ಬೆಳ್ಳೆ ಗ್ರಾಮದ ಕಟ್ಟಿಂಗೇರಿ 1ನೇ ವಾರ್ಡಿನ ನೂರಾರು ಮಂದಿ ಗ್ರಾಮಸ್ಥರು ಸಭೆ ಸೇರಿ ನಮ್ಮ ಬೇಡಿಕೆ ಈಡೇರದಿದ್ದರೆ ಲೋಕಸಭೆ ಸೇರಿದಂತೆ ಮುಂಬರುವ ಯಾವುದೇ ಚುನಾವಣೆಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಕಾಪು ವಿಧಾನಸಭಾ ಕ್ಷೇತ್ರದ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಗ್ರಾಮಸ್ಥರು ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿಟ್ಟಿನಲ್ಲಿ ಕಟ್ಟಿಂಗೇರಿ ಅಂಗನವಾಡಿ ಸಮೀಪ ಹಮ್ಮಿಕೊಂಡಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದರು.
“ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಿಂಗೇರಿ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳಗಾಗಿದೆ. ಮೂಲ ಸೌಕರ್ಯಗಳಾದ ರಸ್ತೆ, ಸೇತುವೆ, ಬೀದಿದೀಪ, ಬಸ್ ವ್ಯವಸ್ಥೆಯಿಲ್ಲದೆ ಕಟ್ಟಿಂಗೇರಿ ಕುಗ್ರಾಮವಾಗಿದೆ. ಬೆಳ್ಳೆ ಗ್ರಾಮದಲ್ಲಿ ಈ ಹಿಂದಿನ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸಿ, ಜನರ ಅಹವಾಲುಗಳನ್ನು ಸ್ವೀಕರಿದ್ದರೂ ಕೂಡಾ ಈತನಕ ಯಾವುದೇ ಸಮಸ್ಯೆ ಬಗೆಹರಿದಿಲ್ಲ” ಎಂದು ಗ್ರಾಮಸ್ಥರು ಆರೋಪಿಸಿದರು.
ಬೆಳ್ಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಾಜಿ ಎಸ್ ಸುವರ್ಣ ಮಾತನಾಡಿ, “ಕಟ್ಟಿಂಗೇರಿ ವಾರ್ಡಿನಲ್ಲಿ ಸುಮಾರು 1 ಸಾವಿರ ಮಂದಿ ಅರ್ಹ ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ 750ಕ್ಕೂ ಅಧಿಕ ಮಂದಿ ಮತದಾನ ಮಾಡಿದ್ದಾರೆ. ಹೀಗಿದ್ದರೂ ಇಲ್ಲಿ ಯಾವುದೇ ಸೌಕರ್ಯಗಳಿಲ್ಲ. ಸಮರ್ಪಕ ರಸ್ತೆ, ಸೇತುವೆಗಳಿಲ್ಲದೆ 6ವರ್ಷಗಳಿಂದ ಕಟ್ಟಿಂಗೇರಿಗೆ ಬಸ್ ಬರುತ್ತಿಲ್ಲ. ಈ ಬಾರಿ ಮತದಾನ ಬಹಿಷ್ಕಾರ ಮಾಡಲು ಗ್ರಾಮಸ್ಥರು ಸ್ವ-ಇಚ್ಛೆಯಿಂದ ಮುಂದಾಗಿದ್ದಾರೆ” ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಮಾತನಾಡಿ, “ಕಟ್ಟಿಂಗೇರಿ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಸಭೆ ನಡೆಸಿ ಪ್ರತಿ ಬಾರಿ ಮತದಾನ ಬಹಿಷ್ಕಾರಕ್ಕೆ ಮುಂದಾದರೂ, ಜನಪ್ರತಿನಿಧಿಗಳ ಆಶ್ವಾಸನೆಗೆ ಸೋತು ಬಹಿಷ್ಕಾರ ಹಿಂಪಡೆಯಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಒತ್ತಡ, ಆಮಿಷಗಳಿಗೆ ಗ್ರಾಮಸ್ಥರು ಜಗ್ಗದೆ ಅಚಲ ನಿರ್ಧಾರವನ್ನು ಸಭೆಯಲ್ಲಿ ಕೈಗೊಂಡಿದ್ದಾರೆ” ಎಂದರು.
ಬೆಳ್ಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಂಜನಿ ಹೆಗ್ಡೆ ಮಾತನಾಡಿ, “ಕಟ್ಟಿಂಗೇರಿಗೆ ರಸ್ತೆ ಕಾಮಗಾರಿ ಮುಗಿದು, ಬಸ್ ಸಂಚಾರ ಆರಂಭವಾದ ಮೇಲೆಯೇ ಮತದಾನ ಮಾಡುವುದೆಂದು ನಾವು ನಿರ್ಧರಿಸಿದ್ದೇವೆ. ಸ್ಥಳೀಯ ಶಾಸಕರು, ಸಂಸದರು ಸೇರಿದಂತೆ ಎಲ್ಲರೂ ನಮ್ಮನ್ನು ಮರೆತಿದ್ದಾರೆ. ಮತದಾನ ಬಹಿಷ್ಕಾರದ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಮಾತ್ರವಲ್ಲದೆ ರಾಜ್ಯ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗ್ಯಾರಂಟಿ ಯೋಜನೆಗಳ ಬಗೆಗಿನ ತಪ್ಪು ಸಂದೇಶಗಳಿಗೆ ಕಿವಿಕೊಡಬೇಡಿ: ಗೀತಾ ಶಿವರಾಜಕುಮಾರ್
ಮುಂಬಯಿ ಉದ್ಯಮಿ ಮಹೇಶ್ ಹೆಗ್ಡೆ, ಗ್ರಾಮ ಪಂಚಾಯಿತಿ ಸದಸ್ಯ ಸದಾನಂದ ಸಫಲಿಗ, ಸಮಾಜಸೇವಕ ಸಂತೋಷ್ ಶೆಟ್ಟಿ ಪಂಜಿಮಾರ್ ಇದ್ದರು.
