ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ

Date:

ಫೆ.15ರಿಂದ ಮಾ. 30ರವರೆಗೆ, ಬಾಂಡ್ ಹಗರಣ ಬಹಿರಂಗವಾದ ನಂತರದ ನಲವತ್ತೈದು ದಿನಗಳಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಗಮನಿಸಿದರೆ, ದೇಶದ ರಾಜಕಾರಣದಲ್ಲಾದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಮೋದಿಯವರ ಈ ಕೃತ್ಯ ಯಾವ ಭಯೋತ್ಪಾದನೆಗೆ ಕಡಿಮೆ ಇಲ್ಲವೆನಿಸುತ್ತದೆ. 

ಚುನಾವಣಾ ಬಾಂಡ್ ಯಾವುದೇ ಕಾರಣಕ್ಕೂ ಬಹಿರಂಗವಾಗುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ ಭಾವಿಸಿತ್ತು. ಲೋಕಸಭಾ ಚುನಾವಣೆ ಮುಗಿಯುವವರೆಗೆ ಮುಚ್ಚಿಡಲು ಶಕ್ತಿಮೀರಿ ಶ್ರಮಿಸಿತ್ತು. ಬಾಂಡ್ ದೇಣಿಗೆ ಸಂಗ್ರಹವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಡುತ್ತಿತ್ತು. ಅದರ ಛೇರ್ಮನ್ ಆಯ್ಕೆಯೂ ಕೇಂದ್ರ ಸರ್ಕಾರದ ಕೈಯಲ್ಲಿತ್ತು.

ಅಕಸ್ಮಾತ್, ಬಾಂಡ್ ಬಗ್ಗೆ ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದರೆ, ಪ್ರಾಮಾಣಿಕತೆ, ಪಾರದರ್ಶಕತೆಯ ಪಾಠ ಮಾಡಿ, ಪ್ರಶ್ನಿಸಿದವರನ್ನೇ ಕಳ್ಳರಂತೆ ಚಿತ್ರಿಸಲಾಗುತ್ತಿತ್ತು. ಚಿತ್ರಿಸಲು ಗೋದಿ ಮೀಡಿಯಾಗಳನ್ನು, ಸರ್ಕಾರಿ ಏಜೆನ್ಸಿಗಳನ್ನು, ಬಿಜೆಪಿಯ ಅಕ್ಷೋಹಿಣಿ(ಐಟಿ ಸೆಲ್) ಸೈನ್ಯವನ್ನು ಬಳಸಲಾಗುತ್ತಿತ್ತು.

ಆದರೆ ದೇಶದ ಸರ್ವೋಚ್ಚ ನ್ಯಾಯಾಲಯ ಫೆ. 15ರಂದು ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿ, ರದ್ದುಗೊಳಿಸಿತು. ಅಷ್ಟೇ ಅಲ್ಲ, ಯಾರ್‍ಯಾರು ಯಾವ್ಯಾವ ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಕೇಳಿತು. ಅದನ್ನು ಚುನಾವಣಾ ಆಯೋಗ ದೇಶದ ಜನತೆಯ ಮುಂದಿಡಬೇಕು ಎಂದು ತಾಕೀತು ಮಾಡಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬೆಳವಣಿಗೆಯಿಂದ ಬೆಚ್ಚಿದ ಮೋದಿ ಮೌನಕ್ಕೆ ಶರಣಾದರು. ಸಂಘ ಪರಿವಾರದ ಸದ್ದಡಗಿತು. ಬಿಜೆಪಿ ನಾಯಕರು ಬಾಯಿಬಿಟ್ಟರೆ ಬಣ್ಣಗೇಡು ಎಂದರಿತು, ಬಿಲ ಸೇರಿಕೊಂಡರು.

ಫೆ.15ರಿಂದ ಮಾ. 30ರವರೆಗೆ, ಬಾಂಡ್ ಹಗರಣ ಬಹಿರಂಗವಾದ ನಂತರದ ನಲವತ್ತೈದು ದಿನಗಳಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಗಮನಿಸಿದರೆ, ದೇಶದ ರಾಜಕಾರಣದಲ್ಲಾದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಮೋದಿಯವರ ವಿಚಲಿತ ವರ್ತನೆಯ ವಿರಾಟರೂಪ ಅನಾವರಣಗೊಳ್ಳುತ್ತದೆ.

