ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ | ಪಿ ಸಿ ಮೋಹನ್ ಅಭಿವೃದ್ಧಿ ವಿರೋಧಿ ಅಲೆ ಮನ್ಸೂರ್ ಜಯದ ಹಾದಿಗೆ ಅನುಕೂಲವಾಗಲಿದೆಯೆ?

Date:

Advertisements

ಪ್ರತಿಷ್ಠಿತ ಐಟಿ ಕಂಪನಿಗಳು, ಪ್ರತಿಷ್ಠಿತ ಬಡಾವಣೆಗಳ ಜೊತೆಗೆ ಮೂಲಸೌಕರ್ಯವಿಲ್ಲದ ಅತ್ಯಂತ ಹೆಚ್ಚು ಕೊಳಗೇರಿಗಳಿರುವ ಪ್ರದೇಶ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಪ್ರಬಲ ಜಾತಿಯ ಜನರಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. 2008ರಲ್ಲಿ ಆದ ಕ್ಷೇತ್ರ ಪುನರ್‌ವಿಂಗಡಣೆಯ ಸಮಯದಲ್ಲಿ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರದ ಒಂದಷ್ಟು ಪ್ರದೇಶಗಳನ್ನು ಸೇರಿಸಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ರಚಿಸಲಾಯಿತು.

2009 ರಿಂದ 2019ರ ವರೆಗೂ ನಡೆದ ಮೂರು ಲೋಕಸಭಾ ಚುನಾವಣೆಗಳಲ್ಲಿಯೂ ಬಿಜೆಪಿಯ ಪಿ ಸಿ ಮೋಹನ್‌ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಕಮಲ ಪಕ್ಷವು ನಾಲ್ಕನೇ ಬಾರಿಯೂ ಪಿ ಸಿ ಮೋಹನ್‌ ಅವರನ್ನು ಕಣಕ್ಕಿಳಿಸಿದೆ. ಮೂರು ಬಾರಿ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಬಿಜೆಪಿಯನ್ನು ಮಣಿಸಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಾಜಕೀಯ ಹಿನ್ನೆಲೆಯನ್ನು ಹೊಂದಿರುವ ಮನ್ಸೂರ್‌ ಅಲಿ ಖಾನ್‌ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕಣಕ್ಕಿಳಿಸಿದೆ.

ರಾಜಕಾರಣದ ಜೊತೆ ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿರುವ ಮನ್ಸೂರ್‌ ಅಲಿ ಖಾನ್ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಠಿಣ ಸವಾಲನ್ನು ಎದುರಿಸಲು ಸ್ಪರ್ಧೆಗೆ ಇಳಿದಿದ್ದಾರೆ. ಮನ್ಸೂರ್‌ ಅವರ ರಾಜಕೀಯ ಹಿನ್ನೆಲೆಯನ್ನು ಗಮನಿಸಿದರೆ ತಂದೆ ಕೆ ರೆಹಮಾನ್‌ ಖಾನ್‌ ರಾಜ್ಯಸಭೆಯ ಮಾಜಿ ಉಪಾಧ್ಯಕ್ಷ, ಮಾಜಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು.

Advertisements

ಮನ್ಸೂರ್ ಅಲಿ ಖಾನ್ ಕೂಡ ಕರ್ನಾಟಕ ಕಾಂಗ್ರೆಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಐಸಿಸಿ ಕಾರ್ಯದರ್ಶಿಯಾಗಿದ್ದ ಇವರು ತೆಲಂಗಾಣದ 2023 ರ ವಿಧಾನಸಭಾ ಚುನಾವಣೆಯ ಉಸ್ತುವಾರಿಗಳಲ್ಲಿ ಒಬ್ಬರಾಗಿದ್ದರು. ಪಕ್ಷವನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದರು. ಕಾಂಗ್ರೆಸ್‌ ಕಾರ್ಯಕರ್ತರಾಗಿ ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡದೆ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆ ನೀಡುತ್ತ ಬಂದವರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರಗಾಲಕ್ಕೆ ಬರಲಿಲ್ಲ, ಪರಿಹಾರ ಕೊಡಲಿಲ್ಲ, ಓಡೋಡಿ ಬರುತ್ತಿದ್ದಾರೆ ಓಟಿಗಾಗಿ!

ನಾಗರಿಕರ ಮೂಲಸೌಕರ್ಯಗಳ ಸಮಸ್ಯೆಗಳಿಗೆ ತಕ್ಷಣ ಗಮನ ಹರಿಸಬೇಕು ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಮಾದರಿ ಲೋಕಸಭಾ ಕ್ಷೇತ್ರವನ್ನಾಗಿ ಪರಿವರ್ತಿಸಬೇಕು. ಈ ಕ್ಷೇತ್ರವು ನಗರದ ಪ್ರಮುಖ ಭಾಗ ಮಾತ್ರವಲ್ಲದೆ ಭಾರತದ ಐಟಿ ಹಬ್ ಆಗಿದೆ ಎಂಬ ಅಭಿಪ್ರಾಯ ಮತದಾರರಲ್ಲಿದೆ. ಇದೆಲ್ಲದಕ್ಕೂ ಸರಿ ಹೊಂದುವ ಹಾಗೆ ಕಾಂಗ್ರೆಸ್ ಹೈಕಮಾಂಡ್ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದೆ.

2009 ರಿಂದಲೂ ಬೆಂಗಳೂರು ಕೇಂದ್ರ ಬಿಜೆಪಿಯ ಹಿಡಿತದಲ್ಲಿ ಇದ್ದರೂ 2023ರ ವಿಧಾನಸಭೆ ಫಲಿತಾಂಶದಲ್ಲಿ ಕಾಂಗ್ರೆಸ್ ಕಮಲ ಪಕ್ಷಕ್ಕಿಂತ ಹೆಚ್ಚು ಮತಗಳನ್ನು ಪಡೆದಿದೆ. ಇದು ಮನ್ಸೂರ್ ಅಲಿ ಖಾನ್‌ಗೆ ಹೆಚ್ಚಿನ ಶಕ್ತಿ ತಂದುಕೊಟ್ಟಿದೆ. ಮತ್ತೊಂದು ಕಡೆ ಸತತವಾಗಿ 3 ಬಾರಿ ಬಿಜೆಪಿಯಿಂದ ಆಯ್ಕೆಯಾಗಿರುವ ಪಿ ಸಿ ಮೋಹನ್ ಕೇವಲ ಪ್ರಧಾನಿ ಮೋದಿ ಹೆಸರಲ್ಲಿ ಆಯ್ಕೆಯಾಗಿದ್ದರೆ ಹೊರತು 15 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗಿಲ್ಲ ಎಂಬ ಜನವಿರೋಧಿ ಅಲೆ ಕೂಡ ಮನ್ಸೂರ್ ಅಲಿ ಖಾನ್ ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ.

ಬಿಜೆಪಿಗೆ 2014 ರಿಂದ 2019ರ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆಯಾಗುತ್ತಿರುವುದು ಕೂಡ ಈ ಬಾರಿಯ ಚುನಾವಣೆಯಲ್ಲಿ ಸೋಲಿನ ಮುನ್ಸೂಚನೆ ಕಾಣಿಸುತ್ತಿದೆ. ಪ್ರದಾನಿ ಮೋದಿ ವರ್ಚಸ್ಸನ್ನು ನಂಬಿ ಆಯ್ಕೆಯಾಗುತ್ತಿರುವ ಪಿ ಸಿ ಮೋಹನ್ ಕ್ಷೇತ್ರಕ್ಕೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಕ್ಷೇತ್ರವು ಐಟಿ ಹಬ್‌ ಆಗಿ ಅಭಿವೃದ್ಧಿ ಹೊಂದಿರುವುದಕ್ಕೆ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರ ಕಾರಣ ಎನ್ನುತ್ತಿದ್ದಾರೆ ಕ್ಷೇತ್ರದ ಮತದಾರರು. ಬೆಂಗಳೂರಿನ ಇತರ ಭಾಗದ ಕೊಳಗೇರಿ ಕ್ಷೇತ್ರಗಳಿಗೆ ಹೋಲಿಸಿದರೆ ಸರ್ವಜ್ಞ ನಗರ, ಶಾಂತಿ ನಗರ, ಗಾಂಧಿ ನಗರ ಕ್ಷೇತ್ರಗಳಲ್ಲಿನ ಕೊಳಗೇರಿಗಳಲ್ಲಿ ಮೂಲಸೌಕರ್ಯ ಕೊರತೆ ಹೆಚ್ಚಾಗಿದೆ. ಹಾಲಿ ಸಂಸದರು ಇವುಗಳ ಅಭಿವೃದ್ಧಿಗೆ ಕಳೆದ 15 ವರ್ಷದಲ್ಲಿ ಯಾವುದೇ ಗಮನ ಹರಿಸಿಲ್ಲ.

