ಮೋದಿಯ ‘ಮೆಸೇಜಿಂಗ್ ಮೆಷಿನ್’ ಬಗ್ಗೆ ಇತ್ತೀಚೆಗೆ ಅಲ್ ಜಝೀರಾ ವಿಡಿಯೋವೊಂದನ್ನು ಪ್ರಸಾರ ಮಾಡಿದೆ. ಇದನ್ನು ನೋಡಿದಾಗ ನಮಗೆ ಖಂಡಿತವಾಗಿಯೂ ಬಿಜೆಪಿಯ ಪ್ರಚಾರಕ್ಕೆ ಎಲ್ಲಿಂದ ಬಂತು ಇಷ್ಟೊಂದು ಹಣ ಎಂಬ ಪ್ರಶ್ನೆ ಬರುತ್ತದೆ. ಭಾರತದಲ್ಲಿ ನಾವು ಎಲ್ಲಿ ನೋಡಿದರೂ ಈಗ ಪ್ರಧಾನಿ ನರೇಂದ್ರ ಮೋದಿಯ ಫ್ಲೆಕ್ಸ್‌ಗಳು, ಬಿಲ್‌ಬೋರ್ಡ್‌ಗಳು ಕಾಣುತ್ತವೆ. ಟಿವಿ, ಪತ್ರಿಕೆ, ಮೊಬೈಲ್‌ನಲ್ಲಿಯೂ ಪ್ರಧಾನಿ ಮೋದಿ ಚಿತ್ರ ನೋಡದ ದಿನ ಇರಲ್ಲ. ಈ ಪ್ರಚಾರವನ್ನು ನಾವು ನೋಡಿದಾಗ ಬಿಜೆಪಿ ಪ್ರಚಾರಕ್ಕಾಗಿ ಭಾರೀ ಪ್ರಮಾಣದಲ್ಲಿ ಹಣ ವಿನಿಯೋಗ ಮಾಡುತ್ತದೆ ಎಂಬುದು ಖಚಿತವಾಗುತ್ತದೆ.
ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಘೋಷಿಸುವ ಒಂದು ದಿನಕ್ಕೂ ಮುನ್ನ ನರೇಂದ್ರ ಮೋದಿಯಿಂದ ದೇಶದ ಎಲ್ಲ ಜನರಿಗೂ ವಾಟ್ಸಾಪ್ ಮೂಲಕ ಮೆಸೇಜ್ ಬಂದಿದೆ. ಭಾರತದ ಕೋಟ್ಯಾಂತರ ಮಂದಿಗೆ ಈ ಮೆಸೇಜ್ ತಲುಪಿರುವುದು ಮಾತ್ರವಲ್ಲ, ಯುಎಇ, ಬ್ರಿಟನ್, ಪಾಕಿಸ್ತಾನದಲ್ಲಿರುವ ಭಾರತೀಯರಿಗೂ ಈ ಮೆಸೇಜ್ ತಲುಪಿದೆ. ಆ ಬಳಿಕ ಜನರಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆ ಎದುರಾಗಿದೆ.
ಈ ವೀಕ್ಷಿತ ಭಾರತ ಸಂಪರ್ಕ ಮೆಸೇಜ್‌ನಲ್ಲಿ ಮೋದಿ ಸರ್ಕಾರದ 10 ವರ್ಷಗಳ ಆಡಳಿತದ ಬಗ್ಗೆ ಅಭಿಪ್ರಾಯವನ್ನು ಕೇಳಲಾಗಿದೆ. ಏನೇ ಆದರೂ ಕೂಡಾ ಬಿಜೆಪಿ ಸರ್ಕಾರವು ಜನರ ವೈಯಕ್ತಿಕ ಡೇಟಾವನ್ನು ಬಳಸಿಕೊಂಡು ರಾಜಕೀಯ ಪ್ರಚಾರ ಮಾಡುತ್ತಿರುವುದನ್ನು ನಾವು ಒಪ್ಪಲೇಬೇಕು. ಅಷ್ಟಕ್ಕೂ ಇದು ಬಿಜೆಪಿ ಸರ್ಕಾರ ಮಾಡಿದ ಮೊದಲ ಪ್ರಚಾರವೇನಲ್ಲ. ಈ ಹಿಂದೆ “ನನ್ನ ಮೊದಲ ಮತ – ನನ್ನ ದೇಶಕ್ಕಾಗಿ” ಎಂಬ ಕ್ಯಾಪೇನ್ ನಡೆಸಿತ್ತು.
