- ಐದನೇ ಪಟ್ಟಿಯಲ್ಲಿ ನಾಲ್ಕು ಕ್ಷೇತ್ರಗಳ ಘೋಷಣೆ ಮಾಡಿದ ಕಾಂಗ್ರೆಸ್
- ಇನ್ನೂ ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡ ಕೈ ಪಡೆ
ಕಾಂಗ್ರೆಸ್‌ನ ಬಹು ನಿರೀಕ್ಷಿತ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆಯಾಗಿದ್ದು, ನಾಲ್ಕು ಕ್ಷೇತ್ರಗಳ ಉಮೇದುವಾರರನ್ನು ಕೈ ಪಕ್ಷ ಘೋಷಿಸಿದೆ.
ವಿವಾದಿತ ಪುಲಿಕೇಶಿನಗರವನ್ನೂ ಒಳಗೊಂಡಂತೆ ಇತರೆ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿರುವ ಕೈ ಪಡೆ ಇನ್ನೂ ನಾಲ್ಕು ಕ್ಷೇತ್ರಗಳ ಉಮೇದುವಾರಿಕೆಯನ್ನು ಕುತೂಹಲದಲ್ಲಿಟ್ಟಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರು ಪ್ರಭಲ ಅಭ್ಯರ್ಥಿ ಹಾಕುವುದಾಗಿ ಹೇಳಿದ್ದ ಕಾಂಗ್ರೆಸ್ ಇಲ್ಲಿ ಹೊಸ ಮುಖ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ.
ಇದಕ್ಕೂ ಮೊದಲು ಈ ಕ್ಷೇತ್ರದಿಂದ ಮೊಹ್ಮದ್ ಯೂಸೂಪ್ ಸುರಾನಾ ಅವರನ್ನು ಕಣಕ್ಕಿಳಿಸಿತು. ಈಗ ಅವರನ್ನು ಬದಲಾಯಿಸಿ ಹೊಸ ಅಭ್ಯರ್ಥಿ ಯಾಸಿರ್‌ಗೆ ಅವಕಾಶ ನೀಡಿದೆ.
ಪುಲಿಕೇಶಿನಗರಕ್ಕೆ ನೆಡೆದಿದ್ದ ಟಿಕೆಟ್ ಗುದ್ದಾಟದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಮೀರಿಸಿ ಟಿಕೆಟ್ ಪಡೆಯುತ್ತಾರೆಂದು ಬಿಂಬಿತವಾಗಿದ್ದ ಮಾಜಿ ಮೇಯರ್ ಸಂಪತ್ ಕುಮಾರ್ ಅವರಿಗೂ ಟಿಕೆಟ್ ತಪ್ಪಿದ್ದು, ಈ ಹಿಂದೆ ಮಹದೇವಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ ಸಿ ಶ್ರೀನಿವಾಸ್‌ಗೆ ಇಲ್ಲಿನ ಟಿಕೆಟ್ ನೀಡಲಾಗಿದೆ.
ಹಾಗೆಯೇ ಎಲ್ಲರ ಕುತೂಹಲ ಕಾಯಿಸಿದ್ದ ಮುಳಬಾಗಿಲು ಕ್ಷೇತ್ರಕ್ಕೂ ಕಾಂಗ್ರೆಸ್ ಹೊಸ ಮುಖ, ಪಕ್ಷದ ಕಾರ್ಯಕರ್ತ ಡಾ. ಮುದ್ದುಗಂಗಾಧರ್ ಅವರನ್ನು ಕಣಕ್ಕಿಳಿಸಿದೆ.
ಮುದ್ದುಗಂಗಾಧರ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಪ್ತ, ಸಂವಿಧಾನ ಕರಡು ಸಮಿತಿ ಸದಸ್ಯರಾಗಿದ್ದ ಟಿ ಚೆನ್ನಯ್ಯನವರ ಮೊಮ್ಮಗ.
ಉಳಿದಂತೆ ಕೆ ಆರ್ ಪುರಕ್ಕೆ ಡಿ ಕೆ ಮೋಹನ್ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿಸಿದೆ.