ಭೂಕಬಳಿಕೆ, ಮೀನುಗಾರಿಕೆ ವ್ಯವಹಾರದ ಮೂಲಕ ಅಕ್ರಮ ಹಣ ವರ್ಗಾವಣೆ, ಭಯದ ವಾತಾವರಣ ಸೃಷ್ಟಿಸಿ ಜನರ ಮೇಲೆ ದಬ್ಬಾಳಿಕೆ ಆರೋಪ ಹೊತ್ತಿರುವ ಟಿಎಂಸಿಯಿಂದ ಅಮಾನತಾಗಿರುವ ಶೇಖ್ ಷಹಜಹಾನ್ ಅವರನ್ನು ತನ್ನ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಯ (ಇಡಿ) ಮನವಿ ಮಾಡಿದೆ.
ಷಹಜಹಾನ್ ವಿರುದ್ಧದ ಪಿಎಂಎಲ್‌ಎ (ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ) ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಇಡಿ ಅಫಿಡವಿಟ್ ಸಲ್ಲಿಸಿದೆ. “ಷಹಜಹಾನ್ ಮತ್ತು ಇತರರು – ಹಲ್ಲೆ, ಕೊಲೆ, ಕೊಲೆ ಬೆದರಿಕೆ, ಸುಲಿಗೆ, ಇತ್ಯಾದಿ ಸಂಘಟಿತ ಕೃತ್ಯಗಳಲ್ಲಿ ತೊಡಗುವ ಮೂಲಕ ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅಲ್ಲದೆ, ಸಾರ್ವಜನಿಕರ ಭೂಮಿಯನ್ನು ಕಬಳಿಸಿದ್ದಾರೆ ಹಾಗೂ ಅಕ್ರಮ ಹಣದ ಲಾಭ/ಸವಲತ್ತುಗಳನ್ನು ಪಡೆದಿದ್ದಾರೆ” ಎಂದು ಇಡಿ ವಿವರಿಸಿದೆ.
ಷಹಜಹಾನ್ ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಸಬೀನಾ ಎಂಬ ಮೀನುಗಾರಿಕೆ ಕಂಪನಿಯನ್ನು ನಡೆಸುತ್ತಿದ್ದರು. ಆ ಕಂಪನಿಯ ಮ್ಯಾನೇಜರ್ ಅನ್ನು ಇಡಿ ವಿಚಾರಣೆಗೆ ಒಳಪಡಿಸಿದ್ದು; “2019ರಲ್ಲಿ, ಷಹಜಹಾನ್ ಮೀನು ಮಾರುಕಟ್ಟೆಯಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ತಮ್ಮ ಸಂಸ್ಥೆಯ ಮೂಲಕ ಮಾತ್ರ ಮೀನು ಮಾರಾಟ ಮಾಡುವಂತೆ ಮಾರುಕಟ್ಟೆಯಲ್ಲಿನ ಎಲ್ಲ ಮೀನು ಮಾರಾಟಗಾರರಿಗೆ ಬೆದರಿಕೆ ಹಾಕಿದರು. ಅವರ ಮಾತು ಕೇಳದಿದ್ದರೆ, ವ್ಯಾಪಾರ ಬಂದ್ ಮಾಡುವುದಾಗಿ ಬೆದರಿಕೆ ಹಾಕಿದರು. ಸಬೀನಾ ಕಂಪನಿಯು 50% ಸೀಗಡಿಗಳನ್ನು ನೇರವಾಗಿ ಮೀನು ಮಾರಾಟಗಾರರು/ರೈತರಿಂದ, 10-15% ಸೀಗಡಿಗಳನ್ನು ಅವರ (ಷಹಜಹಾನ್) ಸ್ವಂತ ಕೃಷಿಭೂಮಿಯಿಂದ ಮತ್ತು 35-40% ಸೀಗಡಿ ಸಾಕಣೆಯಿಂದ ಅಕ್ರಮವಾಗಿ ಗ್ರಾಮಸ್ಥರಿಂದ ಪಡೆದುಕೊಳ್ಳುತ್ತಾರೆ ಎಂದು ಮ್ಯಾನೇಜರ್ ವಿವರಿಸಿದ್ದಾರೆ” ಎಂದು ಇಡಿ ಹೇಳಿದೆ.
ಫೆಬ್ರವರಿಯಲ್ಲಿ ಷಹಜಹಾನ್ ಬಂಧನಕ್ಕೆ ಒತ್ತಾಯಿಸಿ ಸಂದೇಶಖಾಲಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ, ಷಹಜಹಾನ್ ಮತ್ತು ಅವರ ಬೆಂಬಲಿಗರು ಎಕರೆಗಟ್ಟಲೆ ಕೃಷಿಭೂಮಿಯನ್ನು ಜನರಿಂದ ಹೇಗೆ ಕಿತ್ತುಕೊಂಡು ಅದನ್ನು ಮೀನುಗಾರಿಕೆಗೆ ಪರಿವರ್ತಿಸಿದರು ಎಂಬುದು ಪ್ರಮುಖ ಆರೋಪಗಳಲ್ಲಿ ಒಂದಾಗಿದೆ.
