“ನಮ್ಮ ವೋಟು ತಗೊಂಡು, ನಮ್ಮ ದುಡಿಮೆಯ ಹಣ ಪಡೆದುಕೊಂಡು ಈಗ ನಮ್ಮ ಕಪಾಳಕ್ಕೆ ಹೊಡೆಯುತ್ತಿದ್ದಾರೆ. ಅನ್ಯಾಯ ಮಾಡುವ ಜೊತೆಗೆ ಅವಮಾನವನ್ನೂ ಮಾಡುತ್ತಿದ್ದಾರೆ”
ಬರ ಪರಿಹಾರಕ್ಕೆ ಕರ್ನಾಟಕ ಸರ್ಕಾರ ತಡವಾಗಿ ಮನವಿ ಮಾಡಿದೆ ಎಂದು ಕೇಂದ್ರ ಗೃಹ ಸಚಿವರು ನೀಡಿರುವ ಹೇಳಿಕೆಗೆ ಸಾಕ್ಷಿ ಸಹಿತ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರಕ್ಕೆ ಸಲ್ಲಿಸಿರುವ ಸರಣಿ ಮನವಿಗಳ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ರಾಜ್ಯ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಮಂಗಳವಾರ ಸಂಜೆ ಸುದ್ದಿಗೋಷ್ಠಿ ನಡೆಸಿರುವ ಕೃಷ್ಣ ಬೈರೇಗೌಡ ಅವರು, “ಸುಳ್ಳುಗಳ ಸರದಾರ, ಪ್ರಪಂಚದ ಅತಿದೊಡ್ಡ ಹಗರಣವಾದ ಎಲೆಕ್ಟೋರಲ್ ಬಾಂಡ್‌ಗಳ ರೂವಾರಿ, ಆಕಸ್ಮಿಕವಾಗಿ ಕೇಂದ್ರದ ಗೃಹಸಚಿವರೂ ಆಗಿರುವ ಅಮಿತ್ ಶಾ ಅವರು ಇನ್ನಷ್ಟು ಹಸಿಹಸಿ ಸುಳ್ಳುಗಳನ್ನು ಹರಿಬಿಟ್ಟಿದ್ದಾರೆ” ಎಂದು ತರಾಟೆಗೆ ತೆಗೆದುಕೊಂಡರು.
ಅಮಿತ್ ಶಾ ಅವರು ಸೂರ್ಯನಿಗೆ ಟಾರ್ಚ್ ಹಿಡಿಯುವ ಸಾಹಸ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಬರ ಪರಿಹಾರ ಮನವಿ ಸಲ್ಲಿಸಲು ವಿಳಂಬ ಮಾಡಿದೆ ಎಂದು ಹೇಳಿ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸೆಪ್ಟೆಂಬರ್ 22ನೇ ತಾರೀಕು ಬರ ಪರಿಹಾರ ಕೋರಿ ಮನವಿಯನ್ನು ರಾಜ್ಯ ಸರ್ಕಾರ ಸಲ್ಲಿಸಿತ್ತು. ಕೇಂದ್ರ ಸರ್ಕಾರದ ಬರಗಾಲ ಕೈಪಿಡಿ ಪ್ರಕಾರ, ಮುಂಗಾರು ಹಂಗಾಮಿನಲ್ಲಿ ಬರಪರಿಹಾರ ಕೋರಬೇಕಾದರೆ ಅಕ್ಟೋಬರ್ 31ನೇ ತಾರೀಕಿನವರೆಗೆ ಕಾಯಬೇಕು. ಜೊತೆಗೆ ಮುಂಗಾರು ಹಂಗಾಮಿನ ಮಧ್ಯದಲ್ಲಿಯೇ ಬರ ಘೋಷಣೆ ಮಾಡಿ ಪರಿಹಾರ ಕೇಳಲೂ ಅವಕಾಶವಿದೆ. ಅದರ ಅನ್ವಯ ನಾವು ಒಂದೂವರೆ ತಿಂಗಳ ಮುಂಚೆಯೇ ಪರಿಹಾರ ಕೋರಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿಯವರು ಸೆಪ್ಟೆಂಬರ್ 27ರಂದು ಮಾಡಿರುವ ಆದೇಶದ ಪ್ರತಿಯು ಬರ ಪರಿಹಾರ ನಿಗದಿಗೆ ರೂಪಿಸಿದ ತಂಡವನ್ನು ಉಲ್ಲೇಖಿಸಿದೆ. ಕರ್ನಾಟಕ ರಾಜ್ಯದ 41.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, 31 ಜಿಲ್ಲೆಗಳಲ್ಲಿ ಬರ ಆವರಿಸಿದೆ, ಹೀಗಾಗಿ ರಾಷ್ಟ್ರೀಯ ವಿಪತ್ತು ನಿಧಿ ಬಿಡುಗಡೆಗೆ ಕರ್ನಾಟಕ ಪತ್ರ ಬರೆದಿದೆ. ಹೀಗಾಗಿ ಇಂಟರ್ ಮಿನಿಸ್ಟ್ರಿಯಲ್ ಸೆಂಟರ್ ಟೀಮ್ (ಐಎಂಸಿಟಿ) ರಾಜ್ಯಕ್ಕೆ ಭೇಟಿ ನೀಡಿ, ಬರ ನಷ್ಟವನ್ನು ಅಳತೆ ಮಾಡಬೇಕು ಎಂದು ಸೂಚಿಸಿತ್ತು ಎಂದು ಪತ್ರವನ್ನು ಓದಿ ವಿವರಿಸಿದರು.
