ಗ್ರಾಮೀಣ ಪ್ರದೇಶದ ಜನರು ವಲಸೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿ ಅವರಿಗೆ ನಿರಂತರ ಕೆಲಸ ಒದಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ‘ವಲಸೆ ಯಾಕ್ರೀ ನಿಮ್ಮೂರಲ್ಲೇ ಇದೆಯಲ್ಲ ಉದ್ಯೋಗ ಖಾತ್ರಿ’ ಅಭಿಯಾನ ಜಾರಿಗೆ ತಂದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಎಲ್ಲ 14 ಪಂಚಾಯಿತಿಗಳಲ್ಲಿ ಈ ಯೋಜನೆ ಯಶಸ್ವಿಗೊಳಿಸಲು ಸಿದ್ಧತೆ ಮಾಡಿಕೊಂಡಿದೆ.
ಗ್ರಾಮೀಣ ಭಾಗದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ವಲಸೆ ಹೋಗುವುದು ಹೆಚ್ಚಾಗಿ ಕಂಡುಬಂದಿದೆ. ಇದನ್ನು ಮನಗಂಡ ಗ್ರಾಮೀಣಾಭಿವೃದ್ಧಿ ಇಲಾಖೆ, ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾರ್ಚ್ 15ರಿಂದ ಜೂನ್ 15ರವರೆಗೆ (3 ತಿಂಗಳ ಕಾಲ) ಸ್ಥಳೀಯವಾಗಿ ಉದ್ಯೋಗ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು, ಜತೆಗೆ ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಲು ʼವಲಸೆ ಯಾಕ್ರೀ ನಿಮ್ಮೂರಲ್ಲೇ ಇದೆಯಲ್ಲ ಉದ್ಯೋಗ ಖಾತ್ರಿʼ, ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಎಂಬ ಅಭಿಯಾನ ಹಮ್ಮಿಕೊಂಡಿದೆ.
ಪ್ರಾರಂಭದಲ್ಲಿ ಒಂದು ವಾರ ಗ್ರಾಮ ಪಂಚಾಯಿತಿಗಳ ಮಟ್ಟದದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿಸಲಾಗಿದೆ. ನಂತರ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆಯುವುದು, ಕಾಮಗಾರಿ ಆರಂಭ ಪೂರ್ವ ಮಾಹಿತಿ ಸಿದ್ಧತೆ ಮಾಡಿಕೊಳ್ಳುವುದು, ನಂತರ ಅದನ್ನು ಸಾರ್ವಜನಿಕರ ಮಾಹಿತಿಗಾಗಿ ನೋಟಿಸ್ ಬೋರ್ಡ್‌ಗೆ ಅಳವಡಿಕೆ ಮಾಡುವುದು, ಕೂಲಿಕಾರರ ಗುಂಪು ರಚಿಸಿ ಮೇಟ್‌ಗಳನ್ನು ಗುರುತಿಸಿ ತರಬೇತಿ ನೀಡುವ ಕಾರ್ಯವನ್ನು ಪಂಚಾಯತಿಗಳ ಹಂತಗಳಲ್ಲಿ ಮಾಡಲಾಗುತ್ತಿದೆ.
ಏಪ್ರಿಲ್ 1ರಿಂದಲೇ ಎನ್‌ಎಂಆರ್‌ಗಳನ್ನು ಸೃಜನೆ ಮಾಡಿ ಕಾಮಗಾರಿ ಆರಂಭಿಸಲಾಗಿದೆ. ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರರು, ತಾಂಡಾ ರೋಜಗಾರ್ ಮತ್ತು ಕಾಯಕ ಬಂಧುಗಳು (ಮೇಟ್) ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ನೀಡಿ ನಮೂನೆ-6ರಲ್ಲಿ ಕೆಲಸಕ್ಕಾಗಿ ಬೇಡಿಕೆ ಪಡೆಯುತ್ತಿದ್ದಾರೆ. ಜತೆಗೆ ಪಂಚಾಯತಿಯಲ್ಲಿಯ ಕಸ ವಿಲೇವಾರಿ ವಾಹನದ ಮೂಲಕ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳಕ್ಕೆ ಪ್ರತಿ ಎನ್‌ಎಂಆರ್‌ಗಳಲ್ಲಿ ಶೇ.60ರಷ್ಟು ಮಹಿಳೆಯರನ್ನು ಸೇರಿಸುವಂತೆ ತಿಳಿಸಲಾಗಿದೆ. ಗ್ರಾಮೀಣ ಜನರು ತಮ್ಮ ಜಮೀನುಗಳಲ್ಲಿ ತಮ್ಮದೇ ಕುಟುಂಬದ ಸದಸ್ಯರು ಕೂಡಿಕೊಂಡು ಕೆಲಸ ಮಾಡಿ ಹಣ ಪಡೆಯಬಹದಾಗಿದೆ.
ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಹಾಜರಾತಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೆಲಸಕ್ಕೆ ಬರುವ ಕೂಲಿಕಾರರ ಹಾಜರಾತಿ ಪಡೆಯಲು ಎನ್‌ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸರ್ವಿಸ್) ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಈಗಾಗಲೇ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿರ್ವಾಹಣೆ ಮಾಡುವವರಿಗೆ ತಂತ್ರಾಂಶ ಬಳಕೆ ಕುರಿತು ತಿಳಿವಳಿಕೆ ನೀಡಲಾಗಿದೆ.
ಮಣ್ಣು ನೀರು ಸಂರಕ್ಷಣೆ: ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ. ಬದು ನಿರ್ಮಾಣ ಮಾಡಿಕೊಳ್ಳವುದರಿಂದ ಮಣ್ಣು ಕೊಚ್ಚಿ ಹೋಗದೆ ಗುಂಡಿಗಳಲ್ಲಿಯೇ ಸಂಗ್ರಹವಾಗಲಿದೆ. ಮಳೆಗಾಲದಲ್ಲಿ ಹೆಚ್ಚು ಮಳೆಯಾದಾಗ ನೀರು ಹರಿದು ಕೊಚ್ಚಿ ಹೋಗದಂತೆ ಬದುವಿನಲ್ಲಿ ಮಣ್ಣಿನ ಏರಿ ಹಾಕುವುದರಿಂದ ಮಣ್ಣು ಮತ್ತು ನೀರನ್ನು ತಡೆ ಹಿಡಿದ ಭೂ ಫಲವತ್ತತೆ ಹಾಗೂ ಅಂತರ್ಜಲ ಹೆಚ್ಚಿಸಿಕೊಂಡು ರೈತರು ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ.
ನೀರು ಸಂಗ್ರಹ ಸಾಮರ್ಥ್ಯ: ಬದು ನಿರ್ಮಾಣ ಕಾಮಗಾರಿಯಲ್ಲಿ ಮೂರು ಮಾದರಿಗಳಿವೆ. 10 ಅಡಿ ಉದ್ದ, 10 ಅಡಿ ಅಗಲ, 1 ಅಡಿ ಆಳ, 10 ಅಡಿ ಉದ್ದ, 5 ಅಡಿ ಅಗಲ, 2 ಅಡಿ ಆಳ ಮತ್ತು 20 ಅಡಿ ಉದ್ದ, 5 ಅಡಿ ಅಗಲ 1 ಅಡಿ ಆಳದ ಕಂದಕಗಳಿಗೆ ಅವಕಾಶವಿದೆ. ಇದರಿಂದ ಪ್ರತಿ ಕಂದಕವೂ 2700 ಲೀಟರ್ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿರುತ್ತದೆ. ಪ್ರತಿ ಎಕರೆ ಪ್ರದೇಶದಲ್ಲಿ 16 ಕಂದಕಗಳು ನಿರ್ಮಾಣವಾಗಲಿವೆ.
ಕೈಗೊಳ್ಳಲಾಗುವ ಕಾಮಗಾರಿಗಳು: ಬದು ನಿರ್ಮಾಣ, ಕೃಷಿ ಹೊಂಡ, ಸೋಕ್ ಪಿಟ್, ಸಮಗ್ರ ಕೆರೆ ಅಭಿವೃದ್ಧಿ, ರಸ್ತೆ ಬದಿ ನೆಡತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ ಸೇರಿ ಇತರೆ ಕಾಮಗಾರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬರ ಪರಿಹಾರ ಕೊಟ್ಟು ನಂತರ ವೋಟು ಕೇಳಲಿ; ರೈತಸಂಘ
“ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಅಭಿಯಾನ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ತಾಲೂಕಿನ 14 ಗ್ರಾಮ ಪಂಚಾಯಿತಿಗಳ ಎಲ್ಲ ಗ್ರಾಮಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲು ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯಲಾಗಿದೆ. ಇದರಿಂದ ಜನರಿಗೆ ಕೆಲಸ ನೀಡಲು ಅನುಕೂಲವಾಗಿದೆ” ಎಂದು ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ತಿಳಿಸಿದ್ದಾರೆ.