- ರಾಯಚೂರಿನಿಂದ ಮೊಹಮದ್ ಶಾಲಮ್‌ಗೆ ಟಿಕೆಟ್
- ಶಿಡ್ಲಘಟ್ಟದಿಂದ ಬಿ.ವಿ ರಾಜೀವ್ ಗೌಡ ಚುನಾವಣಾ ಕಣಕ್ಕೆ
ರಾಜ್ಯ ವಿಧಾನಸಭಾ ಚುನಾವಣೆ ತಯಾರಿಯಲ್ಲಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮೊಯಿದ್ದೀನ್ ಬಾವಾ ಅವರಿಗೆ ಟಿಕೆಟ್ ಕೈ ತಪ್ಪಿದೆ.
ಈ ಮೊದಲು ಐದು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ 2 ಗಂಟೆಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಈ ಮೂಲಕ ಕಾಂಗ್ರೆಸ್ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ಅವರಿಗೆ ಟಿಕೆಟ್ ಕೈತಪ್ಪಿದ್ದು, ಮೊಹಮದ್ ಶಾಲಮ್ ಎಂಬುವವರಿಗೆ ಟಿಕೆಟ್ ಫೈನಲ್ ಆಗಿದೆ.
ಬಿಜೆಪಿ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿತ್ತು. ಬಳಿಕ ತೀವ್ರ ಕಗ್ಗಂಟಾಗಿ ಉಳಿದಿದ್ದ 5 ಕ್ಷೇತ್ರಗಳಿಗೆ ಪಟ್ಟಿಯನ್ನು ಪ್ರಕಟಿಸಿದೆ.
ರಾಯಚೂರಿನಿಂದ ಮೊಹಮ್ಮದ್ ಶಾಲಮ್ ಕಣಕ್ಕಿಳಿದರೆ, ಶಿಡ್ಲಘಟ್ಟದಿಂದ ಬಿ ವಿ ರಾಜೀವ್ ಗೌಡ, ಸಿ ವಿ ರಾಮನ್ ನಗರದಿಂದ ಎಸ್ ಆನಂದ್ ಕುಮಾರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಅರಕಲಗೂಡು ಕ್ಷೇತ್ರದಿಂದ ಎಚ್ ಪಿ ಶ್ರೀಧರ್ ಗೌಡ ಸ್ಪರ್ಧಿಸಿದರೆ, ಮಂಗಳೂರು ಉತ್ತರದಿಂದ ಇನಾಯತ್ ಅಲಿ ಅವರ ಹೆಸರು ಫೈನಲ್ ಮಾಡಲಾಗಿದೆ. ಮಂಗಳೂರು ಉತ್ತರದಲ್ಲಿ ಮೊಯಿದ್ದೀನ್ ಬಾವಾ ಅವರಿಗೆ ಟಿಕೆಟ್ ಕೈ ತಪ್ಪಿದೆ.
ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದೆ. ಹಾಗಾಗಿ, ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟಿಸಿದೆ.