ಮಹಾರಾಷ್ಟ್ರದ ನಾಲ್ಕು ಲೋಕಸಭಾ ಸ್ಥಾನಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ. ಸೀಟು ಹಂಚಿಕೆ ಮತ್ತು ಅಭ್ಯರ್ಥಿಗಳ ಘೋಷಣೆ ವಿಳಂಬವಾಗುತ್ತಿದೆ. ಶಿವಸೇನೆ ತನ್ನ ಸಾಂಪ್ರದಾಯಿಕ ಕ್ಷೇತ್ರ ಕಲ್ಯಾಣ್, ಥಾಣೆ, ನಾಸಿಕ್ ಹಾಗೂ ಸಿಂಧುದುರ್ಗ-ರತ್ನಗಿರಿ ಎಂಬ ನಾಲ್ಕು ಲೋಕಸಭಾ ಸ್ಥಾನಗಳಿಗಾಗಿ ಬಿಜೆಪಿ ಬೇಡಿಕೆ ಇಟ್ಟಿದೆ.
ಈ ನಾಲ್ಕು ಕ್ಷೇತ್ರಗಳಲ್ಲಿ 2014 ಮತ್ತು 2019ರ ಚುನಾವಣೆಯಲ್ಲಿ ಶಿವಸೇನೆ ಗೆದ್ದಿತ್ತು. ಆದರೆ, ಈ ಬಾರಿ, ಈ ಕ್ಷೇತ್ರಗಳಲ್ಲಿ ಶಿವಸೇನೆಗೆ ಗೆಲುವು ಕಠಿಣ ಎಂಬ ತನ್ನ ಆಂತರಿಕ ಸಮೀಕ್ಷಾ ವರದಿಯನ್ನು ಮುಂದಿಟ್ಟಿರುವ ಬಿಜೆಪಿ, ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡುವಂತೆ ಕೇಳಿದೆ. ಆದರೆ, ಶಿಂಧೆ ಅವರು ಬಿಜೆಪಿ ಬೇಡಿಕೆಗೆ ನಕಾರ ತೋರುತ್ತಿದ್ದಾರೆ.
“ಚರ್ಚೆಯಲ್ಲಿರುವ ನಾಲ್ಕು ಕ್ಷೇತ್ರಗಳಲ್ಲಿ ಒಂದಾದ ಕಲ್ಯಾಣ್ ಕ್ಷೇತ್ರದಲ್ಲಿ ಶಿಂಧೆ ಅವರ ಪುತ್ರ ಡಾ. ಶ್ರೀಕಾಂತ್ ಶಿಂಧೆ ಅವರು ಸಂಸದರಾಗಿದ್ದಾರೆ. ಬಿಜೆಪಿಯ ನಿಲುವನ್ನು ಒಪ್ಪಿಕೊಂಡರೆ, ಶಿವಸೇನೆ ನಾಯಕರು ಮತ್ತು ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನೆಯಾಗುತ್ತದೆ” ಎಂದು ಶಿಂಧೆ ಬಣದ ನಾಯಕರೊಬ್ಬರು ಹೇಳಿದ್ದಾರೆ.
ಶಿವಸೇನೆ ತನ್ನ ಎಂಟು ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಕಲ್ಯಾಣ್ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ತಮ್ಮ ಮಗ ಡಾ. ಶ್ರೀಕಾಂತ್ ಅವರ ಹೆಸರನ್ನು ಇನ್ನೂ ಘೋಷಿಸಿಲ್ಲ. ಶಿಂಧೆಯವರು ತಮ್ಮ ಸ್ವಂತ ಮಗನಿಗೆ ನ್ಯಾಯ ಕೊಡಿಸಲು ಸಾಧ್ಯವಾಗದಿದ್ದರೆ, ಅವರ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಯಾವ ನ್ಯಾಯ ಸಿಗುತ್ತದೆ ಎಂಬುದಾಗಿಯೂ ಚರ್ಚೆಯಾಗುತ್ತಿದೆ.
