ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಬಿಗ್ ರಿಲೀಫ್ ದೊರೆತಿದೆ. 3,500 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಬಾಕಿ ವಿಚಾರದಲ್ಲಿ ವಿರೋಧ ಪಕ್ಷಗಳ ಮೇಲೆ ಸದ್ಯಕ್ಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 24 ರಂದು ನಡೆಸಲಾಗುವುದು ಎಂದು ನ್ಯಾಯಾಲಯಕ್ಕೆ ಆದಾಯ ತೆರಿಗೆ ಇಲಾಖೆ ಹೇಳಿದೆ.
ಕಾಂಗ್ರೆಸ್ ಪಕ್ಷಕ್ಕೆ ವಿವಿಧ ಹಣಕಾಸು ವರ್ಷಗಳ ತೆರಿಗೆ ಬಾಕಿ ಪಾವತಿಗಳ ನೋಟಿಸ್‌ಅನ್ನು ಆದಾಯ ತೆರಿಗೆ ಇಲಾಖೆ ಕಳುಹಿಸಿದ್ದು, ಸುಮಾರು 3,567 ಕೋಟಿ ಮೊತ್ತದ ತೆರಿಗೆ ಬಾಕಿ ಪಾವತಿಸುವಂತೆ ತಿಳಿಸಿದೆ. ಇದಾದ ಬಳಿಕ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆಡಳಿತಾರೂಢ ಬಿಜೆಪಿಯು ವಿರೋಧ ಪಕ್ಷಗಳ ಮೇಲೆ “ತೆರಿಗೆ ಭಯೋತ್ಪಾದನೆ” ಮಾಡುತ್ತಿದೆ ಎಂದು ಆರೋಪಿಸಿತ್ತು.
ಆದಾಯ ತೆರಿಗೆ ಇಲಾಖೆಯು ಈ ಸಂದರ್ಭದಲ್ಲಿ ನೋಟಿಸ್ ನೀಡಿರುವುದು ಚುನಾವಣೆಗೂ ಮುನ್ನ ವಿಪಕ್ಷಗಳನ್ನು ಆರ್ಥಿಕವಾಗಿ ಕುಗ್ಗಿಸುವ ಪ್ರಯತ್ನವಾಗಿದೆ ಎಂದು ಹೇಳಿರುವ ಕಾಂಗ್ರೆಸ್, ಇದು ಚುನಾವಣೆಯಲ್ಲಿ ಸರಿಸಮಾನವಾದ ಸ್ಪರ್ಧೆಗೆ ಅವಕಾಶ ನೀಡುವುದಿಲ್ಲ ಎಂದಿತ್ತು. ಜೊತೆಗೆ ಈ ವಿಚಾರದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿತ್ತು.
ಇದನ್ನು ಓದಿದ್ದೀರಾ? ಕಾಂಗ್ರೆಸ್‌ಗೆ ಮತ್ತೆ ಐಟಿ ನೋಟಿಸ್; ಒಟ್ಟು 3,567 ಕೋಟಿ ರೂ. ತೆರಿಗೆ ಪಾವತಿ ಬೇಡಿಕೆ!
ಇನ್ನು ಈ ಹಿಂದೆ ಆದಾಯ ತೆರಿಗೆ ಇಲಾಖೆಯು ಬಾಕಿ ಇರುವ 135 ಕೋಟಿ ರೂಪಾಯಿ ಮೊತ್ತವನ್ನು ಪಕ್ಷದ ಖಾತೆಯಿಂದ ಹಿಂಪಡೆದಿದೆ. ಈಗ ಮತ್ತೆ ಒಟ್ಟಾಗಿ 3,500 ಕೋಟಿ ರೂಪಾಯಿ ತೆರಿಗೆ ಪಾವತಿಸಲು ನೋಟಿಸ್ ನೀಡಲಾಗಿದೆ. ಈ ನೋಟಿಸ್ ವಿರುದ್ಧ ಕಾಂಗ್ರೆಸ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ನೇತೃತ್ವದ ಪೀಠ ಇಂದು ವಿಚಾರಣೆ ನಡೆಸಿದೆ.
ಈ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಚುನಾವಣಾ ಸಮಯದಲ್ಲಿ ವಿರೋಧ ಪಕ್ಷದ ವಿರುದ್ಧ ಕೇಂದ್ರೀಯ ಸಂಸ್ಥೆ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ” ಎಂದು ಹೇಳಿದರು.
“2024 ರಲ್ಲಿ ವಿಪಕ್ಷಕ್ಕೆ ಶೇಕಡ 20 ರಷ್ಟು ಬಾಕಿ ಮೊತ್ತ ಪಾವತಿಸಲು ಆಯ್ಕೆಯನ್ನು ನೀಡಲಾಯಿತು. ಅದರಂತೆ 135 ಕೋಟಿ ರೂಪಾಯಿ ಖಾತೆಯಿಂದ ಹಿಂಪಡೆಯಲಾಯಿತು. ಅದಾದ ಬಳಿಕ 1,700 ಕೋಟಿ ರೂಪಾಯಿ ತೆರಿಗೆ ಬೇಡಿಕೆ ಮುಂದಿಡಲಾಗಿದೆ. ಈ ವಿಚಾರದಲ್ಲಿ ಚುನಾವಣೆಯ ನಂತರ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಲೆಕ್ಕಪತ್ರವಿಲ್ಲದ 524 ಕೋಟಿ ರೂ. ವಹಿವಾಟು ಆರೋಪ; ಕಾಂಗ್ರೆಸ್‌ಗೆ ಮತ್ತೆ ಆದಾಯ ತೆರಿಗೆ ನೋಟಿಸ್!
“ಕೇಂದ್ರವು ತೆರಿಗೆ ಬೇಡಿಕೆಯನ್ನು ಹಿಂಪಡೆಯುತ್ತದೆಯೇ” ಎಂದು ಈ ಸಂದರ್ಭದಲ್ಲಿ ನ್ಯಾಯಾಲಯವು ಪ್ರಶ್ನಿಸಿದ್ದು, “ಇಲ್ಲ, ನಾವು ಚುನಾವಣೆಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ” ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ” ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಕೇಂದ್ರವು 135 ಕೋಟಿ ರೂಪಾಯಿ ಸಂಗ್ರಹಿಸಿದೆ. ನಮ್ಮದು ಲಾಭ ಗಳಿಸುವ ಸಂಘಟನೆಯಲ್ಲ, ಕೇವಲ ರಾಜಕೀಯ ಪಕ್ಷ” ಎಂದು ಹೇಳಿದ್ದಾರೆ.