ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ಅವರು ಚಿಕಿತ್ಸೆ ಫಲಿಸದೇ ಬುಧವಾರ (ಎಪ್ರಿಲ್ 3) ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೂಲತಃ ಶಿರಸಿ ತಾಲ್ಲೂಕಿನವರಾದ ಎಂ.ಕೆ.ಭಾಸ್ಕರರಾವ್ ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ‘ಪ್ರಜಾವಾಣಿ’ ಪತ್ರಿಕೆಯ ಸಹಾಯಕ ಸಂಪಾದಕರೂ ಆಗಿದ್ದರು. ನಿವೃತ್ತರಾದ ಬಳಿಕ ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ್ದರು.
ಪತ್ರಿಕೋದ್ಯಮದ ಜೊತೆಗೆ ಸಿನಿಮಾ, ಸಾಹಿತ್ಯ, ಸಂಗೀತ ಹೀಗೆ ಹಲವಾರು ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ. ದಿನೇಶ್ ಬಾಬು ನಿರ್ದೇಶನದ, ನಟ ಉಪೇಂದ್ರ ಅಭಿನಯದ ‘ಹಾಲಿವುಡ್’ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭಾಸ್ಕರ ರಾವ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕಾರ್ಯದರ್ಶಿಯಾಗಿ, ಭಾರತೀಯ ಕಾರ್ಯನಿರತ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯನಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೆಯುಡಬ್ಲ್ಯೂಜೆ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮಹದೇವ ಪ್ರಕಾಶ್ ಪ್ರಶಸ್ತಿ ಲಭಿಸಿದೆ.
ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ 2018ರ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಯು ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ಅವರಿಗೆ ದೊರೆತಿದೆ.
ಅಂತ್ಯಕ್ರಿಯೆ ಬುಧವಾರ ಸಂಜೆ ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.