ಎಲ್ಲಾ ಇವಿಎಂ ಮತಗಳನ್ನು ವಿವಿಪ್ಯಾಟ್ ಜೊತೆ ತಾಳೆ ಮಾಡುವಂತೆ ಮತ್ತು ವಿವಿಪ್ಯಾಟ್ ಸ್ಲಿಪ್‌ಗಳನ್ನು ಬ್ಯಾಲೆಟ್ ಬಾಕ್ಸ್‌ನಲ್ಲಿ ಠೇವಣಿ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಈ ಅರ್ಜಿ ಸಲ್ಲಿಸಿದ್ದಾರೆ. ಈ ಆದೇಶವನ್ನು ಪ್ರಕಟಿಸುವಾಗ ನ್ಯಾಯಪೀಠವು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ಮತ್ತೊಂದು ಅರ್ಜಿಯನ್ನೂ ಪರಿಗಣಿಸಿದೆ.
ಪ್ರಸ್ತುತ ಪ್ರತಿ ಕ್ಷೇತ್ರದಲ್ಲಿಯೂ ಯಾದೃಚ್ಛಿಕವಾಗಿ ಐದು ಇವಿಎಂಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ದಾಖಲಾದ ಮತಗಳನ್ನು ವಿವಿಪ್ಯಾಟ್‌ನೊಂದಿಗೆ ತಾಳೆ ಮಾಡಲಾಗುತ್ತದೆ. ಆದರೆ ಪ್ರತಿ ಇವಿಎಂ ಮತವನ್ನು ವಿವಿಪ್ಯಾಟ್ ಸ್ಲಿಪ್‌ಗಳ ಜೊತೆ ತಾಳೆ ಹಾಕಿ ಮತ ಎಣಿಕೆ ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಇವಿಎಂ ಹ್ಯಾಕ್ ಮಾಡಬಹುದೇ?; ಚುನಾವಣಾ ಪ್ರಕ್ರಿಯೆಯ ನಿಜವಾದ ಸಮಸ್ಯೆಯೇನು?
ಇನ್ನು ಮತದಾರರು ಮತ ಚಲಾಯಿಸಿದ ಬಳಿಕ ಸಮೀಪದಲ್ಲೇ ಇರುವ ವಿವಿಪ್ಯಾಟ್‌ನಲ್ಲಿ ಸ್ಲಿಪ್ ರಚನೆ ಆಗುತ್ತದೆ. ಅದನ್ನು ಕೆಲವೇ ಸೆಕೆಂಡುಗಳ ಕಾಲ ಮತದಾರರು ನೋಡಲು ಅವಕಾಶ ಇರುತ್ತದೆ. ಅದಾದ ಬಳಿಕ ಆ ಸ್ಲಿಪ್ ಮತಪೆಟ್ಟಿಗೆಗೆ ಬೀಳುತ್ತದೆ. ಆದರೆ ವಿವಿಪ್ಯಾಟ್‌ನಲ್ಲಿ ಬರುವ ಸ್ಲಿಪ್ ಅನ್ನು ಮತದಾರರು ಪರಿಶೀಲಿಸಿ ತಾವೇ ಭೌತಿಕವಾಗಿ ಮತಪೆಟ್ಟಿಗೆಗೆ ಹಾಕಲು ಅವಕಾಶ ನೀಡಿ ಆದೇಶ ಜಾರಿ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಏಕಕಾಲದಲ್ಲಿ ಈ ಮತಎಣಿಕೆ ಪ್ರಕ್ರಿಯೆ ನಡೆಸಿ ಮತ್ತು ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸುವುದರಿಂದ 5-6 ಗಂಟೆಗಳಲ್ಲಿ ಸಂಪೂರ್ಣ ವಿವಿಪ್ಯಾಟ್ ಪರಿಶೀಲನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅರ್ಜಿಯಲ್ಲಿ ಅರುಣ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಇವಿಎಂಗಳು, ಮ್ಯಾಚ್ ಫಿಕ್ಸಿಂಗ್ ಇಲ್ಲದೆ ಬಿಜೆಪಿ 180 ಸೀಟು ದಾಟುವುದಿಲ್ಲ: ರಾಹುಲ್ ಗಾಂಧಿ
ಹಾಗೆಯೇ ಸುಮಾರು 24 ಲಕ್ಷ ವಿವಿಪ್ಯಾಟ್‌ಗಳ ಖರೀದಿಗೆ ಸರ್ಕಾರ ಸುಮಾರು 5,000 ಕೋಟಿ ರೂ. ಖರ್ಚು ಮಾಡುತ್ತದೆ. ಆದರೆ 20,000 ವಿವಿಪ್ಯಾಟ್‌ಗಳ ಸ್ಲಿಪ್‌ಗಳನ್ನು ಮಾತ್ರ ಪರಿಶೀಲಿಸುತ್ತದೆ. ಅಷ್ಟು ಮಾತ್ರವಲ್ಲದೆ ವಿವಿಪ್ಯಾಟ್ ಮತ್ತು ಇವಿಎಂಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ವಿವಿಪ್ಯಾಟ್ ಮತ್ತು ಇವಿಎಂ ನಡುವೆ ವ್ಯತ್ಯಾಸವೂ ಕೂಡಾ ಈ ಹಿಂದೆ ಕಂಡು ಬಂದಿದೆ. ಆದ್ದರಿಂದಾಗಿ ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳನ್ನು ಸೂಕ್ಷ್ಮವಾಗಿ ಎಣಿಕೆ ಮಾಡುವುದು ಅತ್ಯಗತ್ಯ ಎಂದು ಅರ್ಜಿದಾರರು ವಾದಿಸಿದರು.