ಸಾಮಾಜಿಕ ಜಾಲತಾಣವನ್ನು ಅಧಿಕವಾಗಿ ಬಳಸುವ ಬಿಜೆಪಿ
ಸಫ್ರಾನ್ ಸ್ಟಾರ್ಮ್ (saffron storm) ಪುಸ್ತಕದ ಲೇಖಕಿ ಸಭಾ ನಖ್ವಿ ಪ್ರಕಾರ, “ತಂತ್ರಜ್ಞಾನವನ್ನು ಅತೀ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬಳಸಿಕೊಳ್ಳುತ್ತದೆ. ಜನರಿಗೆ ಸಾಕ್ಷರತೆ, ವಿದ್ಯಾಭ್ಯಾಸ ಇಲ್ಲದಿದ್ದರೂ ಅವರ ಬಳಿ ಮೊಬೈಲ್ ಇರುತ್ತದೆ ಎಂಬುವುದನ್ನು ಬಿಜೆಪಿ ತಿಳಿದಿದೆ. ಬಿಜೆಪಿಯು ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಮೆಸೇಜ್‌ಗಳನ್ನು ಸೃಷ್ಟಿ ಮಾಡುತ್ತದೆ”
ಇದನ್ನು ಓದಿದ್ದೀರಾ? ಬಾಂಡ್ ದಂಧೆ | ಬಿಜೆಪಿಗೆ 12,930 ಕೋಟಿ ರೂ ದೇಣಿಗೆ, ಕೇಸರಿ ಪಕ್ಷದ ಚಂದಾ ಅಭಿಯಾನಗಳ ಪಟ್ಟಿ!
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಪಕ್ಷದ ಕಾರ್ಯಕರ್ತರ ಬಳಿ ಮಾತನಾಡುತ್ತಾ, “ಜನರಿಗೆ ನಮ್ಮ ಮೆಸೇಜ್ ತಲುಪಿಸುವುದು ಅತೀ ಸುಲಭ. ಯಾಕೆಂದರೆ ನಾವು ದೇಶದಲ್ಲೇ ಅತೀ ದೊಡ್ಡ ವಾಟ್ಸಾಪ್ ನೆಟ್‌ವರ್ಕ್ ಹೊಂದಿದ್ದೇವೆ” ಎಂದು ಹೇಳಿದ್ದರು.
ಇನ್ನು ನರೇಂದ್ರ ಮೋದಿ: ದಿ ಮ್ಯಾನ್, ದಿ ಟೈಮ್ಸ್ (narendra modi: The man, The times) ಲೇಖಕ ನಿಲಂಜನ್ ಮುಖೊಪಾಧ್ಯಾಯ್ ಹೇಳುವಂತೆ “ಬಿಜೆಪಿಯಲ್ಲಿ ಈ ಪ್ರಚಾರಕ್ಕಾಗಿಯೇ ಒಂದು ಕೇಂದ್ರಿಕೃತ ಸೆಲ್ ಇದೆ. ಈ ಸೆಲ್ ಬೆಳಿಗ್ಗೆಯೇ ಸಭೆ ನಡೆಸಿ ಇಂದು ನಾವು ಯಾವೆಲ್ಲ ಸುದ್ದಿಯನ್ನು ಪ್ರಚಾರ ಮಾಡಬೇಕು ಎಂಬುವುದನ್ನು ನಿರ್ಧರಿಸುತ್ತದೆ. ಆ ದಿನಚರಿಯಂತೆಯೇ ಆ ದಿನದ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ, ಚಿತ್ರ, ಮೆಸೇಜ್‌ಗಳನ್ನು ಹಂಚುತ್ತಾರೆ”
ಇನ್ನು ಬಿಜೆಪಿಯ ಪ್ರಚಾರ ಕ್ಯಾಂಪೇನ್‌ಗಳು ಬರೀ ಚುನಾವಣೆಯ ಸಂದರ್ಭಕ್ಕೋ ಅಥವಾ ನಿಗದಿತ ದಿನಕ್ಕೋ ಸೀಮಿತವಾಗಿರಲ್ಲ. ಬದಲಾಗಿ ಪ್ರತಿ ದಿನ ಪ್ರಚಾರ ಮಾಡಲಾಗುತ್ತದೆ. ಮೋದಿ ಮಕ್ಕಳೊಂದಿಗೆ ಮಾತನಾಡುವ ವಿಡಿಯೋ, ದೇವಾಲಯದಲ್ಲಿ ತಾನೇ ಮುಖ್ಯ ಅರ್ಚಕ ಎಂಬಂತೆ ಪೂಜೆ ಮಾಡುವ ವಿಡಿಯೋ, ನೀರಿನಾಳದಲ್ಲಿ ಇರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತದೆ. ಜೊತೆಗೆ ಇದನ್ನು ಸುದ್ದಿ ಮಾಧ್ಯಮಗಳು ಪ್ರಮುಖ ಸುದ್ದಿಯಾಗಿ ಪ್ರಸಾರ ಮಾಡುತ್ತದೆ.
ಬಿಜೆಪಿಯ ಪ್ರಚಾರಕ್ಕೆ ಹಣ ಎಲ್ಲಿಂದ?
