ಕಾಂಗ್ರೆಸ್ ದಲಿತರ ಹೆಸರಿನಲ್ಲಿ ಓಟ್ ಬ್ಯಾಂಕ್ ಮಾಡಿಕೊಂಡು ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ ಆರೋಪಿಸಿದರು.
ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡ ವಿಶೇಷಾಭಿವೃದ್ದಿ ಯೋಜನೆ (ಎಸ್‌ಇಪಿ-ಟಿಎಸ್‌ಪಿ) ಅನುದಾನವನ್ನು ಅನ್ಯ ಕಾರ್ಯಕ್ಕೆ ಬಳಸದಂತೆ ನಿರ್ಭಂದವಿದ್ದರೂ ಗ್ಯಾರಂಟಿ ಯೋಜನೆಗಳಿಗೆ 25ಸಾವಿರ ಕೋಟಿ ರೂ. ಅನುದಾನ ಬಳಸಿ ಸಮೂದಾಯಗಳಿಗೆ ಅನ್ಯಾಯ ಮಾಡಿದೆ. ಅದೇ ಸಮೂದಾಯಗಳಿಗೆ ಅನುದಾನ ಬಳಸುವುದಾಗಿ ಹೇಳುವ ಸರ್ಕಾರ ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗಲೇ ಎಸ್‌ಇಪಿ-ಟಿಎಸ್‌ಪಿ ಅನುದಾನ ಬಳಸುವದಾಗಿ ಏಕೆ ಹೇಳಲಿಲ್ಲ ಎಂದುಪ್ರಶ್ನಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆಯವರನ್ನು ದೇಶದ ಪ್ರಧಾನಿಯನ್ನಾಗಿಸುವ ಕುರಿತು ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ಪ್ರಸ್ತಾಪಿಸಿದರೂ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ರಾಹುಲಗಾಂಧಿ ಇವರನ್ನು ಬೆಂಬಲಿಸುವ ಮೂಲಕ ದಲಿತ ವಿರೋಧಿ ಎಂಬದನ್ನು ಸಾಬೀತು ಪಡಿಸಿದ್ದಾರೆ ಎಂದರು.
ಈ ಹಿಂದೆ ಬಸವರಾಜ ಬೊಮ್ಮಾಯಿಯವರು ಅಧಿಕಾರದಲ್ಲಿದ್ದ ಪರಿಶಿಷ್ಟ ಜಾತಿಗೆ 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7 ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದ್ದರೂ, ಕೇಂದ್ರದ ಮೇಲೆ ಒತ್ತಡ ಹಾಕದೆ ಸಿದ್ದರಾಮಯ್ಯ ಸರ್ಕಾರ ಮೀಸಲು ಹೆಚ್ಚಿಸುವದಾಗಿ ಸುಳ್ಳು ಹೇಳುತ್ತಲಿದ್ದಾರೆ. ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಜನರಿಗೆ ಟಿಕೆಟ್ ನೀಡಿಲ್ಲ ಅನ್ಯಾಯ ಮಾಡುತ್ತ ಬಂದಿದೆ. ಕಾಂಗ್ರೆಸ್ ಸರ್ಕಾರ ಓಟಿಗಾಗಿ ಮಾತ್ರ ಪರಿಶಿಷ್ಟಜಾತಿ ಮತ್ತು ಪಂಗಡ ಜನರನ್ನು ಬಳಸಿಕೊಂಡು ಬಂದಿದೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಎರಡುಬಾರಿ ಸೋಲಿಸಿದಲ್ಲದೇ ಸೋಲಿಸಿದವರಿಗೆ ಪ್ರಶಸ್ತಿ ನೀಡಿರುವದು ಕಾಂಗ್ರೆಸ್ ಇತಿಹಾಸ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎಸ್ಸಿ-ಎಸ್ಟಿ ಸಮೂದಾಯಗಳು ಬಿಜೆಪಿ ಪರವಾಗಿ ಶೇ.55ರಷ್ಟು ಎಸ್‌ಸಿ, ಶೇ.68 ಎಸ್ಟಿ ಸಮೂದಾಯ ಜನರು ಬೆಂಬಲಿಸಿದ್ದಾರೆ ಎಂದರು.
ದಲಿತರ ಹೆಸರಿನಲ್ಲಿ ಸಮೂದಾಯಗಳಿಗೆ ಆಗುತ್ತಿರುವ ಅನ್ಯಾಯ ಜಾಗೃತಿ ಜನರಲ್ಲಿ ಮೂಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಧ್ಯಮ ವಕ್ತಾರ ಗಿರೀಶ್ ಕನಕವೀಡು, ಕೆ.ಎಂ. ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರರೆಡ್ಡಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಯಲ್ಲಪ್ಪ, ನಗರ ಅಧ್ಯಕ್ಷ ರಾಘವೇಂದ್ರ ಉಟ್ಕುರು, ಬಂಡೇಶ ವಲ್ಕಂದಿನ್ನಿ, ಮಲ್ಲಿಕಾರ್ಜುನ ಹಳ್ಳೂರು ಉಪಸ್ಥಿತರಿದ್ದರು.