ಈ ದಿನ ಸಂಪಾದಕೀಯ | ಬಸವಣ್ಣ, ಕುವೆಂಪು, ಶರೀಫರು ನಡೆದಾಡಿದ ಈ ನೆಲಕ್ಕೆ ಯೋಗಿ ಮಾದರಿಯ ಆಡಳಿತ ಬೇಕೇ ಭೈರಪ್ಪನವರೇ?

Date:

Advertisements
ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರದಲ್ಲಿ ನಂ. 1 ಎನಿಸಿರುವ ಉತ್ತರಪ್ರದೇಶದ ಮಾದರಿ ನಮಗೆ ಬೇಕಿತ್ತು ಎಂದು ಹೇಳುವ ಮೂಲಕ ಭೈರಪ್ಪನವರು ಜೀವವಿರೋಧಿ, ಸ್ತ್ರೀವಿರೋಧಿ ಎಂಬುದನ್ನು ಜಾಹೀರುಪಡಿಸಿದ್ದಾರೆ.

 

ಕಾದಂಬರಿಕಾರ ಎಸ್‌ ಎಲ್‌ ಭೈರಪ್ಪ ಅವರಿಗೆ ವಯಸ್ಸು ಇಳಿಯುತ್ತಿದ್ದಂತೆ ಅವರ ಮೋದಿ ಪ್ರೇಮ ಏರುತ್ತಲೇ ಇದೆ. ಅವರ ಬಿಜೆಪಿ ಪರ ನಿಲುವು ಕಾಲ ಕಾಲಕ್ಕೆ ಬಹಿರಂಗವಾಗುವುದು ತಪ್ಪದು. ಸಂಘ ಪರಿವಾರ ಅಥವಾ ಬಲಪಂಥೀಯರು ಅವರನ್ನು ಭೇಟಿಯಾಗಿಯೋ, ಸಮಾರಂಭಕ್ಕೆ ಅತಿಥಿಯಾಗಿ ಕರೆದೋ ಅವರಿಂದ ರಾಜಕೀಯ ಭಾಷಣ ಮಾಡಿಸುತ್ತಿರುತ್ತಾರೆ.

ಇಂದೂ ಅಷ್ಟೇ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌ ಜೊತೆಗೆ ಸ್ಥಳೀಯ ಬಿಜೆಪಿ ನಾಯಕರು ಭೈರಪ್ಪನವರ ಆಶೀರ್ವಾದ ಪಡೆಯಲು ಅವರ ಮನೆಗೆ ಹೋಗಿದ್ದಾರೆ. ಬಿಜೆಪಿ ಮೇಲಿನ ಪ್ರೀತಿ, ಕಾಂಗ್ರೆಸ್‌ ಮೇಲಿನ ಎಂದಿನ ಅಸಹನೆ ಹೊರಹಾಕಿ, ಹಿಂದೆ ಇದ್ದ ಬಿಜೆಪಿ ಸರ್ಕಾರ ʼಯೋಗಿ ಮಾದರಿʼಯ ಆಡಳಿತ ನೀಡಿದ್ದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೇ ಬರುತ್ತಿರಲಿಲ್ಲ ಎಂದು ಅಸಹನೆ ಕಾರಿದ್ದಾರೆ. ಆ ಮೂಲಕ ಅವರು ಯೋಗಿ ರಾಜ್ಯದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರು, ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ, ಧಾರ್ಮಿಕತೆಯ ಹೆಸರಿನ ಹಲ್ಲೆ, ಇವೆಲ್ಲ ಯೋಗಿ ಸರ್ಕಾರದ  ಮಾದರಿ ಅದ್ಭುತ ಎಂದು ಹಾಡಿ ಹೊಗಳಿದ್ದಾರೆ.

ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಅವರದ್ದು ಕಾಂಗ್ರೆಸ್‌ ಟೀಕೆ ತಪ್ಪುವುದಿಲ್ಲ. ಮೋದಿ ಮೇಲಿನ ಕುರುಡು ಭಕ್ತಿ ಅವರನ್ನು ಕುರುಡಾಗಿಸಿದೆ. ತಮ್ಮ ಬಾಲ್ಯ, ಯೌವ್ವನ, ವೃದ್ದಾಪ್ಯದ ಕಾಲದಲ್ಲಿ ಆಡಳಿತ ನಡೆಸಿದ ಸರ್ಕಾರಗಳಿಗಿಂತ ಈ ಹತ್ತು ವರ್ಷಗಳ ದ್ವೇಷಪೂರಿತ ಮೋದಿ ಆಡಳಿತವೇ ಉತ್ತಮ ಅನ್ನಿಸಿದೆ. ಕೋಮುದ್ವೇಷ, ನಿರುದ್ಯೋಗ, ಬಡತನ, ಮಹಿಳಾ ಸುರಕ್ಷತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮಗಳ ಸ್ವಾತಂತ್ರ್ಯ ವಿಚಾರದಲ್ಲಿ ಭಾರತದ ಪ್ರಗತಿಯ ಸೂಚ್ಯಂಕ ವಿಶ್ವ ಮಟ್ಟದಲ್ಲಿ ಪಾತಾಳ ಕಂಡಿದ್ದರೂ ಭೈರಪ್ಪ ಅವರ ಬುದ್ಧಿಮತ್ತೆಗೆ ಮೋದಿ ಆಡಳಿತವೇ ಶ್ರೇಷ್ಠ ಎನಿಸಿದೆ. ಮೋದಿ ಅತ್ಯುತ್ತಮ ನಾಯಕ, ವಿಶ್ವನಾಯಕ, ಅವತಾರ ಪುರುಷ ಎಂಬ ಮಟ್ಟಕ್ಕೆ ಹೇಳಿಕೆ ಕೊಡುವ ಈ ಹಿರಿಯರು ಮೋದಿ ಆಡಳಿತ ಕುರಿತ ಹತ್ತು ಹಲವು ಅಂತಾರಾಷ್ಟ್ರೀಯ ಸೂಚ್ಯಂಕಗಳು ಏನನ್ನು ಹೇಳುತ್ತವೆ ಎಂದು ಅರಿಯದಷ್ಟು ಜಾಣ ಮರೆವಿನ ಕಾಯಿಲೆ ಇವರನ್ನು ಆವರಿಸಿ ಕವಿದಿದೆ.

Advertisements

ದೇಶದಲ್ಲಿ ಈ ಹತ್ತು ವರ್ಷಗಳಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂಧನ, ಅಡುಗೆ ಅನಿಲ, ದಿನಬಳಕೆಯ ವಸ್ತುಗಳು, ದವಸ -ಧಾನ್ಯ, ರೈತೋಪಕರಣಗಳ ಬೆಲೆ ಯಾವ ಮಟ್ಟದಲ್ಲಿ ಏರಿಕೆಯಾಗಿದೆ? ಡಾಲರ್‌ ಎದುರು ರೂಪಾಯಿ ಮೌಲ್ಯ ಎಷ್ಟು ಕುಸಿದಿದೆ ಎಂಬ ಅರಿವು ಭೈರಪ್ಪನವರಿಗೆ ಇರಬೇಕಿತ್ತು.  ಅದ್ಯಾವ  ಅಳತೆಗೋಲಿನಲ್ಲಿ ಯೋಗಿ ಆಡಳಿತ ಉತ್ತಮ ಅಂತ ತೀರ್ಮಾನಿಸಿದರೋ ಗೊತ್ತಿಲ್ಲ. ಹಸಿವುಮುಕ್ತ ಕರ್ನಾಟಕದ ಪ್ರಯತ್ನವಾದ ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಟೀಕಿಸಿದ್ದವರು ಇದೇ ಭೈರಪ್ಪನವರು. ವಾರಾನ್ನ ತಿಂದು ಓದಿದವರು. ಅನ್ನಭಾಗ್ಯದಿಂದ  ಜನ ಸೋಮಾರಿಗಳಾಗುತ್ತಾರೆ ಎಂದು ಹೀಗಳೆದಿದ್ದರು. ಈಗ ಬಡವರನ್ನು ಮೇಲೆತ್ತುವ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತ, ‘ಬಿಟ್ಟಿ ಯೋಜನೆ’ಗಳು ರಾಜ್ಯದ ಖಜಾನೆಯನ್ನು ಖಾಲಿ ಮಾಡುತ್ತವೆ ಎಂದು ಬಡಬಡಿಸಿದ್ದರು.

ಅಷ್ಟೇ ಆಗಿದ್ದರೆ ಅಂಧಭಕ್ತಿ ಎಂದು ಸುಮ್ಮನಿರಬಹುದಿತ್ತು. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರದಲ್ಲಿ ನಂ. 1 ಎನಿಸಿರುವ ಉತ್ತರಪ್ರದೇಶದ ಮಾದರಿ ನಮಗೆ ಬೇಕಿತ್ತು ಎಂದು ಹೇಳುವ ಮೂಲಕ ಭೈರಪ್ಪನವರು ಜೀವವಿರೋಧಿ, ಸ್ತ್ರೀವಿರೋಧಿ ಎಂಬುದನ್ನು ಜಾಹೀರುಪಡಿಸಿದ್ದಾರೆ.

“ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲೋದು ಕಷ್ಟ. ಅರ್ಧ ಸ್ಥಾನಗಳನ್ನು ಮಾತ್ರ ಗೆಲ್ಲಬಹುದು. ಉತ್ತರ ಪ್ರದೇಶದ ಯೋಗಿ ಮಾದರಿಯ ಸರ್ಕಾರ ಇದ್ದಿದ್ದರೆ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಬಲವಾಗಿದೆ. ಆದರೆ, ಬಿಜೆಪಿ ಬಹಳ ದುರ್ಬಲವಾಗಿದೆ” ಎಂದು ಹೇಳಿದ್ದಾರೆ. ಅವರಿಗೆ ಕಾಂಗ್ರೆಸ್‌ ಪ್ರಬಲವಾಗಿರುವುದು ಅರಗಿಸಿಕೊಳ್ಳಲಾಗದ ಸತ್ಯ ಆಗಿರಬಹುದು. ಆದರೆ ಕಾನೂನು ಸುವ್ಯವಸ್ಥೆ, ಶಿಕ್ಷಣ, ಆರೋಗ್ಯ, ಮಹಿಳಾ ಸುರಕ್ಷತೆ, ಅಲ್ಪಸಂಖ್ಯಾತರ ಸುರಕ್ಷತೆ, ಉದ್ಯೋಗ ಸೃಷ್ಟಿ ಇವೆಲ್ಲದರಲ್ಲಿಯೂ ಹಿಂದುಳಿದ ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ಆಡಳಿತ ಮಾದರಿ ಅನ್ನಿಸಿದ್ದು ಅಚ್ಚರಿಯೇ ಸರಿ.

ಬಸವಣ್ಣ, ಕುವೆಂಪು, ನಾರಾಯಣಗುರು, ಶರೀಫರ ಸೌಹಾರ್ದ ಪರಂಪರೆಯನ್ನು ವಿಶ್ವಕ್ಕೆ ಎತ್ತಿ ತೋರಿಸಿದ ಈ ನೆಲಕ್ಕೆ ಯೋಗಿ ಆಡಳಿತ ಮಾದರಿಯಾಗಬೇಕು ಎಂಬುದು ಪರಮ ಪಾಪದ ಆಲೋಚನೆ. ಭೈರಪ್ಪನವರು ಬಲಪಂಥೀಯರನ್ನು ಮೆಚ್ಚಿಸಲು ಹೋಗಿ ಮನುಷ್ಯತ್ವ ಮರೆತಿದ್ದಾರೆ. ಅವರದ್ದು ಮೋದಿಯ ಮೇಲಿನ ಅತಿಯಾದ ಭಕ್ತಿ ಇರಬಹುದು. ಆದರೆ, ಯೋಗಿಯಂತಹ ದುರಾಡಳಿತಗಾರನನ್ನು ಮೆಚ್ಚಿ, ಅಂತಹ ಮಾದರಿ ಆಡಳಿತ ಕರ್ನಾಟಕಕ್ಕೆ ಬೇಕಿತ್ತು ಎಂದು ಬಯಸೋದು ಒಬ್ಬ ಸಾಹಿತಿಯಾಗಿ, ತನ್ನದೇ ಓದುಗ ವಲಯಕ್ಕೆ, ಕನ್ನಡದ ಜಾತ್ಯತೀತ ಮಣ್ಣಿಗೆ ಮಾಡುವ ಘೋರ ಅಪಮಾನವೇ ಸರಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X