ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ದಲಿತ ಯುವಕನನ್ನು ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕ ಮೌನೇಶ ಎಂಬಾತನ ತಾಯಿ ಮಹಾದೇವಿ ಪರಮಣ್ಣ ಅವರು ನೀಡಿದ ದೂರಿನ ಅನ್ವಯ ಮಾ.30 ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅದೇ ಗ್ರಾಮದ ನಾಗರಾಜ, ಸಂಗಪ್ಪ ಮೊರೆ, ಶಿವಣ್ಣ ಹಾಗೂ ನಾಗಣ್ಣ ಎಂಬುವರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 323,324, 504, 506 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಮೌನೇಶ ಹಲ್ಲೆಗೊಳಗಾದ ಯುವಕ. ಮೌನೇಶ ಅವರು ಕಕ್ಕೆರಾ ಗ್ರಾಮದಲ್ಲಿ ಪಾನ್ ಶಾಪ್ ಅಂಗಡಿ ನಡೆಸುತ್ತಿದ್ದು, ಮಾ.29 ರಂದು ಸಂಜೆ ಅದೇ ಗ್ರಾಮದ ನಾಲ್ವರ ಗುಂಪು ಮೌನೇಶ ಅವರ ಪಾನ್ ಶಾಪ್ ಅಂಗಡಿಗೆ ಬಂದು ನೀರಿನ ಬಾಟಲಿ ಖರೀದಿಸಿದ್ದರು. ಬಳಿಕ ದುಡ್ಡು ಕೊಡಿ ಅಂಗಡಿ ಮುಚ್ಚುತ್ತೇನೆ ಎಂದು ಕೇಳಿದ್ದಕ್ಕೆ ಮೌನೇಶ ಅವರೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ನಾಲ್ವರ ಗುಂಪು ನನ್ನ ಮಗನ ತಲೆ ಹಾಗೂ ಕಣ್ಣಿನ ಮೇಲೆ ಕಲ್ಲಿನಿಂದ ಹೊಡೆದಿದ್ದಾರೆ” ಎಂದು ಆರೋಪಿಸಿದ್ದಾರೆ.
“ಗಂಭೀರವಾಗಿ ಗಾಯಗೊಂಡಿರುವ ಮಗನನ್ನು ಕಲಬುರಗಿ ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ನನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ” ಮೌನೇಶ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಈ ಬಾರಿಯ ಚುನಾವಣೆ ದೇಶದ ಸಂವಿಧಾನವನ್ನು ರಕ್ಷಿಸುವ ಚುನಾವಣೆಯಾಗಲಿದೆ : ಸಚಿವ ಪ್ರಿಯಾಂಕ್ ಖರ್ಗೆ
ಈ ಕುರಿತು ಹಲ್ಲೆಗೊಳಗಾದ ಮೌನೇಶ ಅವರ ಸಹೋದರ ನಂದಕುಮಾರ್ ಈದಿನ.ಕಾಮ್ ಜೊತೆಗೆ ಮಾತನಾಡಿ, “ನನ್ನ ತಮ್ಮನ ಅಂಗಡಿಗೆ ಬಂದ ನಾಲ್ವರ ಗುಂಪು ಯಾವುದೇ ಕಾರಣವಿಲ್ಲದೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿದ್ದು ಸಹಿಸಿಕೊಳ್ಳಲು ಆಗುತ್ತಿಲ್ಲ. ನಾವು ನಂಬುವ ತತ್ವ ಸಿದ್ಧಾಂತ ಒಪ್ಪದ ಪಕ್ಷಕ್ಕೆ ಸೇರಿದ ಗುಂಪು ಹಲ್ಲೆ ನಡೆಸಿದೆ. ದಲಿತ ಸಮುದಾಯದವರೇ ಗೃಹಮಂತ್ರಿ ಆಗಿರುವ ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿರುವುದು ದುರಂತ. ಕೂಡಲೇ ನಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಿದ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.