ಚುನಾವಣಾ ಪ್ರಚಾರಕ್ಕೆ ತೆರಳುತ್ತಿರುವ ಹಲವು ಸಂದರ್ಭದಲ್ಲಿ ಸಂಸದ ಪಿ ಸಿ ಮೋಹನ್‌ ವಿರುದ್ಧವೇ ಬಿಜೆಪಿ ಪಕ್ಷದ ಕಾರ್ಯಕರ್ತರು ತಿರುಗಿಬೀಳುತ್ತಿದ್ದಾರೆ. ಬೆಂಗಳೂರಿನ ಶಾಂತಿನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಸಂಸದರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದ್ದರು.

”ನಿಮ್ಮನ್ನು ಮೂರು ಬಾರಿ ಗೆಲ್ಲಿಸಿ ಸಂಸದರಾಗಿ ಲೋಕಸಭೆಗೆ ಕಳಿಸಿದ್ದೇವೆ. ಕ್ಷೇತ್ರದ ಸಂಸದರಾಗಿ ನಮ್ಮ ಪ್ರದೇಶಕ್ಕೆ ಏನು ಅಭಿವೃದ್ದಿ ಮಾಡಿದ್ದೀರಾ? ನಿಮ್ಮ ಸಾಧನೆ ಏನು? ನಮ್ಮ ಪ್ರದೇಶಕ್ಕೆ ಈ ಮೊದಲು ಎಷ್ಟು ಬಾರಿ ಬಂದಿದ್ದೀರಾ? ಬಡವರಿಗಾಗಿ ಏನು ಮಾಡಿದ್ದೀರಾ?” ಎಂದು ಹಲವು ಪ್ರಶ್ನೆಗಳನ್ನು ಬಿಜೆಪಿ ಕಾರ್ಯಕರ್ತರು ಕೇಳಿದ್ದರು. ಇವೆಲ್ಲವೂ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ತಿರುಗುಬಾಣವಾಗುವ ಸಾಧ್ಯತೆಯಿದೆ.

ಐವರು ಕಾಂಗ್ರೆಸ್ ಶಾಸಕರು, ಮೂವರು ಮಂತ್ರಿಗಳು

ಎಂಟು ವಿಧಾನಸಭಾ ಕ್ಷೇತ್ರಗಳಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಂತಿನಗರ, ಗಾಂಧಿನಗರ, ಸರ್ವಜ್ಞನಗರ, ಶಾಂತಿನಗರ, ಚಾಮರಾಜಪೇಟೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ರಾಜಾಜಿನಗರ ಹಾಗೂ ಮೀಸಲು ಕ್ಷೇತ್ರಗಳಾದ ಮಹದೇವಪುರ ಹಾಗೂ ಸಿ ವಿ ರಾಮನ್ ನಗರ ಬಿಜೆಪಿ ತೆಕ್ಕೆಯಲ್ಲಿವೆ.