“ಒಂದು ವೇಳೆ, ಕಲ್ಯಾಣ್ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ, ಶಿಂಧೆ ನಾಯಕತ್ವದ ಬಗ್ಗೆ ತಪ್ಪು ಅಭಿಪ್ರಾಯಗಳು ಮೂಡುತ್ತವೆ. ಇದು, ಶಿಂಧೆ ನೇತೃತ್ವದ ಶಿವಸೇನೆಗೆ ಮಾತ್ರವಲ್ಲ, ಬಿಜೆಪಿಗೂ ಹಾನಿ ಮಾಡುತ್ತದೆ” ಎಂದು ಶಿವಸೇನೆಯ ಮುಖಂಡರೊಬ್ಬರು ಹೇಳಿದ್ದಾರೆ.
“ಬಿಜೆಪಿ ನಮಗೆ ಹಿರಿಯ ಸಹೋದರನಂತಿದೆ ಎಂದು ನಾವು ಭಾವಿಸುತ್ತೇವೆ. ಆದರೆ, ಬಿಜೆಪಿಯು ಮೈತ್ರಿ ಪಾಲುದಾರರನ್ನು ನಿರ್ಲಕ್ಷಿಸುವಷ್ಟು ‘ಬಾಸ್’ ಆಗಬಾರದು” ಎಂದು ಅವರು ಹೇಳಿದ್ದಾರೆ.
“ಕೆಲವು ಸಮೀಕ್ಷೆಗಳು ಶಿವಸೇನೆಯ ಸೀಟುಗಳನ್ನು ಬಿಜೆಪಿ ಕಸಿದುಕೊಳ್ಳುತ್ತಿದೆ ಎಂಬುದನ್ನು ತೋರಿಸಿವೆ. ಬಿಜೆಪಿ ಜೊತೆ ವ್ಯವಹರಿಸುವುದು ಸುಲಭವಲ್ಲ ಎಂಬುದನ್ನು ಶಿಂಧೆ ಅರಿತುಕೊಳ್ಳಬೇಕು. ಬಿಜೆಪಿ ತನ್ನ ಮೈತ್ರಿ ಪಾಲುದಾರರ ಹಿತಾಸಕ್ತಿಯನ್ನು ಎಂದಿಗೂ ರಕ್ಷಿಸುವುದಿಲ್ಲ” ಎಂದು ಉದ್ದತ್ ನೇತೃತ್ವದ ಶಿವಸೇನೆಯ ನಾಯಕಿ ಸುಶಾಮಾ ಅಂಧಾರೆ ಹೇಳಿದ್ದಾರೆ.
“ಉದ್ಧವ್ ಠಾಕ್ರೆ ವ್ಯವಸ್ಥಿತವಾಗಿ ಬಿಜೆಪಿಯನ್ನು ನಿಭಾಯಿಸಿದರು. ಆದರೆ, ಶಿಂಧೆ ವಿಫಲರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಥಾಣೆಯಲ್ಲಿ ಮಾಜಿ ಸಚಿವ ಗಣೇಶ್ ನಾಯಕ್ ಅವರ ಪುತ್ರ ಸಂಜೀವ್ ನಾಯ್ಕ್, ಕಲ್ಯಾಣ್‌ನಲ್ಲಿ ಸಚಿವ ರವೀಂದ್ರ ಚವ್ಹಾಣ್ ಹಾಗೂ ಸಿಂಧುದುರ್ಗ-ರತ್ನಗಿರಿಯಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಕಣಕ್ಕಿಳಿಸಲು ಬಿಜೆಪಿ ಬಯಸಿದೆ. ಅಲ್ಲದೆ, ಶಿವಸೇನೆಯ ಮತ್ತೊಂದು ಭದ್ರಕೋಟೆಯಾಗಿದ್ದ ಶಾ ಸಂಭಾಜಿ ನಗರದಲ್ಲಿಯೂ ಬಿಜೆಪಿ ಸ್ಪರ್ಧಿಸುತ್ತದೆ ಎಂದು ಈ ಹಿಂದೆ ಹೇಳಿಕೊಂಡಿದೆ.
ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ನಡುವಿನ ಸೀಟು ಹಂಚಿಕೆ ಬಿಕ್ಕಟ್ಟಿನಿಂದಾಗಿ ಶಿವಸೇನೆಯ ಕಾರ್ಯಕರ್ತರು ಮತ್ತು ಮುಖಂಡರು ಶಿಂಧೆ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬಿಜೆಪಿಯ ನಿಲುವನ್ನು ಒಪ್ಪಿಕೊಂಡರೆ, ಅದು ಶಿವಸೇನೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.