“ಶಾಹಜಹಾನ್ ತನ್ನ ಬೆಂಬಲಿಗರ ತಂಡವನ್ನು ಹೊಂದಿದ್ದರು. ಆ ತಂಡವು ಷಹಜಹಾನ್ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಿಂದ ಸಬೀನಾ ಕಂಪನಿಗೆ ಸೀಗಡಿ ಮಾರಾಟ ಮಾಡುತ್ತಿದ್ದರು. ವಾಸ್ತವದಲ್ಲಿ, ಈ ಜನರು ತಮ್ಮ ಹೆಸರಿನಲ್ಲಿ ಯಾವುದೇ ಭೂಮಿಯನ್ನು ಹೊಂದಿಲ್ಲ. ಅವರೆಲ್ಲರ ಬ್ಯಾಂಕ್ ಖಾತೆಗಳನ್ನು ಷಹಜಹಾನ್ ನಿಯಂತ್ರಿಸಿದರು ಮತ್ತು ನಿರ್ವಹಿಸುತ್ತಿದ್ದರು. ಸಬೀನಾ ಕಂಪನಿಯಿಂದ ಬರುತ್ತಿದ್ದ ಹಣವನ್ನು ಅವರೆಲ್ಲರೂ ಷಹಜಹಾನ್ ಸೂಚನೆಯ ಮೇರೆಗೆ ತಮ್ಮ ಹೆಸರಿನಲ್ಲಿ ಜಮೀನು ಖರೀದಿಸಲು ಬಳಸಿದ್ದಾರೆ. ಅವು ನಿಜವಾದ ಬೇನಾಮಿ ಆಸ್ತಿಗಳಲ್ಲಿವೆ” ಎಂದು ಅಫಿಡವಿಟ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ ತಿಳಿಸಿದೆ.
ಷಹಜಹಾನ್‌ನೊಂದಿಗೆ ವ್ಯವಹರಿಸಿದ ರಫ್ತು ಕಂಪನಿಯ ಪಾಲುದಾರನ ಹೇಳಿಕೆಗಳನ್ನು ಇಡಿ ಉಲ್ಲೇಖಿಸಿದೆ: “ಶಾಹಜಹಾನ್ 2020-21ರಲ್ಲಿ ನನ್ನ ಕಚೇರಿಗೆ ಬಂದರು. ಅವರು ನನ್ನ ಸಂಸ್ಥೆಯೊಂದಿಗೆ ವ್ಯವಹಾರ ನಡೆಸಲು ಬಯಸಿರುವುದಾಗಿ ತಿಳಿಸಿದರು. ನಾವು ಮಾರ್ಚ್ 2021ರಿಂದ ವ್ಯಾಪಾರ ಆರಂಭಿಸಿದೆವು. ಕೆಲ ದಿನಗಳ ನಂತರ, ಅವರು ನನ್ನ ಕಚೇರಿಗೆ ಬಂದು ‘ಕೆಲವು ನಕಲಿ ರಶೀದಿಗಳನ್ನು ನೀಡಬೇಕು ಮತ್ತು ನಗದು ಹಣ ನೀಡುತ್ತೇನೆ, ಆ ಮೊತ್ತವನ್ನು ನನ್ನ ಸಂಸ್ಥೆಯಿಂದ ಸಬೀನಾ ಕಂಪನಿಯ ಖಾತೆಗೆ ವರ್ಗಾಯಿಸಬೇಕು. ಆ ಮೊತ್ತವನ್ನು ಸೀಗಡಿಗಳ ಮಾರಾಟಕ್ಕಾಗಿ ನಡೆದ ನಿಜವಾದ ವಹಿವಾಟು ಎಂದು ತೋರಿಸಬೇಕು’ ಎಂದು ಕೇಳಿದರು. ಆದರೆ, ನಾನು ಅದನ್ನು ನಿರಾಕರಿಸಿದೆ. ಅವರು ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು” ಎಂದು ಪಾಲುದಾರ ಕಂಪನಿಯ ಮುಖ್ಯಸ್ಥೆ ಹೇಳಿದ್ದಾರೆ ಎಂಬುದನ್ನು ಇಡಿ ವಿವರಿಸಿದೆ.
ಜನವರಿ 5ರಂದು ಸಂದೇಶ್‌ಖಾಲಿಯಲ್ಲಿರುವ ಷಹಜಹಾನ್ ನಿವಾಸದಲ್ಲಿ ಶೋಧ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆ ಷಹಜಹಾನ್ ಬೆಂಬಲಿಗರು ದಾಳಿ ನಡೆಸಿದ್ದರು. ನಂತರ, ಆತ ಒಂದು ತಿಂಗಳ ಕಾಲ ತಲೆ ಮರೆಸಿಕೊಂಡಿದ್ದರು. ಜನವರಿ 8 ರಂದು, ಸಂದೇಶ್‌ಖಾಲಿಯ ಹಲವಾರು ಮಹಿಳೆಯರು ಆತನನ್ನು ಬಂಧಿಸುವಂತೆ ಒತ್ತಾಯಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆತನ ಬೆಂಬಲಿಗರು ಹಲವು ವರ್ಷಗಳಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಫೆಬ್ರವರಿ 29ರಂದು ಷಹಜಹಾನ್ ಅವರನ್ನು ಬಂಧಿಸಲಾಯಿತು. ಆತನನ್ನು ಪಕ್ಷದಿಂದ ಟಿಎಂಸಿ ಅಮಾನತುಗೊಳಿಸಿತು.