ಜನರಲ್ ಬಿಪಿನ್ ರಾವತ್ ನಿಧನದ ನಂತರ ನೀಲಗಿರಿಗೆ ಭೇಟಿ ನೀಡದೆ, ಈಗ ಚುನಾವಣೆ ಸಂದರ್ಭದಲ್ಲಿ ನೀಲಗಿರಿಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ಸಂಸದ ಎ ರಾಜಾ ವಾಗ್ದಾಳಿ ನಡೆಸಿದರು.
ಬುಧವಾರ ನೀಲಗಿರಿಯಲ್ಲಿ ಪ್ರಚಾರ ನಡೆಸಿದ ಡಿಎಂಕೆ ಸಂಸದ ಎ ರಾಜಾ ಅವರು, “ಪ್ರಧಾನಿಯವರು ಬಿಜೆಪಿಗೆ ಮತ ಕೇಳಲು ನೀಲಗಿರಿಗೆ ಬರುತ್ತಿದ್ದಾರೆ. ಆದರೆ ದೇಶದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ನಂತರ ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ” ಎಂದು ಟೀಕಿಸಿದರು.
ನೀಲಗಿರಿ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿದಿರುವ ಎ ರಾಜಾ, “ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಬಿಪಿನ್ ರಾವತ್ ಸಾವನ್ನಪ್ಪಿದ್ದಾಗ ಅಪಘಾತ ಸ್ಥಳಕ್ಕೆ ಧಾವಿಸಿದ್ದಾರೆ. ಜನರಲ್ ರಾವತ್, ಅವರ ಪತ್ನಿ ಮತ್ತು ವಿಮಾನದಲ್ಲಿದ್ದ ಇತರ 11 ರಕ್ಷಣಾ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ತುಮಕೂರು | ಸಂವಿಧಾನ ಉಳಿಸಲು ಬಿಜೆಪಿ ಸೋಲಿಸಿ; ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್
“ನಮ್ಮ ದೇಶದ ಪಡೆಗಳ ಮುಖ್ಯಸ್ಥರು ಮೃತಪಟ್ಟರು. ಪ್ರಧಾನಿ ಅಥವಾ ರಕ್ಷಣಾ ಸಚಿವರು ಇಲ್ಲಿಗೆ ಬಂದಿದ್ದೀರಾ? ನಾನು ನಿಮಗೆ (ಪಿಎಂ ಮೋದಿ) ಸವಾಲು ಹಾಕುತ್ತೇನೆ. ಬಿಪಿನ್ ರಾವತ್ ಇಲ್ಲಿ ನಿಧನರಾದಾಗ ನೀವು ದೆಹಲಿಯಲ್ಲಿ ಯಾವ ಪ್ರಮುಖ ಕೆಲಸ ಮಾಡಿದ್ದೀರಿ” ಎಂದು ಎ ರಾಜಾ ಪ್ರಶ್ನಿಸಿದರು.
“ನೀವು ವಿದೇಶದಲ್ಲಿ ಇದ್ದೀರಾ? ಇಲ್ಲ. ಆದರೆ ಸಿಎಂ ಎಂಕೆ ಸ್ಟಾಲಿನ್ ಅವರು ಇಲ್ಲಿಗೆ ಧಾವಿಸಿ ಗೌರವ ಸಲ್ಲಿಸಿದರು. ನಮಗೆ ದೇಶಭಕ್ತಿ ಇಲ್ಲ ಎಂದು ಹೇಳಬೇಡಿ. ನಾವು ಹಿಂದಿ ಮಾತನಾಡುವುದಿಲ್ಲ. ಮೋದಿ ನಮಗೆ ದೇಶಭಕ್ತಿ ಕಲಿಸಬೇಕಾಗಿಲ್ಲ,” ಎಂದು ಕಿಡಿಕಾರಿದರು. “ಬಿಜೆಪಿಯ ದೇಶಪ್ರೇಮ ‘ನಿರ್ದಿಷ್ಟ ಧರ್ಮ’ ಮತ್ತು ‘ಭಾಷೆ’ಗಾಗಿ ಇದೆ. ಇಂತಹ ದೇಶಭಕ್ತಿಯನ್ನು ತಮಿಳುನಾಡು ಬೆಂಬಲಿಸುವುದಿಲ್ಲ” ಎಂದರು.
ಡಿಸೆಂಬರ್ 8, 2021 ರಂದು ಹೆಲಿಕಾಪ್ಟರ್‌ನಲ್ಲಿ ಆಗಿನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಜನರು ಪ್ರಯಾಣಿಸುತ್ತಿದ್ದಾಗ ತಮಿಳುನಾಡಿನ ಕುನೂರ್ ಬಳಿ ಪತನಗೊಂಡಿದೆ. ಇನ್ನು ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19, 2024 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.