ಈ ಎಲ್ಲ ಪ್ರಚಾರಕ್ಕೆ ಪ್ರಮುಖವಾಗಿ ಬೇಕಾಗುವುದು ಹಣ. ಈಗ ಬರುವ ಪ್ರಶ್ನೆ ಬಿಜೆಪಿಯ ಈ ದುಬಾರಿ ಪ್ರಚಾರಕ್ಕೆ ಹಣ ಎಲ್ಲಿಂದ ಬರುತ್ತದೆ ಎಂಬುವುದು. ಇದರ ಬಗ್ಗೆ ಮಾತನಾಡಲು ಹೋದರೆ ನಾವು ಬರುವುದು ಮತ್ತೆ ಚುನಾವಣಾ ಬಾಂಡ್ ವಿಚಾರಕ್ಕೆ, ಜೊತೆಗೆ ಬಿಜೆಪಿ ಆಗಾಗ್ಗೆ ಮಾಡುವ ದೇಣಿಗೆ ಅಭಿಯಾನಗಳ ವಿಚಾರಕ್ಕೆ. ಚುನಾವಣಾ ಬಾಂಡ್ ಎಂಬುವುದು ವಿಶ್ವದಲ್ಲೇ ಅತೀ ದೊಡ್ಡ ಹಗರಣ ಎಂಬುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ.
ಇದನ್ನು ಓದಿದ್ದೀರಾ? ಸುಪ್ರೀಂ ‘ಅಸಾಂವಿಧಾನಿಕ’ವೆಂದ ಚುನಾವಣಾ ಬಾಂಡ್ ಅನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ!
ಬಿಜೆಪಿ ವಿಶ್ವದಲ್ಲೇ ಅತೀ ಶ್ರೀಮಂತ ಪಕ್ಷ ಎಂದು ಪತ್ರಕರ್ತೆ ಮೀನಾಕ್ಷಿ ರವಿ ಹೇಳುತ್ತಾರೆ. “ಬಿಜೆಪಿ ಸರ್ಕಾರ 2017ರಲ್ಲಿ ಜಾರಿಗೆ ತಂದ ಯೋಜನೆ ಚುನಾವಣಾ ಬಾಂಡ್‌ನಿಂದಾಗಿಯೇ ಬಿಜೆಪಿಯು ಆರ್ಥಿಕವಾಗಿ ಪ್ರಬಲವಾಗಿದೆ. ಈ ಯೋಜನೆಯಿಂದ ಹಲವಾರು ಪಕ್ಷಗಳಿಗೆ ದೇಣಿಗೆ ಲಭಿಸಿದೆ. ಆದರೆ ಅತೀ ಅಧಿಕ ದೇಣಿಗೆ ಬಿಜೆಪಿಗೆ ಸಿಕ್ಕಿದೆ” ಎಂದು ಮೀನಾಕ್ಷಿ ರವಿ ಹೇಳುತ್ತಾರೆ.
“2017ರಿಂದ 2024ರಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸುವ ಎರಡು ತಿಂಗಳು ಹಿಂದಿನವರೆಗೂ ಬಾಂಡ್ ಮೂಲಕ ಲಭ್ಯವಾಗಿರುವ ಒಟ್ಟು ದೇಣಿಗೆಯಲ್ಲಿ ಶೇಕಡ 57ರಷ್ಟು ಬಿಜೆಪಿಗೆ ಲಭಿಸಿದೆ. ಈಗಾಗಲೇ ಹಣವನ್ನು ಬಿಜೆಪಿ ವಿತ್‌ಡ್ರಾ ಮಾಡಿಕೊಂಡಿದ್ದು ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ” ಎಂದಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಬಿಟ್ಟರೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ನರೇಂದ್ರ ಮೋದಿ ಒಬ್ಬರೆ ದೇಶಕ್ಕೆ ಉತ್ತರ ಎಂಬ ಅಲೆಯನ್ನು ಬಿಜೆಪಿ ಈಗಾಗಲೇ ಸೃಷ್ಟಿಸಿದೆ. ಆದರೆ ನಾವು ನಿಜವಾಗಿಯೂ ಪರ್ಯಾಯವಿದೆ ಎಂಬುವುದನ್ನು ನಾವು ತಿಳಿಯಬೇಕು, ಸರ್ವಾಧಿಕಾರದತ್ತ ಸಾಗುತ್ತಿರುವ ನಮ್ಮ ದೇಶವನ್ನು ಮತ್ತೆ ಪ್ರಜಾಪ್ರಭುತ್ವದತ್ತ ಸೆಳೆಯುವ ಹೊಣೆ ದೇಶದ ನಾಗರಿಕರಾದ ನಮ್ಮದು.
Good write-up…Create this sort of info with more in-depth research with factual evidence…