ಸುಪ್ರೀಂ ಕೋರ್ಟಿನ ಆದೇಶ ಹೊರಬಂದ ನಂತರ, ಫೆ. 20ರಂದು ಬಾಯಿಬಿಟ್ಟ ಮೋದಿಯವರು, ಚುನಾವಣಾ ಬಾಂಡ್ ಹಗರಣವನ್ನು ಕೃಷ್ಣ-ಸುಧಾಮನ ಕತೆಗೆ ಹೋಲಿಸಿ ತಮಾಷೆ ಮಾಡಿದ್ದರು. ತಮ್ಮನ್ನು ಕೃಷ್ಣ ಪರಮಾತ್ಮನಿಗೆ ಹೋಲಿಸಿಕೊಂಡಿದ್ದರು. ಸುಧಾಮನ ಅವಲಕ್ಕಿಯನ್ನು ದೇಣಿಗೆಗೆ ಸಮೀಕರಿಸಿ, ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೇಲಿ ಮಾಡಿದ್ದರು. ನ್ಯಾಯಾಂಗದ ಘನತೆಗೆ ಪ್ರಧಾನಿಗಳೇ ಧಕ್ಕೆ ತಂದಿದ್ದರು.

ಫೆ. 22ರಂದು ತೆರಿಗೆ ಪಾವತಿಸಿಲ್ಲ ಎಂಬ ನೆಪವೊಡ್ಡಿ, ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಯಿತು. ಆ ಮೂಲಕ ಕಾಂಗ್ರೆಸ್ ಪಕ್ಷ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ನರಳುವಂತೆ, ಚುನಾವಣೆ ಎದುರಿಸಲಾಗದೆ ಸೊರಗುವಂತೆ, ಸೋಲಿನ ದವಡೆಗೆ ಸಿಲುಕುವಂತೆ ನೋಡಿಕೊಳ್ಳಲಾಯಿತು.

ಫೆ. 28ರಂದು, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು, ಮನಿ ಲಾಂಡರಿಂಗ್ ಕೇಸ್‌ನಲ್ಲಿ ಇಡಿ ಮೂಲಕ ಬಂಧಿಸಲಾಯಿತು. ಜಾರ್ಖಂಡ್‌ನಲ್ಲಾದ ರಾಜಕೀಯ ಅರಾಜಕತೆ ಮತ್ತು ಮುಖ್ಯಮಂತ್ರಿಯ ಬಂಧನವನ್ನು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವಂತೆ ನೋಡಿಕೊಳ್ಳಲಾಯಿತು. ಆ ಮೂಲಕ ಇಂಡಿಯಾ ಒಕ್ಕೂಟದ ಬಲವನ್ನು ಕುಗ್ಗಿಸಲು ಹವಣಿಸಿತು.

ಮಾ. 11ರಂದು ಪೌರತ್ವ ತಿದ್ದುಪಡಿ ಕಾಯ್ದೆ 2019(ಸಿಎಎ) ಜಾರಿಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತು. ಇದು ದೇಶದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳಾಗಿ, ಜನರನ್ನು ಕೋಮು ಗಲಭೆಗೆ ಪ್ರಚೋದಿಸುತ್ತದೆ ಎಂದು ಭಾವಿಸಿತು. ಆ ಗಲಭೆಗಳಿಂದಾಗಿ ಬಾಂಡ್ ಹಗರಣ ಹಿನ್ನೆಲೆಗೆ ಸರಿಯುತ್ತದೆಂದು ಬಿಜೆಪಿ ಭ್ರಮಿಸಿತು. ಆದರೆ ದೇಶದ ಜನ ಪ್ರಬುದ್ಧತೆ ಪ್ರದರ್ಶಿಸಿ, ಬಿಜೆಪಿ ಆಟ ನಡೆಯದಾಯಿತು.

ಮಾ. 19ರಂದು ತೆಲಂಗಾಣದ ಬಿಆರ್‍ಎಸ್ ಪಕ್ಷದ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರನ್ನು ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊರಿಸಿ, ಇಡಿ ಮೂಲಕ ಬಂಧಿಸಲಾಯಿತು. ಇದೇ ಹಗರಣದ ಮುಂದುವರೆದ ಭಾಗವಾಗಿ, ಆಮ್ ಆದ್ಮಿ ಪಕ್ಷದ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಕೂಡ ಇಡಿ ಬಳಸಿ, ಮಾ. 21ರಂದು ಬಂಧಿಸಲಾಯಿತು.

ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿರುವ ಆಮ್ ಆದ್ಮಿ ಪಕ್ಷವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ಮತ್ತು ಮೋದಿ, ಅಬಕಾರಿ ನೀತಿ ಹಗರಣವನ್ನು ಮುಂದಿಟ್ಟು ಕೇಜ್ರಿವಾಲ್‌ರನ್ನು ಕಟ್ಟಿಹಾಕಲು, ಆ ಮೂಲಕ ಇಂಡಿಯಾ ಒಕ್ಕೂಟವನ್ನು ಬಲಹೀನಗೊಳಿಸಲು ನೋಡಿತು.

ಏತನ್ಮಧ್ಯೆ, ಮಾ. 26ರಂದು ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಪಟ್ಟಭದ್ರರ ನಿರ್ದಿಷ್ಟ ಗುಂಪು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಹರೀಶ್ ಸಾಳ್ವೆ ನೇತೃತ್ವದ 600ಕ್ಕೂ ಹೆಚ್ಚು ವಕೀಲರು ಪತ್ರ ಬರೆದರು. ಆ ಪತ್ರಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ‘ವಿರೋಧ ಪಕ್ಷಗಳಿಂದ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ’ ಎಂದು ಟ್ವೀಟ್ ಮಾಡಿದರು. ಅಸಲಿಗೆ, ಹರೀಶ್ ಸಾಳ್ವೆ, ಬಾಂಡ್ ಹಗರಣದಲ್ಲಿ ಎಸ್‌ಬಿಐ ಪರ ವಾದ ಮಂಡಿಸಿದ ವಕೀಲರು.

ಇದಾದ ಮೂರು ದಿನಕ್ಕೆ, ಮಾ. 29ರಂದು, ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷಕ್ಕೆ 1,823 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಿತು.

ಎಲೆಕ್ಷನ್ ಬಾಂಡ್ ಮೂಲಕ ಅತಿ ಹೆಚ್ಚು ದೇಣಿಗೆ ಪಡೆದ ಬಿಜೆಪಿ, ದೇಶದ ಜನತೆಯ ಮುಂದೆ ಸತ್ಯ ಬಿಚ್ಚಿಡಲಾಗದೆ ಪಲಾಯನವಾದಕ್ಕಿಳಿದಿದೆ. ತನ್ನ ಮಾನ ಮುಚ್ಚಿಕೊಳ್ಳಲು ಚಿಲ್ಲರೆ ಕಾಸು ಪಡೆದ ವಿರೋಧ ಪಕ್ಷಗಳ ನಾಯಕರನ್ನು ಕಳ್ಳರಂತೆ ಚಿತ್ರಿಸುತ್ತಿದೆ. ಇಂಡಿಯಾ ಒಕ್ಕೂಟದ ಶಕ್ತಿ ಕುಂದಿಸಲು ಸರ್ಕಾರಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ.

ನಲವತ್ತೈದು ದಿನಗಳ ಈ ಘಟನಾವಳಿಗಳು ದೇಶದ ಜನತೆಗೆ ಎಂತಹ ಸಂದೇಶವನ್ನು ರವಾನಿಸುತ್ತವೆ? ವಿರೋಧ ಪಕ್ಷಗಳ ನಾಯಕರನ್ನು ಕಳ್ಳರಂತೆ ಚಿತ್ರಿಸಲು ಮತ್ತು ಒಕ್ಕೂಟವನ್ನು ಛಿದ್ರಗೊಳಿಸಲು ಬಿಜೆಪಿ ಮತ್ತು ಮೋದಿಯವರ ಈ ಕೃತ್ಯ ಯಾವ ಭಯೋತ್ಪಾದನೆಗೆ ಕಡಿಮೆ ಇದೆ? ವಿರೋಧ ಪಕ್ಷಗಳಿಲ್ಲದಂತೆ ಮಾಡುವುದು ಪ್ರಜಾಪ್ರಭುತ್ವವೇ? ಮೋದಿ ಸರ್ವಾಧಿಕಾರಿಯಲ್ಲವೇ?

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...

ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ,...

ಈ ದಿನ ಸಂಪಾದಕೀಯ | ನಿರ್ಮಲಾ ಸೀತಾರಾಮನ್‌ ಮುಕ್ತಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸುವರೇ ?

ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಪ್ರಜ್ಞಾವಂತರು ಸಿದ್ದಪಡಿಸಿರುವ ವೇದಿಕೆಗೆ ಬಂದು ಮುಕ್ತ...