ಮತದಾರರಲ್ಲಿ ರಾಜಕೀಯ ಪ್ರಜ್ಞೆ ಮೂಡಿದರೆ, ದೇಶದಲ್ಲಿ ಮತ್ತು ನಮ್ಮ ಲೋಕಸಭೆ ಕ್ಷೇತ್ರದಲ್ಲೂ ಬದಲಾವಣೆ ನಿಶ್ಚಿತ ಎಂದು ವಿಜಯಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆ ದೇವರಹಿಪ್ಪಗಿ ತಾಲೂಕಿನ ಮುಳಸಾವಳಗಿಯಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿದರು.
“ತಮಗೊಂದು ಅವಕಾಶ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೆ ಬದ್ಧ. ರಾಜ್ಯ ಸರ್ಕಾರದ ಕೆಲಸ ಕೇಂದ್ರದಲ್ಲೂ ಮುಂದುವರೆಯಲಿವೆ. ಕೆಲಸ ಮಾಡುವವರಿಗೆ ಆದ್ಯತೆ ನೀಡಿ” ಎಂದು ಮನವಿ ಮಾಡಿದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, “ಮೋದಿ ಮತ್ತು ಸದ್ಯದ ಸಂಸದರು ಬರೀ ಮಾತೇ ಆಡಿದ್ದಾರೆ. ದಶಕದಿಂದ ದೇಶಕ್ಕಾಗಲೀ ವಿಜಯಪುರ ಲೋಕಸಭೆ ಕ್ಷೇತ್ರಕ್ಕಾಗಲಿ ನಯಾ ಪೈಸೆಯ ಲಾಭವಾಗಿಲ್ಲ. ರಾಜ್ಯದ ಆಡಳಿತ ಸರ್ಕಾರ ಹೇಳಿದಂತೆ ನಡೆದುಕೊಂಡಿದೆ ಎನ್ನುವುದಕ್ಕೆ ಗ್ಯಾರಂಟಿಗಳು ಲಾಗೂ ಆಗಿದ್ದೇ ಸಾಕ್ಷಿ. ಹೆಣ್ಣುಮಕ್ಕಳು, ಯುವಕರಲ್ಲದೇ ಎಲ್ಲರಿಗೂ ಪ್ರತಿ ತಿಂಗಳು ₹6,000ದಷ್ಟು ಹಣ ಬಂದು, ಆರ್ಥಿಕ ಸ್ಥಿತಿ ಸುಧಾರಿಸಿದೆ. ಬಡವರ, ದೀನರ ಬದುಕು ಹಸನಾಗಿದೆ” ಎಂದರು.
“ಇದೀಗ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ಜಿಲ್ಲೆ ಮತ್ತಷ್ಟು ಏಳಿಗೆ ಸಾಧಿಸಲಿದೆ. ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನಷ್ಟು ಗ್ಯಾರಂಟಿಗಳು ಜಾರಿಗೆ ಬರಲಿವೆ. ಹೆಣ್ಣುಮಕ್ಕಳಿಗೆ ವರ್ಷಕ್ಕೆ ಒಂದು ಲಕ್ಷ ರೂ. ಸಿಗಲಿವೆ. ಹಾಗಾಗಿ ತಾವುಗಳು ಮೋದಿಯ ಮೋಡಿಗೆ ಬಲಿಯಾಗಬೇಡಿ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಧಿಕೃತ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ಕೈ ಅಭ್ಯರ್ಥಿ ಆಲಗೂರು
ಲಿಂಗರಾಯ ಮಹಾರಾಜ, ಸುಭಾಷ್ ಛಾಯಾಗೋಳ, ಬಿ ಎಸ್ ಪಾಟೀಲ ಯಾಳಗಿ, ಬಾಪುಗೌಡ ಪಾಟೀಲ, ಡಾ ಪ್ರಭುಗೌಡ ಲಿಂಗದಳ್ಳಿ, ಬಶೀರ್ ಬೇಪಾರಿ, ಬಾಳನಗೌಡ ಪಾಟೀಲ, ಸೋಮನಾಥ ಕಳ್ಳಿಮನಿ, ಸರಿತಾ ನಾಯಕ, ಎಂ ಜಿ ಯಂಕಂಚಿ, ಪರುಶರಾಮ ದಿಂಡವಾರ, ಸಾಬು ಹುಸನಳ್ಳಿ, ಸೈಯದ್ ರೂಗಿ, ಬಸವನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಎಂ ಎಂ ಪಟೇಲ ಸೇರಿದಂತೆ ಬಹುತೇಕರು ಇದ್ದರು.