ನವೆಂಬರ್ 20ರಂದು ಮತ್ತೊಂದು ಪತ್ರವನ್ನು ಕೇಂದ್ರ ಸರ್ಕಾರದ ಕೃಷಿ ಕಾರ್ಯದರ್ಶಿಯವರು ಗೃಹ ಇಲಾಖೆಗೆ ಬರೆದಿದ್ದಾರೆ. ಕೃಷಿ ಮಂತ್ರಾಲಯದ ಸೆಂಟ್ರಲ್ ಟೀಮ್‌ನವರು ಕೊಟ್ಟಿರುವ ಶಿಫಾರಸ್ಸನ್ನು ಅಂತಿಮಗೊಳಿಸಿ ಗೃಹಸಚಿವರಿಗೆ ಕಳುಹಿಸಲಾಗಿದೆ. ಕರ್ನಾಟಕಕ್ಕೆ ಎನ್‌ಡಿಆರ್‌ಎಫ್ ಅಡಿ ಪರಿಹಾರವನ್ನು ನೀಡಬೇಕು ಎಂದು ನವೆಂಬರ್ 20ರಂದು ಶಿಫಾರಸ್ಸು ಮಾಡಲಾಗಿದೆ. ಅಂತಿಮವಾಗಿ ನಮ್ಮ ಮನವಿಯು ಅಂದರೆ ಚುನಾವಣೆ ನಾಲ್ಕು ತಿಂಗಳು ಇರುವ ಮೊದಲು ಗೃಹಸಚಿವರ ಟೇಬಲ್‌ಗೆ ಹೋಗಿತ್ತು. ಆದರೆ ನಾಲ್ಕು ತಿಂಗಳು ಅದು ಧೂಳು ಹಿಡಿಯುತ್ತಾ ಕುಳಿತ್ತಿತ್ತು ಎಂದಿರುವ ಕೃಷ್ಣ ಬೈರೇಗೌಡರು ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಆಗಿರುವ ಅನ್ಯಾಯಗಳನ್ನು ಬಿಚ್ಚಿಟ್ಟರು.
ಸಂವಿಧಾನದತ್ತವಾಗಿ ನಾವು ಸಚಿವರಾಗಿದ್ದೇವೆ. ರಾಜ್ಯದ ಗೃಹಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ನಾನು ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ನಮ್ಮ ಮನವಿಗೆ ಬೆಲೆ ಇಲ್ಲ. ಜೊತೆಗೆ ಮುಖ್ಯಮಂತ್ರಿಯವರು ನಿರಂತರವಾಗಿ ಬರೆದಿರುವ ಪತ್ರಗಳಿಗೂ ಯಾವುದೇ ರೀತಿಯಲ್ಲೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 21ನೇ ತಾರೀಕಿನಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದರು. ನವೆಂಬರ್ 25ರಂದು ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದರು. ಜೊತೆಗೆ ಅಂದೇ ಕೇಂದ್ರದ ಗೃಹ ಸಚಿವರಿಗೂ ಕೋರಿಕೆ ಸಲ್ಲಿಸಿದ್ದರು. ನವೆಂಬರ್ 27ರಂದು ಪ್ರಧಾನ ಮಂತ್ರಿಗಳಿಗೆ ಸಿಎಂ ಪತ್ರ ಬರೆದಿದ್ದರು. ಆ ದಿನವೇ ಗೃಹ ಸಚಿವರಿಗೆ ಮುಖ್ಯಮಂತ್ರಿಗಳು ಎರಡನೇ ಪತ್ರವನ್ನೂ ಬರೆದಿದ್ದರು ಎಂದು ಸಾಕ್ಷಿಗಳನ್ನು ತೋರಿಸಿದರು.
