ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಂಧನ ವಿರೋಧಿಸಿ ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆಯುತ್ತಿರುವ ‘ಇಂಡಿಯಾ’ ಒಕ್ಕೂಟದ ‘ಪ್ರಜಾಪ್ರಭುತ್ವ ಉಳಿಸಿ’ ಬೃಹತ್ ರ್ಯಾಲಿಯು ಭಾರಿ ಸಂಖ್ಯೆಯ ಧನಿಗೆ ಸಾಕ್ಷಿಯಾಯಿತು.
ತನಿಖಾ ಸಂಸ್ಥೆಗಳ ಮೂಲಕ ವಿಪಕ್ಷ ನಾಯಕರನ್ನು ಬಂಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡುತ್ತಿರುವ ಬಿಜೆಪಿಯ ಕೆಟ್ಟ ರಾಜಕೀಯ ನೀತಿಯನ್ನು ಇಂಡಿಯಾ ಒಕ್ಕೂಟದ ನಾಯಕರು ಖಂಡಿಸಿದರು.
ಈ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದ ಪರವಾಗಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಚುನಾವಣಾ ಆಯೋಗಕ್ಕೆ ಐದು ಬೇಡಿಕೆಗಳನ್ನು ಮುಂದಿಟ್ಟರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ
“ಚುನಾವಣೆಗೆ ಮುನ್ನ ಎಲ್ಲ ಪಕ್ಷಗಳಿಗೂ ಪ್ರಜಾತಂತ್ರ ವ್ಯವಸ್ಥೆಯ ಸಮಾನ ಆದ್ಯತೆಯನ್ನು ಒದಗಿಸುವುದು. ವಿಪಕ್ಷಗಳನ್ನು ಆರ್ಥಿಕವಾಗಿ ಬಲವಂತವಾಗಿ ಕುಗ್ಗಿಸುವುದನ್ನು ನಿಲ್ಲಿಸುವುದು.ಇ.ಡಿ, ಆದಾಯ ತೆರಿಗೆ ದಾಳಿಗಳನ್ನು ಕೂಡ ತಕ್ಷಣ ನಿಲ್ಲಿಸುವುದು. ಚುನಾವಣಾ ಬಾಂಡ್ಗಳ ಮೂಲಕ ಹಣ ಸುಲಿಗೆ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸುವುದು ಹಾಗೂ ಬಿಜೆಪಿ ನಡೆಸುತ್ತಿರುವ ಅನ್ಯಾಯಗಳನ್ನು ತಡೆಗಟ್ಟುವುದು” ಎಂದು ಚುನಾವಣಾ ಆಯೋಗಕ್ಕೆ ಪ್ರಿಯಾಂಕಾ ಗಾಂಧಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಭಾರತದಲ್ಲಿ ಪ್ರಜಾತಂತ್ರ ಉಳಿಸಲು ಇಂಡಿಯಾ ಒಕ್ಕೂಟ ಹೋರಾಟ ಮಾಡಿ ಗೆಲ್ಲುವುದಾಗಿ ಇಂಡಿಯಾ ಒಕ್ಕೂಟದ ನಾಯಕರು ಒಕ್ಕೊರಲಿನಿಂದ ತಿಳಿಸಿದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಾತನಾಡಿ, ನೀವು ಕೇಜ್ರಿವಾಲ್ ಅವರನ್ನು ಬಂಧಿಸಬಹುದು ಆದರೆ ಅವರ ಚಿಂತನೆಗಳನ್ನು ಬಂಧಿಸಲು ಸಾಧ್ಯವೇ? ಭಾರತದಲ್ಲಿ ಜನಿಸುವ ಲಕ್ಷಾಂತರ ಕೇಜ್ರಿವಾಲ್ಗಳನ್ನು ಯಾವ ಸೆರೆಮನೆಯಲ್ಲಿ ಬಂಧಿಸಿಡುತ್ತೀರಿ ಎಂದು ಪ್ರಶ್ನಿಸಿದರು.
