ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಆರ್‌ಎಲ್‌ಡಿಗೆ ಆಘಾತ ಎದುರಾಗಿದ್ದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಾಹಿದ್ ಸಿದ್ದಿಕಿ ತನ್ನ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಇಂದು (ಎಪ್ರಿಲ್ 1) ಎಕ್ಸ್‌ನಲ್ಲಿ (ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ. ಜೊತೆಗೆ “ಚುನಾವಣೆ ಸಂದರ್ಭದಲ್ಲಿ ಚುನಾಯಿತ ಸಿಎಂ ಮತ್ತು ವಿಪಕ್ಷಗಳ ಮೇಲಿನ ದಾಳಿ ದೇಶದ ಪ್ರಜಾಪ್ರಭುತ್ವದ ಮೇಲಿನ ದಾಳಿ” ಎಂದು ಬಣ್ಣಿಸಿದ್ದಾರೆ.
“ನಿನ್ನೆ ನಾನು ಆರ್‌ಎಲ್‌ಡಿಯ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ಮತ್ತು ಅದರ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಮತ್ತು ನನ್ನ ಕುಟುಂಬದವರು ಇಂದಿರಾ ಅವರ ತುರ್ತು ಪರಿಸ್ಥಿತಿಯ ವಿರುದ್ಧ ನಿಂತಿದ್ದೆವು. ಇಂದು ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಿದ ಎಲ್ಲಾ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗಿರುವಾಗ ಅದನ್ನು ನೋಡಿಕೊಂಡು ಮೌನವಾಗಿರಲು ಸಾಧ್ಯವಿಲ್ಲ. ಜಯಂತ್ ಚೌಧರಿ ಅವರಿಗೆ ಮತ್ತು ಪಕ್ಷದ ಇತರ ಸಹೋದ್ಯೋಗಿಗಳಿಗೆ ಧನ್ಯವಾದಗಳು” ಎಂದು ಶಾಹಿದ್ ಸಿದ್ದಿಕಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ಜೊತೆ ನಿತೀಶ್ ಮರು ಹೊಂದಾಣಿಕೆ; ಜೆಡಿಯು ಪ್ರಧಾನ ಕಾರ್ಯದರ್ಶಿ ರಾಜೀನಾಮೆ
ಕೇಂದ್ರ ಸರ್ಕಾರವು ತನ್ನ ದಿವಂಗತ ತಾತ ಮತ್ತು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದ ನಂತರ ಜಯಂತ್ ಚೌಧರಿ ಅವರ ಆರ್‌ಎಲ್‌ಡಿ, ಎನ್‌ಡಿಎ ಕೂಟವನ್ನು ಸೇರಿದರು. ಬಿಜೆಪಿಯು ಈಗ ಆರ್‌ಎಲ್‌ಡಿ ಪ್ರಬಲವಾಗಿರುವ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಸೇರಿಸುವ ಪ್ರಯತ್ನದಲ್ಲಿ ತೊಡಗಿದೆ.
“ಗೌರವಾನ್ವಿತ ಜಯಂತ್ ಅವರೇ, ನಾವು 6 ವರ್ಷಗಳ ಕಾಲ ಜೊತೆಯಲ್ಲೇ ಕೆಲಸ ಮಾಡಿದ್ದೇವೆ ಮತ್ತು ನಮಗೆ ಪರಸ್ಪರ ಗೌರವವಿದೆ. ನಾನು ಒಬ್ಬ ಸಹೋದ್ಯೋಗಿಗಿಂತ ನಿಮ್ಮನ್ನು ಕಿರಿಯ ಸಹೋದರನಾಗಿ ನೋಡುತ್ತೇನೆ. ನಾವು ವಿವಿಧ ಸಮುದಾಯಗಳ ನಡುವೆ ಸಹೋದರತ್ವ ಮತ್ತು ಗೌರವದ ವಾತಾವರಣ ಸೃಷ್ಟಿಗಾಗಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ಜಾತ್ಯತೀತತೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ನಿಮ್ಮ ಬದ್ಧತೆಯನ್ನು ಅನುಮಾನಿಸುವಂತಿಲ್ಲ. ನಿಮ್ಮ ತಾತ ಭಾರತ ರತ್ನ ಚೌಧರಿ ಚರಣ್ ಸಿಂಗ್, ನಿಮ್ಮ ತಂದೆ ದಿವಂಗತ ಅಜಿತ್ ಸಿಂಗ್‌ಜಿ ಮತ್ತು ನೀವು ರಚಿಸಿದ ಪಕ್ಷವು ಈ ಮೌಲ್ಯಗಳಿಗಾಗಿ ನಿಂತಿದೆ” ಎಂದು ಇನ್ನೊಂದು ಟ್ವೀಟ್‌ನಲ್ಲಿ ಶಾಹಿದ್ ಸಿದ್ದಿಕಿ ಹೇಳಿದರು.
ಇದನ್ನು ಓದಿದ್ದೀರಾ? ‘ಆತ್ಮಗೌರವಕ್ಕಿಂತ ಯಾವುದೂ ದೊಡ್ಡದಲ್ಲ’ ಗುಜರಾತ್ ಬಿಜೆಪಿ ಶಾಸಕ ರಾಜೀನಾಮೆ
“ಆದರೆ ಈಗ ಆರ್‌ಎಲ್‌ಡಿ ಎನ್‌ಡಿಎಯ ಭಾಗವಾಗುತ್ತಿರುವುದು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿ ನೇತೃತ್ವದ ಮೈತ್ರಿಯೊಂದಿಗೆ ಸಂಬಂಧ ಹೊಂದಲು ಸಾಧ್ಯವಾಗುತ್ತಿಲ್ಲ. ನಿಮ್ಮ ರಾಜಕೀಯ ನಡೆ ಬಗ್ಗೆ ನನಗೆ ತಿಳಿದಿದೆ. ನಿಮಗೆ ಸಲಹೆ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ಈ ನಿಟ್ಟಿನಲ್ಲಿ ಆರ್‌ಎಲ್‌ಡಿಯಿಂದ ದೂರ ಸರಿಯುತ್ತಿದ್ದೇನೆ. ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದ್ದು, ಮುಂಬರುವ ಚುನಾವಣೆಗೂ ಶುಭ ಕೋರಿದ್ದಾರೆ.
Why I resigned now? Two reasons. I didn’t want to resign immediately as I welcomed the Bharat Ratna accorded to Chaudhry Charan Singh Ji. I didn’t want to be seen opposing it.
Secondly the attack on elected Chief Ministers and Opposition parties when elections have been announced…— shahid siddiqui (@shahid_siddiqui) April 1, 2024
ಹಾಗೆಯೇ ತಾನು ಈಗ ರಾಜೀನಾಮೆ ನೀಡಿರುವುದು ಏಕೆ ಎಂಬುವುದಕ್ಕೆ ಎರಡು ಕಾರಣಗಳನ್ನು ನೀಡಿದ್ದಾರೆ. “ಮೊದಲನೆಯ ಕಾರಣ ಚೌಧರಿ ಚರಣ್ ಸಿಂಗ್ ಜಿ ಅವರಿಗೆ ನೀಡಲಾದ ಭಾರತ ರತ್ನವನ್ನು ನಾನು ಸ್ವಾಗತಿಸಿದ್ದರಿಂದ ನಾನು ಆ ಕ್ಷಣದಲ್ಲೇ ರಾಜೀನಾಮೆ ನೀಡಿ ಅದನ್ನು ವಿರೋಧಿಸಿದಂತೆ ಬಿಂಬಿಸಬಾರದು ಎಂಬ ಉದ್ದೇಶ ಹೊಂದಿದ್ದೆ. ಚುನಾವಣೆ ಘೋಷಣೆಯಾದಾಗ ಚುನಾಯಿತ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷಗಳ ಮೇಲಿನ ದಾಳಿಯು ಭಾರತೀಯ ಪ್ರಜಾಪ್ರಭುತ್ವ ಮತ್ತು ನಾವು ನಿರ್ಮಿಸಿದ ಮಹಾನ್ ಸಂಸ್ಥೆಗಳ ಮೇಲಿನ ದಾಳಿಯಾಗಿದೆ. ಇದು ಎರಡನೇ ಕಾರಣ” ಎಂದು ಶಾಹಿದ್ ಸಿದ್ದಿಕಿ ತಿಳಿಸಿದರು.