ಮರಾಠಿ ಸಮುದಾಯದ ಕುಟುಂಬಕ್ಕೆ ಅವಾಚ್ಯವಾಗಿ ಜಾತಿ ನಿಂದನೆಗೈದು ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದಿಂದ ಎಸ್‌ಪಿಗೆ ಮನವಿ ಸಲ್ಲಿಸಿದರು.
“ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ, ಹೊಸೂರು ಗ್ರಾಮದ ಕರ್ಜೆ ಎಂಬಲ್ಲಿ ಮಾರ್ಚ್ 6ರಂದು ಪರಿಶಿಷ್ಟ ಪಂಗಡದ ಮರಾಠಿ ಸಮುದಾಯದ ರಾಘವೇಂದ್ರ ನಾಯ್ಕ ಬಿನ್ ಸೋಮನಾಯ್ಕ ಅವರ ಮನೆಗೆ ಬಂದು ಮೃತ ತಾಯಿಯವರ 12ನೇ ದಿವಸದ ಕಾರ್ಯದಂದು, ಊರಿನ ಒಬ್ಬ ಪುರೋಹಿತರ ಮನೆಯ ಬ್ರಾಹ್ಮಣನಾಗಿ ದುಃಖತಪ್ತ ಕುಟುಂಬವನ್ನು ಸಂತೈಸುವುದನ್ನು ಬಿಟ್ಟು ಪೌರೋಹಿತ್ಯಕ್ಕೆ ತನ್ನನ್ನು ಕರೆಯಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ರಾಮಕೃಷ್ಣ ಅಡಿಗರು ಅವಾಚ್ಯ ಶಬ್ದಗಳಿಂದ ಹಿಯಾಳಿಸಿ ದೌರ್ಜನ್ಯ ಎಸಗಿರುವ ಬಗ್ಗೆ ದೂರು ನೀಡಿದರೂ ಕೂಡ ಈವರೆಗೆ ನ್ಯಾಯ ದೊರೆತಿಲ್ಲ” ಎಂದು ಮರಾಠಿ ಸಮಾಜ ಸೇವಾ ಸಂಘ ಆರೋಪಿಸಿದೆ.
“ಪ್ರಕರಣಕ್ಕೆ ಸಂಬಂಧಿಸಿ ಎಸ್‌ಸಿ/ಎಸ್‌ಟಿ ಕಾಯ್ದೆಯನ್ವಯ ದೂರು ದಾಖಲಿಸಿದರೂ ಇಂದಿಗೂ ನ್ಯಾಯ ದೊರಕದೇ ಇರುವುದು ಈ ಆಧುನಿಕ ಸಮಾಜದಲ್ಲಿ ಒಂದು ದುರಂತವೇ ಸರಿ. ಮರಾಠಿ ಸಮುದಾಯವು ಸಾತ್ವಿಕ ಹಾಗೂ ಸೌಮ್ಯ ಸ್ವಭಾವದ ಜನರನ್ನೊಳಗೊಂಡ ಸಮುದಾಯವಾದುದರಿಂದ ಇಲ್ಲಿಯ ತನಕ ತಾಳ್ಮೆ ಕಳೆದುಕೊಳ್ಳದೆ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ದಿನ ಕಳೆದೆವು. ಮುಂದಿನ ದಿನಗಳಲ್ಲಿ ಜಿಲ್ಲಾ ಸಂಘಟನೆಯು ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದೆ.
“ಮರಾಠಿ ಸಮುದಾಯದವರು ರೊಚ್ಚಿಗೇಳುವ ಮುನ್ನ ಶ್ರೀಘ್ರದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯ ದೊರಕಿಸಿಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗರೆ ಜಿಲ್ಲೆಗೆ ಕಾಂಗ್ರೆಸ್ ನಾಯಕರ ಕೊಡುಗೆ ಏನು; ಬಿಜೆಪಿ ಪ್ರಶ್ನೆ
“ವಿಡಿಯೋ ಕ್ಲಿಪ್ ಸಾಕ್ಷಾಧಾರವಿದ್ದು, ಅದನ್ನು ಆಲಿಸಿದ ಮೇಲೂ ಸಂಬಂಧಿತ ಅಧಿಕಾರಿಗಳು ಕಾರ್ಯೋನ್ಮುಖರಾಗದೇ ಇರುವುದು ನಮಗೆ ಸಂಶಯಕ್ಕೊಳಪಡಿಸಿದೆ. ಇಂತಹ ಘಟನೆ ಇಡೀ ಸಮಾಜಕ್ಕೆ ಕಳಂಕ. ಪರಿಶಿಷ್ಟ ಪಂಗಡದ ನಮ್ಮ ಸಮುದಾಯ ಮಾತ್ರವಲ್ಲದೇ ಇತರ ದುರ್ಬಲರೊಂದಿಗೆ ಯಾವ ರೀತಿ ನಡೆದುಕೊಂಡರೂ ನಡೆಯುತ್ತದೆಂಬ ಸಂದೇಶವು ಅನಾಗರಿಕ, ದುರಂಹಾಕಾರಿಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಆದುದರಿಂದ ಶೀಘ್ರವೇ ಆರೋಪಿಯನ್ನು ಬಂಧಿಸಿ ನ್ಯಾಯ ದೊರಕಿಸಬೇಕು” ಎಂದು ಒತ್ತಾಯಿಸಿದರು.