- ಕಳೆದ ಮೂರು ವರ್ಷಗಳ ಡಬಲ್ ಎಂಜಿನ್ ಸರ್ಕಾರದಲ್ಲಿ ಅಭಿವೃದ್ಧಿ ಡಬಲ್ ಆಗಿಲ್ಲ
- ನಾಡಿನ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಾರ್ಟಿಗೆ ಮತ ನೀಡಬೇಕು : ರಾಘವ್ ಚಡ್ಡಾ
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಎಷ್ಟೇ ಹಣ ನೀಡಿದರೂ ಕರ್ನಾಟಕದ ಜನತೆ ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಮತ ಹಾಕಬೇಕು ಎಂದು ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕರೆ ನೀಡಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, “ಕರ್ನಾಟಕದಲ್ಲಿ ಚಿಕ್ಕಮಕ್ಕಳಿಂದ ಹಿರಿಯ ನಾಗರಿಕರ ತನಕ ಎಲ್ಲರಿಗೂ ಗುತ್ತಿಗೆ ಕಾಮಗಾರಿಗಳಲ್ಲಿ ಅಕ್ರಮವಾಗಿರುವುದು ಗಮನಕ್ಕೆ ಬರುತ್ತಿದೆ. ರಾಜ್ಯ ಅಭಿವೃದ್ಧಿಯಾಗಬೇಕು. ಇಲ್ಲಿನ ಜನರು ನೆಮ್ಮದಿಯಿಂದ ಬದುಕಬೇಕಾದರೆ ಈ 40% ಕಮಿಷನ್ ಸರ್ಕಾರ ಹೋಗಬೇಕು. ಇಲ್ಲಿ ೦% ಕಮಿಷನ್ ಪಡೆಯುವ ಹಾಗೂ 100% ಪ್ರಾಮಾಣಿಕವಾಗಿ ಕೆಲಸ ಮಾಡುವ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚನೆಯಾಗಬೇಕು. ರಾಜ್ಯದ ಅಭಿವೃದ್ಧಿಗಾಗಿ ಡಬಲ್ ಎಂಜಿನ್ ಸರ್ಕಾರ ಮುಂದುವರಿಯಬೇಕು ಎಂದು ಬಿಜೆಪಿ ನಾಯಕರು ಪದೇಪದೆ ಹೇಳುತ್ತಿದ್ದಾರೆ. ಆದರೆ, ಕಳೆದ ಮೂರು ವರ್ಷಗಳ ಡಬಲ್ ಎಂಜಿನ್ ಸರ್ಕಾರದಲ್ಲಿ ಅಭಿವೃದ್ಧಿ ಡಬಲ್ ಆಗುವ ಬದಲು ಕಮಿಷನ್ ಪರ್ಸೆಂಟೇಜ್ ಡಬಲ್ ಆಗಿದೆ” ಎಂದು ಹೇಳಿದರು.
“ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯು ಹಲವು ಜನಪರ ಹಾಗೂ ಅಭಿವೃದ್ಧಿಪರ ಗ್ಯಾರಂಟಿಗಳನ್ನು ನೀಡಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಆರೋಗ್ಯ ಕೇಂದ್ರಗಳ ನಿರ್ಮಾಣ, ಉದ್ಯೋಗ ಸೃಷ್ಟಿ, ಶುದ್ಧ ಹಾಗೂ ಉಚಿತ ಕುಡಿಯುವ ನೀರು, ದಿನವಿಡೀ ವಿದ್ಯುತ್ ಪೂರೈಕೆ ಹಾಗೂ 200 ಯೂನಿಟ್ ತನಕ ಉಚಿತ ವಿದ್ಯುತ್, ರೈತರಿಗೆ ಸಾಲಮನ್ನಾ ಬೆಂಬಲಬೆಲೆ ಸೇರಿದಂತೆ ಮುಂತಾದ ಅನೇಕ ಯೋಜನೆಗಳನ್ನು ಆಮ್ ಆದ್ಮಿ ಪಾರ್ಟಿ ಮಾತ್ರ ಸೂಕ್ತ ರೀತಿಯಲ್ಲಿ ಜಾರಿಗೆ ತರಬಲ್ಲದು” ಎಂದು ರಾಘವ್ ಚಡ್ಡಾ ಹೇಳಿದರು.
“ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜನರಿಗೆ ಹಣ ಹಾಗೂ ನಾನಾ ಆಮಿಷಗಳನ್ನು ಒಡ್ಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಜನರು ಅವುಗಳನ್ನು ತೆಗೆದುಕೊಳ್ಳಬಾರದು ಎಂದು ನಾನು ಹೇಳುವುದಿಲ್ಲ. ಏಕೆಂದರೆ, ಜನರ ತೆರಿಗೆಯನ್ನು ಲೂಟಿ ಮಾಡಿದ ಹಣದಿಂದಲೇ ಅವೆಲ್ಲವನ್ನು ನೀಡಲಾಗುತ್ತಿದೆ. ಆದರೆ, ಜನರು ಯಾರಿಂದ ಏನನ್ನೇ ತೆಗದುಕೊಂಡರೂ, ನಾಡಿನ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಾರ್ಟಿಗೆ ಮತ ನೀಡಬೇಕು. ದೇಶದಲ್ಲಿ ಬಿಜೆಪಿ ಮಾತ್ರ ಇರಬೇಕು ಹಾಗೂ ವಿರೋಧಪಕ್ಷಗಳು ಇರಬಾರದೆಂದು ಬಿಜೆಪಿ ನಿರ್ಧರಿಸಿದೆ. ಆದ್ದರಿಂದಲೇ ಆಮ್ ಆದ್ಮಿ ಪಾರ್ಟಿ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗುತ್ತಿದೆ. ದೆಹಲಿಯ ಶಿಕ್ಷಣ ಸಚಿವರಾಗಿದ್ದ ಮನೀಷ್ ಸಿಸೋದಿಯಾ ನಿವಾಸದಲ್ಲಿ ಕೇವಲ ₹10,000 ನಗದು ಸಿಕ್ಕಿದ್ದರೂ ಅವರನ್ನು ವಿಚಾರಣೆ ನೆಪದಲ್ಲಿ ಬಂಧಿಸಲಾಗಿದೆ” ಎಂದು ರಾಘವ್ ಚಡ್ಡಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ನಕಲಿ ನೇರ ನೇಮಕಾತಿ ಪ್ರಮಾಣ ಪತ್ರಗಳ ಹಾವಳಿ: ಬೆಸ್ಕಾಂನಿಂದ ದೂರು ದಾಖಲು
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಚುನಾವಣಾ ಉಸ್ತುವಾರಿ ದಾಮೋದರನ್, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ವಕ್ತಾರರಾದ ಉಷಾ ಮೋಹನ್ ಮತ್ತಿತರರು ಭಾಗವಹಿಸಿದ್ದರು.