“ನಮಗೆ ದೇವೇಗೌಡ ಕುಟುಂಬದ ವಿರುದ್ಧದ ರಾಜಕೀಯ ಹೊಸದೇನಲ್ಲ. ಅವರ ಪಕ್ಷ, ಅಳಿಯ ಶಕ್ತಿಶಾಲಿಯಾಗಿದ್ದಿದ್ದರೆ ಅವರ ಪಕ್ಷದಿಂದ ನಿಲ್ಲಿಸುತ್ತಿದ್ದರು. ಜೆಡಿಎಸ್ ಶಕ್ತಿ ಕಳೆದುಕೊಂಡಿದೆ. ಹೀಗಾಗಿ ಈ ರಾಜ್ಯದಲ್ಲಿ ಹೊಂದಾಣಿಕೆ ನಡೆಯುತ್ತಿದೆ. ಕುಮಾರಸ್ವಾಮಿ ಅವರು ತಮ್ಮನ್ನು ಯಾರು ಅಧಿಕಾರದಿಂದ ಇಳಿಸಿದ್ದರೋ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ” ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ನಾಮಪತ್ರ ಸಲ್ಲಿಕೆ ಸಂದರ್ಭ ನಡೆದ ಬೃಹತ್ ಮೆರವಣಿಗೆ ವೇಳೆ ಮಾತನಾಡಿದ ಅವರು, “ದೇವೇಗೌಡರು ಹಾಸನದಲ್ಲಿ ಮೊಮ್ಮಗನನ್ನು ನಿಲ್ಲಿಸಿದ್ದಾರೆ. ಮಂಡ್ಯದಲ್ಲಿ ಮಗನನ್ನು ನಿಲ್ಲಿಸಿದ್ದಾರೆ. ಅಳಿಯನನ್ನು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಒಂದೇ ಕುಟುಂಬದಿಂದ ಮೂವರು ನಿಂತಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಬೇರೆ ಯಾರೂ ಇರಲಿಲ್ಲವಾ?” ಎಂದು ಪ್ರಶ್ನಿಸಿದ್ದಾರೆ.
ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ, ಹಾಸನದ ಕಾಂಗ್ರೆಸ್ ಬೆಂಬಲಿಗರನ್ನು ಎಣಿಸೋದು ಅಸಾಧ್ಯ!
ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶ್ರೇಯಸ್ ಪಟೇಲ್ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ರೋಡ್ಶೋನಲ್ಲಿ ಪಾಲ್ಗೊಂಡೆ. ಇಲ್ಲಿನ ಜನತೆ ನೀಡಿದ ಅಪಾರ ಬೆಂಬಲ, ಪ್ರೀತಿ, ಸಹಕಾರ ಕಾಂಗ್ರೆಸ್ ಗೆಲುವಿಗೆ ಮುನ್ನುಡಿ… pic.twitter.com/ml4iEjcSKb
— DK Shivakumar (@DKShivakumar) April 1, 2024
“ನಿಮ್ಮ ಸ್ವಂತ ಅಳಿಯನನ್ನು ನಿಮ್ಮ ಪಾರ್ಟಿಯಿಂದ ನಿಲ್ಲಿಸಲು ಆಗಲಿಲ್ಲ ಎಂದರೆ ನಿಮ್ಮ ಪಾರ್ಟಿಗೆ ಶಕ್ತಿ ಎಲ್ಲಿದೆ? ಜೆಡಿಎಸ್‌ನಿಂದ ಇಬ್ಬರು, ಬಿಜೆಪಿಯಿಂದ ಒಬ್ಬರು ಸೇರಿ ಮೂರು ಜನ ನಿಂತಿದ್ದಾರೆ. ಈ ಮೂರು ಜನರಲ್ಲಿ ಯಾರೂ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ಳುತ್ತೇನೆ. ಇವರು ನನ್ನನ್ನೇ ಬಿಟ್ಟಿಲ್ಲ, ಇನ್ನೂ ನಿಮ್ಮನ್ನು ಬಿಡುತ್ತಾರಾ? ಎಲೆಕ್ಷನ್ ಕಳೆದ ಮೇಲೆ ನಿಮ್ಮನ್ನು ಬಿಡುವುದಿಲ್ಲ. ಪ್ರೀತಂ ಗೌಡ ಅವರನ್ನು ರಾಜಕೀಯವಾಗಿ ಸಮಾಧಿ ಮಾಡಿಬಿಡುತ್ತಾರೆ. ಸಿಮೆಂಟ್ ಮಂಜು, ಸುರೇಶ್ ನಿಮ್ಮನ್ನು ಬಿಡಲ್ಲ. ಬೆಳ್ಳಿಪ್ರಕಾಶ್ ಎಲೆಕ್ಷನ್ ಮುಗಿದ ಮೇಲೆ ಬೆಳ್ಳಿನೂ ಇರಲ್ಲ ಚಿನ್ನಾನೂ ಇರಲ್ಲ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
“ನಾವು ನಿಮ್ಮ ಪಲ್ಲಕ್ಕಿಯನ್ನೂ ಹೊರುತ್ತೇವೆ, ನಿಮ್ಮ ಹೆಣವನ್ನೂ ಹೊರುತ್ತೇವೆ. ಇಡೀ ದೇಶ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಚುನಾವಣೆ ನೋಡುತ್ತಿದೆ. 2013ರಲ್ಲಿ ನಡೆದ ಉಪಮುನಾವಣೆಯಲ್ಲಿ ನನ್ನ ತಮ್ಮ ಡಿ.ಕೆ.ಸುರೇಶ್‌ಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಾಗ, ಬಿಜೆಪಿ-ಜನತಾದಳವರು ಒಂದಾಗಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದರು. ಆ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಒಂದು ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು” ಎಂದು ಡಿಸಿಎಂ ನೆನಪಿಸಿದರು.
ನಾನು, ಜಿ.ಟಿ.ದೇವೇಗೌಡ, ಶಿವಲಿಂಗೇಗೌಡ ಮೈತ್ರಿ ಸರ್ಕಾರ ಉಳಿಸಲು, ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಸ್ಥಾನ ಉಳಿಸಲು ಬಾಂಬೆಗೆ ಹೋಗಿದ್ದೆವು. ಈಗ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರವನ್ನು ನಾವು ಬೀಳಿಸಿದ್ದೇವೆ ಎಂದು ಹೇಳುತ್ತಾ ಇದ್ದಾರೆ. ಈ ಹಾಸನಾಂಬೆ ಮೇಲೆ ಸತ್ಯ ಮಾಡಿ ನಾವು ಮೋಸ ಮಾಡಿದ್ದೇವೆಯೇ ಇಲ್ಲವೇ ಎಂದು ಕುಮಾರಸ್ವಾಮಿ ಅವರು ಹೇಳಲಿ” ಎಂದು ಡಿ ಕೆ ಶಿವಕುಮಾರ್ ಸವಾಲೆಸೆದಿದ್ದಾರೆ.
“ನಾನು ಹಾಸನಾಂಬೆ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ನಾವು ತಾಯಿಗೆ ದ್ರೋಹ ಮಾಡುವ ಮಕ್ಕಳಲ್ಲ, ಹೋರಾಟ ಮಾಡುವ ಮಕ್ಕಳು. ತಾಯಿ ಹಾಸನಾಂಬೆ ಆಶೀರ್ವಾದ ಶ್ರೇಯಸ್ ಪಟೇಲ್ ಮೇಲೆ ಇದೆ. ಒಂದು ಲಕ್ಷ ಮತಗಳ ಅಂತರದಿಂದ ಶ್ರೇಯಸ್ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ” ಎಂದರು.