ಅಲ್ಲದೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್ ಸರ್ಕಾರದಲ್ಲಿ ಮಹತ್ವದ ಖಾತೆ ನಿರ್ವಹಿಸುತ್ತಿದ್ದಾರೆ. ಎನ್‌ ಎ ಹ್ಯಾರಿಸ್ ಬಿಡಿಎ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ಶಕ್ತಿ, ಸಾಮರ್ಥ್ಯ ಸಾಬೀತುಪಡಿಸಬೇಕಾದ ಹೊಣೆಗಾರಿಕೆ ಸಚಿವರ ಮೇಲಿದೆ. ಇವೆಲ್ಲವೂ ಮನ್ಸೂರ್‌ ಅಲಿ ಖಾನ್ ಅವರಿಗೆ ಅನುಕೂಲವಾಗುವ ಸಾಧ್ಯತೆ ದಟ್ಟವಾಗಿವೆ.

ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕರಾದ ಎನ್‌ ಎ ಹ್ಯಾರಿಸ್, ರಿಜ್ವಾನ್ ಅಹಮದ್ ಅವರು ತಮ್ಮ ಸಮುದಾಯದ ಮತಗಳನ್ನು ಕ್ರೋಢಿಕರಿಸಿದರೆ ಮುಸ್ಲಿಂ ಮತಗಳು, ಮತ್ತೊಬ್ಬ ಸಚಿವರಾದ ಕೆ ಜೆ ಜಾರ್ಜ್ ಕ್ರಿಶ್ಚಿಯನ್‌ ಮತಗಳನ್ನು ಸೆಳೆದರೆ ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗದೆ ಕಾಂಗ್ರೆಸ್ ಪರ ನಿಲ್ಲಲು ಸಾಧ್ಯವಾಗಿ ಮನ್ಸೂರ್‌ ಅಲಿ ಖಾನ್ ಗೆಲುವಿನ ಹಾದಿ ಸುಗಮವಾಗುತ್ತದೆ.

ಅನ್ಯ ಭಾಷಿಕರೆ ಅಧಿಕ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪುರುಷರು ಹಾಗೂ ಮಹಿಳೆಯರು ಒಳಗೊಂಡ ಒಟ್ಟು 23 ಲಕ್ಷ ಮತದಾರರಿದ್ದಾರೆ. ಮುಸ್ಲಿಂ, ಕ್ರೈಸ್ತ, ದಲಿತ ಹಾಗೂ ಹಿಂದುಳಿದ ವರ್ಗದ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕೆಲವು ಅಂಕಿಅಂಶಗಳ ಪ್ರಕಾರ ಜಾತಿವಾರು ಪ್ರಾತಿನಿಧ್ಯದಲ್ಲಿ 3.2 ಲಕ್ಷ ಮುಸ್ಲಿಮರು, ಎಸ್‌ಸಿ, ಎಸ್‌ಟಿ 4.40 ಲಕ್ಷ, 1.2 ಲಕ್ಷ ಕ್ರೈಸ್ತರು, ಹಾಗೂ ಬಲಿಜಿಗ, ಗೊಲ್ಲ, ಕುರುಬ, ತಿಗಳ, ವಿಶ್ವಕರ್ಮ, ಮಡಿವಾಳ, ಕಮ್ಮ ಇತ್ಯಾದಿ ಹಿಂದುಳಿದ ವರ್ಗದವರು ಸುಮಾರು 10 ಲಕ್ಷ ಜನರಿದ್ದಾರೆ. ಶಿವಾಜಿನಗರ, ಹಲಸೂರು, ಶೇಷಾದ್ರಿಪುರ, ಗಾಂಧಿನಗರ ಭಾಗದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಲಸೆ ಬಂದಿರುವ ತೆಲುಗು ಬಾಷಿಕರು ಕೂಡ ಈ ಕ್ಷೇತ್ರದಲ್ಲಿ ಅಧಿಕವಾಗಿದ್ದಾರೆ.

BNg central caste

BNg central caste 1

BNg central caste 2

BNg central caste 3

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X