್ನು ಓದಿದ ಬಳಿಕ ಆಶಾಕಿರಣವೊಂದು ಕಾಣಿಸಿತು. ನಿರಾಶೆ, ದುಃಖ, ಅಸಹಾಯಕತೆ ಮುಂತಾದವನ್ನು ಸ್ಪಷ್ಟವಾಗಿ, ಕಳಕಳಿಯಿಂದ ವಿವರಿಸುವ ಕ್ರಿಯೆಯೇ ಆಶಾವಾದದ ದ್ಯೋತಕ, ಇಂಡಿಕೇಟರ್. ಅದಿಲ್ಲದೆ ಇಷ್ಟು ಸೊಗಸಾದ ಅಷ್ಟೇ ಘನವಾದ ನಿರೂಪಣೆ ಸಾಧ್ಯವಿಲ್ಲ.
ಈ ಲೇಖನ ಓದುತ್ತ 2019ರ ಲೋಕಸಭಾ ಚುನಾವಣಾ ಫಲಿತಾಂಶದ ದಿನ ನೆನಪಾಗುತ್ತದೆ. ಅಂದು ನಾನು ಕುಮಟಾ ತಾಲ್ಲೂಕಿನ ಹೊಳೆಗದ್ದೆ ಬಳಿಯ ಬೆತ್ತಗೇರಿಯ ನನ್ನ ಅಜ್ಜನ ಮನೆಯಲ್ಲಿದ್ದೆ. ಬೇಕಂತಲೇ ಆ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದೆ. ಮನಸ್ಸಿನಲ್ಲಿ ದಟ್ಟ ನಿರಾಶೆಯಿತ್ತು. ಅಜ್ಜ ಬೆಳಗ್ಗೆಯಿಂದ ಟೀವಿ ಹಚ್ಚಿಕೊಂಡು ರಿಸಲ್ಟ್ ನೋಡುತ್ತ ಕುಳಿತಿದ್ದರೆ ನಾನು ಅಂಗಳದಲ್ಲಿ, ತೋಟದಲ್ಲಿ, ಕೊನೆಗೆ ಕಡಲ ಕಿನಾರೆಯನ್ನು ತಾಗಿ, ಬಾಗಿರುವ ಬೆಳ್ಳಾರೆ ಗುಡ್ಡದ ಮೇಲೆ ಕುಳಿತು ಲೋಹಿಯಾರ ‘ನಿರಾಶೆ ಕಾಲದ ಕರ್ತವ್ಯಗಳು’ ಪುಸ್ತಕ ಓದ್ತಾ ಇದ್ದೆ. ಸಂಜೆ ಅಜ್ಜನ ಮನೆಗೆ ಮರಳಿದಾಗ ನನ್ನೆಣಿಕೆಯಂತೆ ಬಿಜೆಪಿ ದೊಡ್ಡ ಬಹುಮತದಿಂದ ಗೆದ್ದಿತ್ತು. ಆದರೆ ಆ ದಿನ ನನ್ನನ್ನು ಲೋಹಿಯಾರ ಆ ಪುಸ್ತಕ ಬ್ರೇಕ್ಡೌನ್ ಆಗದಂತೆ ತಡೆದಿತ್ತು. ಆ ಪುಸ್ತಕದಲ್ಲೇನಿತ್ತು ಎನ್ನುವುದು ನನಗೆ ಈಗ ಅಷ್ಟಾಗಿ ನೆನಪಿಲ್ಲ. ಆದರೆ ಅದನ್ನು ಓದಿದಾಗ ನನಗುಂಟಾದ ಅನುಭವದ ನೆನಪು ಇನ್ನೂ ಹಸಿಹಸಿಯಾಗಿದೆ. ದಟ್ಟ ನಿರಾಶೆಯ ನಿಜ ಸ್ವರೂಪದ ಅರಿವು ಕೂಡ ನಮ್ಮಲ್ಲಿ ಆಶಾವಾದವನ್ನು ಮೂಡಿಸಬಲ್ಲದು.
