ಪ್ರತಿಯೊಬ್ಬ ಮತದಾರರೂ ತಮ್ಮ ಹಕ್ಕು ಚಲಾಯಿಸಿಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಶೇ.100ರಷ್ಟು ಕಡ್ಡಾಯ ಮತ ದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪು.ಬಡ್ನಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಬಳೂಟಗಿ ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ಪು.ಬಡ್ನಿ ಗ್ರಾಮದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿ ಸ್ಥಳದಲ್ಲಿ ಮತದಾನದ ಕುರಿತು ಅರಿವು ಮೂಡಿಸಿ ಅವರು ಮಾತನಾಡಿ, ಸರ್ಕಾರ ಮತದಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಲು ಅನುವಾಗುವಂತೆ ಮತದಾನದ ದಿನ ರಜೆ ಘೋಷಿಸಿದೆ. ಮಹಿಳೆಯರು ತಮ್ಮ ಹಕ್ಕುಗಳ ರಕ್ಷಣೆಗೆ ಉತ್ತಮ ಜನಪ್ರತಿನಿಧಿ ಆಯ್ಕೆಯ ಅಧಿಕಾರ ಬಳಸಿ, ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳಿ ಎಂದು ಕಿವಿಮಾತು ಹೇಳಿದರು.
ಮತದಾನಕ್ಕೆ ಪ್ರೇರೇಪಿಸಿ:
ಮತದಾನ ಜನ ಸಾಮಾನ್ಯರ ಒಂದು ಪವಿತ್ರ ಕರ್ತವ್ಯ ಒಂದು ದೇಶದ ಪ್ರಗತಿ ಮತದಾನದಿಂದ ಎಂಬ ಸತ್ಯದ ಅರಿವು ಮೂಡಿಸುವ ಅಗತ್ಯವಿದೆ. ನಾವು ಮತ ಹಾಕದಿದ್ದರೆ ಏನಾಗುತ್ತದೆ ಎಂದು ನಕಾರಾತ್ಮಕವಾಗಿ ಮಾತನಾಡುವವರನ್ನೂ ಮನವೊಲಿಸಿ ಮತ ಚಲಾಯಿಸಲು ಪ್ರೇರೇಪಿಸಿ ಎಂದರು.
ಇದೇ ಸಂದರ್ಭದಲ್ಲಿ ಬಿಎಫ್‌ಟಿ ತಿರಕಪ್ಪ ಬಾಲೆಹೊಸೂರ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಟಿಎಇ ವೀರಯ್ಯ ಅಳವಂಡಿಮಠ, ಪಂಚಾಯತಿ ಸಿಬ್ಬಂದಿ ಹಜರೇಸಾಬ್ ಸರಾವರಿ, ಸಿದಪ್ಪ ಹರದಗಟ್ಟಿ, ನರೇಗಾ ಕಾಯಕ ಬಂಧುಗಳು ಇತರರಿದ್ದರು.
