ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀತಂ ಗೌಡ ಅವರ ಪತ್ನಿ ಕಾವ್ಯ ಅವರು ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಎರಡೆರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಪ್ರೀತಂ ಗೌಡ ಚುನಾವಣೆ ಕಣದಿಂದ ಹಿಂದೆ ಸರಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಜೆಡಿಎಸ್‌ನ ಆಂತರಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿತ್ತು. ಬಳಿಕ ಸ್ವರೂಪ್‌ಗೆ ಟಿಕೆಟ್ ಸಿಗುವ ಮೂಲಕ ಸುಖಾಂತ್ಯ ಕಂಡಿದೆ. ಭವಾನಿ ರೇವಣ್ಣ ಅವರೂ ಕೂಡ ಸ್ವರೂಪ್‌ಗೆ ಸಾಥ್ ನೀಡಿದ್ದು, ಸ್ವರೂಪ್ ನನ್ನ ಮಗನಿದ್ದಂತೆ ಎಂದು ಹೇಳಿದ್ದಾರೆ.
ಜೆಡಿಎಸ್ ವಿಷಯ ತಣ್ಣಗಾಗುತ್ತಲೇ, ಪ್ರೀತಂ ಗೌಡ ಅವರ ಪತ್ನಿ ಕಾವ್ಯ ಅವರು ನಾಮಪತ್ರ ಸಲ್ಲಿಕೆ ಮಾಡಿರುವುದು ಇನ್ನೊಂದು ರೀತಿಯ ಸದ್ದನ್ನು ಉಂಟುಮಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಜೆಡಿಎಸ್ ಉಮೇದುವಾರರ 3ನೇ ಪಟ್ಟಿ ಬಿಡುಗಡೆ : ಅನಿಲ್ ಲಾಡ್, ಆಯನೂರು, ಸಂತೋಷ್‌ಗೂ ಟಿಕೆಟ್
ಜೆಡಿಎಸ್ ಮತ್ತು ಬಿಜೆಪಿ ನಡುವಿನ ಪ್ರಬಲ ಪೈಪೋಟಿ ನಡುವೆ ಕಾಂಗ್ರೆಸ್‌ನಿಂದ ಬನವಾಸೆ ರಂಗಸ್ವಾಮಿ ಕಣಕ್ಕಿಳಿದಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಕಣ್ಮರೆಯಾಯಿತು ಎನ್ನುವ ಹಿಂದೆಯೇ ಬನವಾಸೆ ರಂಗಸ್ವಾಮಿ ಅವರು ಕಾಂಗ್ರೆಸ್‌ನ ಸ್ಥಳೀಯ ನಾಯಕರನ್ನು ಒಟ್ಟುಗೂಡಿಸಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ.
ಹಾಸನದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ. ಈ ನಡುವೆ ಪ್ರೀತಂ ಪತ್ನಿ ಕಾವ್ಯ ಎರಡೆರಡು ನಾಮಪತ್ರ ಸಲ್ಲಿಸಿ ಸಂಚಲನವನ್ನುಂಟು ಮಾಡಿದ್ದಾರೆ.