ಡಿಸೆಂಬರ್ 20ನೇ ತಾರೀಕಿನಂದು ಗೃಹಸಚಿವರನ್ನು ಭೇಟಿ ಮಾಡಿದ್ದೇವೆ. ಡಿಸೆಂಬರ್ 23ನೇ ತಾರೀಕು ಸಭೆ ಸೇರಿ ನಿರ್ಧಾರ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರು. ಅವರು ಹೀಗೆ ಹೇಳಿಲ್ಲವೆಂದು ಮಹಾತ್ಮ ಗಾಂಧೀಜಿಯವರ ಪ್ರತಿಮೆ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಹಿಗ್ಗಾಮಗ್ಗಾ ಝಾಡಿಸಿದ್ರು ಕೃಷ್ಣ ಬೈರೇಗೌಡ
ರಾಜ್ಯ ಸರ್ಕಾರ ಮಾಡಿರುವ ಮನವಿಗಳ ವಿವರ ನೀಡಿದ ಬಳಿಕ ಕೇಂದ್ರ ಸರ್ಕಾರಕ್ಕೆ ಹಿಗ್ಗಾ ಮಗ್ಗಾ ಝಾಡಿಸಿದ ಕೃಷ್ಣ ಬೈರೇಗೌಡ ಅವರು, “ಕರ್ನಾಟಕದ ಜನರು ಇರೋದು ನಿಮಗೆ ಟ್ಯಾಕ್ಸ್ ಕಟ್ಟಲು ಮತ್ತು ವೋಟ್ ಹಾಕಲು ಮಾತ್ರವಾ? ಬಿಜೆಪಿಯವರಿಗೆ ಕರ್ನಾಟಕದ ರೈತರನ್ನು ಕಂಡರೆ ಏಕೆ ದ್ವೇಷ? ಮಹಾರಾಷ್ಟ್ರ ಅತಿಹೆಚ್ಚು ತೆರಿಗೆ ಕಟ್ಟುವ ರಾಜ್ಯ. ಆದರೆ ಜನಸಂಖ್ಯೆ ಆಧಾರದಲ್ಲಿ ಮಾತನಾಡೋದಾದರೆ ಅತಿಹೆಚ್ಚು ಟ್ಯಾಕ್ಸ್ ಕಟ್ಟುತ್ತಿರೋದು ಕರ್ನಾಟಕ. ನಮ್ಮ ತೆರಿಗೆ ತೆಗೆದುಕೊಂಡು, ನಮ್ಮ ದುಡ್ಡನ್ನು ಪಡೆದು ನಮ್ಮನ್ನು ಯಾಕೆ ದ್ವೇಷಿಸುತ್ತೀರಿ? ನಮ್ಮ ಹಣವನ್ನು ಬೇರೆ ರಾಜ್ಯಗಳಿಗೆ ಕೊಟ್ಟು, ಇಲ್ಲಿನ ಜನರನ್ನು ಏಕೆ ಶೋಷಿಸುತ್ತಿದ್ದೀರಿ?” ಎಂದು ಪ್ರಶ್ನೆಗಳ ಸುರಿಮಳೆಗೈದರು.
ನಮ್ಮ ವೋಟು ತಗೊಂಡು, ನಮ್ಮ ದುಡಿಮೆಯನ್ನು ಪಡೆದುಕೊಂಡು ಈಗ ನಮ್ಮ ಕಪಾಳಕ್ಕೆ ಹೊಡೆಯುತ್ತಿದ್ದಾರೆ. ಅನ್ಯಾಯ ಮಾಡುವ ಜೊತೆಗೆ ಅವಮಾನವನ್ನೂ ಮಾಡುತ್ತಿದ್ದಾರೆ. ಬ್ರಿಟಿಷರ ರೀತಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈಗ ಎಲೆಕ್ಷನ್ ಕಮಿಷನರ್‌ಗೆ ಪತ್ರ ಬರೆದಿದ್ದಾರಂತೆ ಅಮಿತ್ ಶಾ. ಅದರ ಸಾಕ್ಷಿಯನ್ನು ನೀಡಲಿ. ಆತ್ಮಸಾಕ್ಷಿ ಪ್ರಕಾರ ನುಡಿಯಲಿ. ನಾವು ಹಿಟ್ ಅಂಡ್ ರನ್ ಮಾಡುವವರಲ್ಲ. ಬುರುಡೆ ಬಿಡುವವರೂ ಅಲ್ಲ. ಒಂದೆರಡು ಬಾರಿ ರಾಜ್ಯದ ಜನರನ್ನು ಯಾಮಾರಿಸಬಹುದು, ಎಲ್ಲ ಸಂದರ್ಭದಲ್ಲೂ ಆಗಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
