ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ವಿಶ್ವಕರ್ಮ ಸಮಾಜವು ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಬೆಂಬಲ ನೀಡಿದೆ.
ಇಂಡಿ ನಗರದ ವಿಶ್ವಕರ್ಮ ವಿಕಾಸ ಸಂಸ್ಥೆಯ ಕಚೇರಿಯಲ್ಲಿ ಸೇರಿದ್ದ ಸಮಾಜದ ಮುಖಂಡರ ಸಭೆಯಲ್ಲಿ, ಈ ಸಲ ಬದಲಾವಣೆ ಮಾಡಬೇಕಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲಾಗುವುದು. ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಕಾಂಗ್ರೆಸ್ ಕೈಹಿಡಿಯುವುದು ಅನಿವಾರ್ಯವಾಗಿದೆ ಎಂದು ಮುಖಂಡರು ಹೇಳಿದ್ದಾರೆ.
ಸದ್ಯದ ಸಂಸದರು ದಶಕಗಳಿಂದ ಜಿಲ್ಲೆಗೆ ಆಗಲಿ ಅಥವಾ ಸಣ್ಣ ಸಣ್ಣ ಸಮಾಜಗಳಿಗೇ ಆಗಲಿ ಏನನ್ನೂ ಮಾಡಿಲ್ಲ. ವಿಶ್ವಕರ್ಮ ಸಮಾಜದವರು ತಾವೇ ಸಂಘಟಿತಗೊಂಡು ಏಳ್ಗೆಗೆ ಪ್ರಯತ್ನ ಮಾಡಿದ್ದಾರೆ. ಸರ್ಕಾರದಿಂದ ಯಾವುದೇ ಪ್ರಯೋಜನ ಸಿಕ್ಕಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸಭ್ಯ, ಅಭಿವೃದ್ಧಿ ಪರ ಚಿಂರಕರಾಗಿದ್ದು, ಅವರಿಂದ ಸಮಾಜಕ್ಕೆ ಅನುಕೂಲ ಆಗಬಹುದು ಎಂದು ಮತಕ್ಷೇತ್ರದ ಸಮಾಜದ ಎಲ್ಲರಲ್ಲಿ ಮನವರಿಕೆ ಮಾಡಿಕೊಡಲಾಗುವುದು ಎಂದು ಮುಖಂಡರು ಹೇಳಿದರು.
ಇದೇ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಭ್ಯರ್ಥಿ ರಾಜು ಆಲಗೂರ ಅವರು, ಕಾಯಕ ವರ್ಗದ ಚಿಕ್ಕ ಚಿಕ್ಕ ಸಮುದಾಯದ ಆರ್ಥಿಕ ಸ್ಥಿತಿ ಸುಧಾರಿಸಬೇಕು. ಜನಪ್ರತಿನಿಧಿಗಳು ಇವರಿಗೆ ಸಹಾಯ, ಸಹಕಾರ ನೀಡಬೇಕಿತ್ತು. ಆದರೆ, ಅದಾಗಿಲ್ಲ. ಕಾಂಗ್ರೆಸ್ ಯಾವತ್ತೂ ಎಲ್ಲ ಸಮುದಾಯಗಳ ಜತೆಗೆ ಇದೆ. ಈ ಸಲ ಅವಕಾಶ ಸಿಕ್ಕರೆ ನಿಮ್ಮೆಲ್ಲರ ಅಭಿವೃದ್ಧಿಗೆ ಬದ್ಧನಾಗಿರುವೆ. ನಿಮ್ಮ ಋಣ ತೀರಿಸುವೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಭೀಮರಾವ ಬಡಿಗೇರ, ಶಿವು ಬಡಿಗೇರ, ಶಿವಶರಣ ಬಡಿಗೇರ, ಶಿವಾನಂದ ಬಡಿಗೇರ, ಅರ್ಚಕರಾದ ವಿಠ್ಠಲಾಚಾರ್ಯ, ಸಂತೋಷ ಪಾಟೀಲ ಅನೇಕರಿದ್ದರು.