ಈ ಲೇಖನದಲ್ಲಿ ಒಂದು ವಾಕ್ಯದ ಕುರಿತು ನನಗೆ ಸಣ್ಣ ಅನುಮಾನವಿದೆ. “ಜನರ ಆಶೋತ್ತರಗಳಿಗೆ ವಿಮುಖವಾದ ರಾಜಕೀಯ ಪಕ್ಷಗಳು” ಎಂದು ಬರೆದಿದ್ದಾರೆ. ಬಹುಶಃ ಇದರ ಜೊತೆಗೆ “ಜನರ ಆಶೋತ್ತರಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ರೂಪಿಸುವ ರಾಜಕೀಯ ಪಕ್ಷಗಳು” ಎಂದೂ ಸೇರಿಸಬಹುದಿತ್ತೇನೋ. ೧೨೦ ಕೋಟಿ ಭಾರತೀಯರ ಆಶೋತ್ತರ ಇಂದು ಈಡೇರಿತು ಎಂದು ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ, ಸಂಘ ಪರಿವಾರ, ಕಾರ್ಪೊರೇಟ್ ಹಿಡಿತದ ಸುದ್ದಿ ಮಾಧ್ಯಮಗಳು ವರ್ಣಿಸಿದ್ದವು. ನನಗನ್ನಿಸುತ್ತದೆ, ಈ ‘ಆಶೋತ್ತರ’ ಎನ್ನುವುದು ಕೂಡ ಒಂದು ಡಿಸ್ಕೋರ್ಸ್. ನಮ್ಮ ಅನುದಿನದ ಬದುಕಿನಲ್ಲಿನ ಅನೇಕ ಆಸೆ, ನಿರೀಕ್ಷೆಗಳನ್ನು ನಿರ್ದಿಷ್ಟ ರೀತಿಯಲ್ಲಿ ಪೋಷಿಸುತ್ತ, ರೂಪಿಸುತ್ತ, ಅವುಗಳಿಗೆ ಸಾಂಘಿಕ ಸ್ವರೂಪ ಮತ್ತು ಅಮೂರ್ತ ಧ್ಯೇಯದ ಚಹರೆಯನ್ನು ನೀಡಿದಾಗ ‘ಜನರ ಆಶೋತ್ತರ’ ಎನ್ನುವುದು ಸೃಷ್ಟಿಯಾಗುತ್ತದೆಯೇನೋ. ಸದ್ಯಕ್ಕೆ ನನಗೆ ಹಾಗೆ ಅನ್ನಿಸುತ್ತಿದೆ. ವಿಚಾರ ಮಾಡಬೇಕು.
“ಮಾನವಿಕ ನಿರಾಸೆ, ನಾವು ಈಗಾಗಲೇ ಗುರುತಿಸಿದ ನಿರಾಸೆಗಳಿಗಿಂತಲೂ ದಾರುಣವಾದದ್ದು” ಎಂದು ಲೇಖಕರು ಗುರುತಿಸಿದ್ದು, ತಕ್ಕಂತೆ ಮಾನವಿಕ ನಿರಾಸೆಯನ್ನು ವಿವರಿಸಿದ್ದು ಈ ಲೇಖನದ ಅತ್ಯಂತ ಮಹತ್ವದ ಭಾಗ ಎಂದು ನನಗನ್ನಿಸುತ್ತದೆ.
ಎಷ್ಟೋ ದಿನಗಳ ಬಳಿಕ ಬಹಳ ಕಾಡುವ ಲೇಖನವನ್ನೊಂದು ಓದಿದೆ.
ಸಮೂಹ ಸನ್ನಿಯಂತೆ ಆವರಿಸುತ್ತಿರುವ ಭಾರತದ ಇಂದಿನ ಫ್ಯಾಸಿಸಮ್ ವಾತಾವರಣದಲ್ಲಿ ಸೂಕ್ಷ್ಮ ಮನಸ್ಸಿನ ಯಾವ ವ್ಯಕ್ತಿಯೂ ಉಸಿರಾಟವೂ ಕಷ್ಟ ಎನ್ನುತಹ ಭೀಕರ ನಿರಾಶಾದಾಯಕ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ತಕ್ಕಮಟ್ಟಿಗಿನ ಪರಿಹಾರ ಎಂಬಂತೆ ಲೋಹಿಯಾ ಅವರ ‘ನಿರಾಸೆಯ ಕರ್ತವ್ಯ’ ಲೇಖನವನ್ನು ಈ ಇಬ್ಬರು ಲೇಖಕರು ಇಲ್ಲಿ ಮೆಲುಕಾಡಿಸಿರುವುದು ಬಾಯಾರಿದವನಿಗೆ ಬೊಗಸೆ ನೀರು ಸಿಕ್ಕಂತಿದೆ. ಬೇಂದ್ರೆಯವರ ಕುರುಡು ಕಾಂಚಾಣದ ಕವನದ ಸಾಲು ‘ಕಾಲಿಗೆ ಸಿಕ್ಕವರ ತುಳಿಯತಲಿತ್ತು’ ಎಂದಾಗಬೇಕು.
ಲೋಹಿಯಾ ಗುರುತಿಸಿರುವ ಮೂರೂ ವಿಧದ ನಿರಾಸೆಗಳನ್ನು ಇಬ್ಬರೂ ಲೇಖಕರು ಇಂದಿನ ಭಾರತದ ಸನ್ನಿವೇಶಕ್ಕೆ ಕಾಳಜಿಯಿಂದಲೂ, ಆತಂಕದಿಂದಲೂ ಅನ್ವಯಿಸಿ ಎಚ್ಚರಿಸಿದ್ದಾರೆ. ಪರಿಹಾರ ಹೇಗೆ ಕಾಣುವುದು?