ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಬೇಕೆಂಬ ಭಾವನೆ ವಿಶ್ವದಲ್ಲಿದೆ. ಭಾರತವು ಖಂಡಿತವಾಗಿ ಖಾಯಂ ಸದಸ್ಯತ್ವ ಪಡೆಯಲಿದೆ. ಅದರೆ, ದೇಶವು ಅದಕ್ಕಾಗಿ ಈ ಬಾರಿ ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ವಿಶ್ವಸಂಸ್ಥೆಯು ಸುಮಾರು 80 ವರ್ಷಗಳ ಹಿಂದೆ ರೂಪುಗೊಂಡಿತು. ಐದು ರಾಷ್ಟ್ರಗಳು – ಚೀನಾ, ಫ್ರಾನ್ಸ್, ರಷ್ಯಾ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್ ಹಾಗೂ ಅಮೆರಿಕಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಿವೆ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ವಿಶ್ವಸಂಸ್ಥೆ ರಚನೆಯಾದಾಗ ಜಗತ್ತಿನಲ್ಲಿ ಒಟ್ಟು 50 ಸ್ವತಂತ್ರ ರಾಷ್ಟ್ರಗಳಿದ್ದವು. ಕಾಲಕ್ರಮೇಣ ಅದು 193ಕ್ಕೆ ಏರಿಕೆಯಾಗಿದೆ. ಆದರೆ, ಈ ಐದು ರಾಷ್ಟ್ರಗಳು ಮಾತ್ರ ವಿಶ್ವಸಂಸ್ಥೆಯಲ್ಲಿ ತಮ್ಮ ನಿಯಂತ್ರಣ ಇಟ್ಟುಕೊಂಡಿವೆ. ಆದರೆ ಈಗ, ಇದು ಬದಲಾಗಬೇಕು. ಭಾರತಕ್ಕೆ ಶಾಶ್ವತ ಸ್ಥಾನ ಸಿಗಬೇಕು ಎಂಬ ಭಾವನೆ ಪ್ರಪಂಚದಾದ್ಯಂತ ಇದೆ” ಎಂದು ಅವರು ಹೇಳಿದರು.
“ನಾವು ಖಂಡಿತವಾಗಿಯೂ ಖಾಯಂ ಸದಸ್ಯತ್ವ ಪಡೆಯುತ್ತೇವೆ. ಆದರೆ, ಕಠಿಣ ಪರಿಶ್ರಮವಿಲ್ಲದೆ ದೊಡ್ಡದನ್ನು ಸಾಧಿಸಲಾಗುವುದಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನಾವು ಇನ್ನೂ ಹೆಚ್ಚು ಶ್ರಮಿಸಬೇಕು” ಎಂದು ಅವರು ಹೇಳಿದರು.
“ಭಾರತ, ಜಪಾನ್, ಜರ್ಮನಿ ಮತ್ತು ಈಜಿಪ್ಟ್ ಒಟ್ಟಾಗಿ ವಿಶ್ವಸಂಸ್ಥೆಯ ಮುಂದೆ ಪ್ರಸ್ತಾವನೆಯನ್ನು ಮುಂದಿಟ್ಟಿವೆ. ನಾವು ಒತ್ತಡವನ್ನು ನಿರ್ಮಿಸಬೇಕು. ವಿಶ್ವಸಂಸ್ಥೆಯು ದುರ್ಬಲಗೊಂಡಿದೆ ಎಂಬ ಭಾವನೆ ಜಗತ್ತಿನಲ್ಲಿದೆ. ಉಕ್ರೇನ್ ಯುದ್ಧ ಮತ್ತು ಗಾಜಾ ಬಿಕ್ಕಟ್ಟು ಕುರಿತು ವಿಶ್ವಸಂಸ್ಥೆಯಲ್ಲಿ ಯಾವುದೇ ಒಮ್ಮತ ತರಲಾಗಲಿಲ್ಲ. ಈ ಭಾವನೆ ಹೆಚ್ಚಾದಂತೆ ನಮಗೆ ಖಾಯಂ ಸೀಟು ಸಿಗುವ ಸಾಧ್ಯತೆ ಹೆಚ್ಚುತ್ತದೆ ಎಂಬುದು ನನ್ನ ಅನಿಸಿಕೆ” ಎಂದು ಅವರು ತಿಳಿಸಿದರು.
“ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ಪ್ರಮುಖ ಸಂಸ್ಥೆಗಳು ನೀರು, ವಿದ್ಯುತ್, ರಸ್ತೆಗಳು, ಆರೋಗ್ಯ, ಶಾಲಾ ಶಿಕ್ಷಣ ಮುಂತಾದ ಸಾಮಾಜಿಕ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳನ್ನು ಅರ್ಥಮಾಡಿಕೊಂಡಿವೆ. ಜಗತ್ತು ನಮ್ಮನ್ನು ಪ್ರತಿಭಾವಂತರು ಎಂದು ನಂಬುತ್ತದೆ. ಸವಾಲುಗಳನ್ನು ಪರಿಹರಿಸಲು ಭಾರತ ಕೊಡುಗೆ ನೀಡಬೇಕೆಂದು ನಿರೀಕ್ಷಿಸುತ್ತದೆ” ಎಂದು ಅವರು ಹೇಳಿದರು.