ದ್ವಿತೀಯ ಪಿಯುಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಏಪ್ರಿಲ್ 3ರಂದು ಪ್ರಕಟಿಸಲಿದೆ ಎಂದು ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಕೆಎಸ್‌ಇಎಬಿ 2024ರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಇಂದು ಪ್ರಕಟಿಸುತ್ತಿಲ್ಲ.
“ಮಂಡಳಿಯ ಅಧ್ಯಕ್ಷರು ಖಚಿತಪಡಿಸಿದಂತೆ, ಏಪ್ರಿಲ್ 3 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಹೇಳುವ ವರದಿಗಳು ಸುಳ್ಳು. ನಕಲಿ ಪತ್ರಿಕಾ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಂದುವರಿದಿದೆ” ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಬೋರ್ಡ್ ಹೆಸರಿನಲ್ಲಿ ನಕಲಿ ಪತ್ರಿಕಾ ಹೇಳಿಕೆ ನೀಡಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. 2024ರ ದ್ವಿತೀಯ ಪಿಯುಸಿ ಫಲಿತಾಂಶವನ್ನುಸ ಏಪ್ರಿಲ್ 3 ರಂದು ಪ್ರಕಟಿಸಲಾಗುವುದು ಎಂಬ ಹೇಳಿಕೆಗಳು ನಕಲಿ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ್ದು ಮಂಡಳಿಯ ಅಧ್ಯಕ್ಷರನ್ನು ಉಲ್ಲೇಖಿಸಿದೆ.
“ಪ್ರಸ್ತುತ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗುವುದು” ಎಂದು ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.
“ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ತಪ್ಪು ದಾರಿಗೆಳೆಯುವ ಹಾಗೂ ಅನಧಿಕೃತ ಮಾಹಿತಿಗಳಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಮರುಳಾಗಬಾರದು. ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಮತ್ತು ಪರೀಕ್ಷೆಗೆ ಸಂಬಂಧಿಸಿದ ಇತರ ವಿವರಗಳ ಬಗ್ಗೆ ಅಧಿಕೃತ ಮಾಹಿತಿಗಾಗಿ, ಮಂಡಳಿಯ ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಬೇಕು” ಎಂದು ಸಲಹೆ ನೀಡಿದರು.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗ, ಫಲಿತಾಂಶಗಳು karresults.nic.in ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಯಾವುದು ಎನ್ನುವುದನ್ನು ತಿಳಿಸಿ ಪರಿಶೀಲಿಸಬಹುದು.
ಮಾರ್ಚ್ 1 ರಿಂದ 23 ರವರೆಗೆ 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಸುಮಾರು 7 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮಾ.25ರಂದು ಮೌಲ್ಯಮಾಪನ ಕಾರ್ಯ ಆರಂಭವಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಲ್ಕತ್ತಾ | ಅಪರಿಚಿತ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು 3 ಪ್ಲಾಸ್ಟಿಕ್ ಚೀಲಗಳಲ್ಲಿ ಪತ್ತೆ
ಈ ವರ್ಷ 3.3 ಲಕ್ಷ ವಿದ್ಯಾರ್ಥಿಗಳು ಮತ್ತು 3.6 ಲಕ್ಷ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 6.9 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಗಳನ್ನು 2024ರ ಮಾರ್ಚ್ 1 ರಿಂದ ಮಾರ್ಚ್ 22 ರವರೆಗೆ ನಡೆಸಲಾಯಿತು. 2024ರ ದ್ವಿತೀಯ ಪಿಯುಸಿ ಪರೀಕ್ಷೆಯು 80+20 ಮಾದರಿಯನ್ನು ಅನುಸರಿಸಿದೆ. ಇದು 80 ಅಂಕಗಳ ಲಿಖಿತ ಪರೀಕ್ಷೆ ಮತ್ತು 20 ಅಂಕಗಳ ಆಂತರಿಕ ಮೌಲ್ಯಮಾಪನವನ್ನು ಒಳಗೊಂಡಿದೆ.
ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಮಾರ್ಚ್ 30 ರಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟಿಸಿದೆ. ಇದೀಗ, ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಕೆಎಸ್‌ಇಎಬಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳನ್ನು ಏಪ್ರಿಲ್ ಮೂರನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಪ್ರಥಮ ಪಿಯುಸಿ ಫಲಿತಾಂಶಗಳಂತೆಯೇ, ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
karresults.nic.in ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಹೇಗೆ ಪರಿಶೀಲಿಸುವುದು?
- karresults.nic.in ನಲ್ಲಿ ಕರ್ನಾಟಕ ಫಲಿತಾಂಶ ಪೋರ್ಟಲ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿ ನೀಡಲಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದ ಲಿಂಕ್ ಅನ್ನು ತೆರೆಯಿರಿ.
- ಲಾಗಿನ್ ಪುಟದಲ್ಲಿ, ನಿಮ್ಮ KSEAB ನೋಂದಣಿ ಸಂಖ್ಯೆಯನ್ನು ಹಾಕಿ ಮತ್ತು ವಿಷಯವನ್ನು ಆಯ್ಕೆ ಮಾಡಿ (ವಿಜ್ಞಾನ/ಕಲೆ/ವಾಣಿಜ್ಯ)
- ನಂತರ, ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪರಿಶೀಲಿಸಿ.