ಬರ ಪೀಡಿತ ಪ್ರದೇಶವೆಂದು ಘೋಷಣೆಯಾದ ಬೆನ್ನಲ್ಲೇ ಗುಬ್ಬಿ ತಾಲೂಕಿನ ರೈತರಿಗೆ ಬ್ಯಾಂಕ್‌ಗಳು ನೋಟಿಸ್ ಜಾರಿ ಮಾಡುತ್ತಿರುವುದು ಸರಿಯಲ್ಲ. ಜತೆಗೆ ಕೊಬ್ಬರಿ, ರಾಗಿ ಖರೀದಿ ಕೇಂದ್ರದ ಮೂಲಕ ರೈತನ ಖಾತೆಗೆ ಬಂದ ಹಣವನ್ನು ಸಾಲಕ್ಕೆ ವಜಾ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗೆ ರೈತರಿಗೆ ತೊಂದರೆ ನೀಡುವ ಬ್ಯಾಂಕ್‌ಗಳ ವಿರುದ್ಧ ರೈತ ಸಂಘ ತೀವ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಎಂದು ರೈತ ಸಂಘದ ಗುಬ್ಬಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರ ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರದ ಬಳಿ ರೈತರ ಜತೆಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
“ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಗುಬ್ಬಿ ತಾಲೂಕು ಸೇರಿರುವ ಬಗ್ಗೆ ಮಾಹಿತಿ ಎಲ್ಲ ಬ್ಯಾಂಕ್‌ಗಳಿಗೂ ತಿಳಿದಿದೆ. ಆದರೂ ಮಾರ್ಚ್ ತಿಂಗಳೆಂದು ಕಾರಣ ನೀಡಿ ರೈತರಿಂದ ಸಾಲ ವಸೂಲಿಗೆ ನೋಟಿಸ್ ತಂತ್ರ ಬಳಸಿದ್ದಾರೆ. ಕಳೆದ ಬಾರಿ ಕೊಬ್ಬರಿ ಮಾರಾಟ ಮಾಡಿದ ರೈತರೊಬ್ಬರ ಖಾತೆಯಲ್ಲಿದ್ದ ಕೊಬ್ಬರಿ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡ ವಿಷಯದಿಂದ ತಾಲೂಕಿನ ಹಲವು ರೈತರಲ್ಲಿ ಆತಂಕ ಮೂಡಿದೆ” ಎಂದು ರೈತರ ಅಳಲು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ನಾಮಪತ್ರ ಸಲ್ಲಿಕೆ; ಹರಿದು ಬಂದ ಜನಸಾಗರ
“ದಿನಗಟ್ಟಲೇ ಸರದಿಯಲ್ಲಿ ನಿಂತು ಕೊಬ್ಬರಿ, ರಾಗಿ ಮಾರಾಟ ಮಾಡಿದ ರೈತರ ಹಣ ಹಲವು ದಿನಗಳ ಬಳಿಕ ಖಾತೆಗೆ ಬರುತ್ತಿದೆ. ಈ ಹಣವೂ ಬ್ಯಾಂಕ್ ಪಾಲಾದರೆ ರೈತ ಹೇಗೆ ಬದುಕು ನಡೆಸುವುದು. ಬರ ಪ್ರದೇಶದಲ್ಲಿ ರೈತರ ಬಳಿ ಸಾಲ ವಸೂಲಿ ಮಾಡಲು ಬಲವಂತ ಮಾಡುವಂತಿಲ್ಲವೆಂದ ಅವರು ರಾಗಿ, ಕೊಬ್ಬರಿ ಖರೀದಿ ಕೇಂದ್ರದ ಬಳಿ ಮೂಲ ಸವಲತ್ತು ಒದಗಿಸದ ಬಗ್ಗೆಯೂ ರೈತರಲ್ಲಿ ಅಸಮಾಧಾನ ತಂದಿದೆ. ಕುಡಿಯಲು ನೀರು, ನೆರಳು ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದರು.
